ADVERTISEMENT

ಗ್ರಾಮೀಣರ ಒಲವಿನತ್ತ ಸಂಕೇತ್‌ ಚಿತ್ತ

ವಿರಾಜಪೇಟೆ: ವಿಸ್ತೀರ್ಣದಲ್ಲಿ ದೊಡ್ಡ ಕ್ಷೇತ್ರ, ಅಭ್ಯರ್ಥಿಗಳಿಗೂ ಪ್ರಚಾರದ ಸವಾಲು

​ಪ್ರಜಾವಾಣಿ ವಾರ್ತೆ
Published 4 ಮೇ 2018, 10:28 IST
Last Updated 4 ಮೇ 2018, 10:28 IST
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಸಂಕೇತ್‌ ಪೂವಯ್ಯ ಅವರ ಪ್ರಚಾರ ವೈಖರಿ
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಸಂಕೇತ್‌ ಪೂವಯ್ಯ ಅವರ ಪ್ರಚಾರ ವೈಖರಿ   

ಮಡಿಕೇರಿ: ವಿಸ್ತೀರ್ಣದಲ್ಲಿ ದೊಡ್ಡ ಕ್ಷೇತ್ರಗಳಲ್ಲಿ ಒಂದಾಗಿರುವ ವಿರಾಜಪೇಟೆಯಲ್ಲಿ ಅಭ್ಯರ್ಥಿಗಳಿಗೆ ಪ್ರಚಾರ ಕಾರ್ಯ ದೊಡ್ಡ ಸವಾಲಾಗಿದೆ. ಅದರಲ್ಲೂ ಬೆಟ್ಟಗುಡ್ಡ ಹಾಗೂ ಕಡಿದಾದ ಪ್ರದೇಶಗಳಲ್ಲಿ ಗ್ರಾಮಗಳಿವೆ. ಅಲ್ಲದೇ ಕಾಫಿ ತೋಟಗಳ ಮಧ್ಯದಲ್ಲಿ ಒಂಟಿಮನೆ. ಅಲ್ಲಿಗೂ ಅಭ್ಯರ್ಥಿಗಳು ತೆರಳಬೇಕು. ಮತ್ತೊಂದೆಡೆ ಹಾಡಿ. – ಹೀಗೆ ಅಭ್ಯರ್ಥಿಗಳು ಮನೆಮನೆಗೆ ತೆರಳಿ ಪ್ರಚಾರ ನಡೆಸುವುದೇ ಕಷ್ಟವಾಗಿದೆ. ಆದರೂ, ಮನೆ ಭೇಟಿ ಕೈಬಿಟ್ಟಿಲ್ಲ.

ವಿರಾಜಪೇಟೆ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಸಂಕೇತ್‌ ಪೂವಯ್ಯ ಅವರು ಮಂಗಳವಾರ ಇಡೀ ದಿವಸ ಬಿಡುವಿಲ್ಲದೇ ಪ್ರಚಾರ ನಡೆಸಿದರು. ಸಂಕೇತ್‌ ಅವರೇ ಪಕ್ಷದ ಜಿಲ್ಲಾ ಅಧ್ಯಕ್ಷರೂ ಆಗಿರುವ ಕಾರಣ ಕ್ಷೇತ್ರದ ಸಂಪೂರ್ಣ ಪರಿಚಯವಿದೆ. ಕ್ಷೇತ್ರದಲ್ಲಿ ಒಂದು ಸುತ್ತಿನ ಪ್ರಚಾರ ಪೂರ್ಣಗೊಳಿಸಿರುವ ಅವರು, ಕೊನೆಯ ಸುತ್ತಿನ ಪ್ರಚಾರಕ್ಕೆ ಇಳಿದಿದ್ದಾರೆ.

ಅಂದು ಬೆಳಿಗ್ಗೆ ನಾಲ್ಕು ಗಂಟೆಯ ಸುಮಾರಿಗೆ ಎದ್ದು, 5 ಗಂಟೆ ವೇಳೆಗೆಲ್ಲಾ ಪ್ರಚಾರಕ್ಕೆ ಅಣಿಯಾದರು. ಅದೇ ವೇಳೆಗೆ ತಮ್ಮ ಬೆಂಬಲಿಗರೂ ವಾಹನದೊಂದಿಗೆ ಹಾಜರಾಗಿದ್ದರು.

ADVERTISEMENT

ತಮ್ಮ ಮನೆಯ ಬಳಿ ಇನ್ನೂ ಮಂಜು ಮುಸುಕಿದ ವಾತಾವರಣ. ರಸ್ತೆಯಲ್ಲೂ ವಾಹನಗಳ ಸಂಚಾರ ವಿರಳವಾಗಿತ್ತು. ಅಲ್ಲಿಂದ ನೇರವಾಗಿ ಬೆಟ್ಟ ಪ್ರದೇಶದಲ್ಲಿರುವ ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಜಿಲಕ್ಕೆ ಬೆಳಿಗ್ಗೆ 6.30ರ ಸುಮಾರಿಗೆ ಹಾಜರಾದರು.

ಪಕ್ಕದಲ್ಲಿದ್ದ ಪುಟ್ಟ ಹೋಟೆಲ್‌ವೊಂದರಲ್ಲಿ ಟೀ, ತಿಂಡಿ ಪೂರ್ಣಗೊಳಿಸಿ ಪ್ರಚಾರಕ್ಕೆ ಇಳಿದರು. ಕುಂಜಿಲ ಗ್ರಾಮಸ್ಥರೂ ಸಂಕೇತ್‌ ಪೂವಯ್ಯ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ಗ್ರಾಮದ ಮುಖಂಡರೊಬ್ಬರ ಮನೆಗೆ ತೆರಳಿದ ಅವರು, ಪ್ರಚಾರ ನಡೆಸುವ ಜತೆಗೆ ಗ್ರಾಮೀಣ ಪ್ರದೇಶದ ಕುಂದುಕೊರತೆಗಳನ್ನೂ ಆಲಿಸಿದರು. ಅಕ್ಕಪಕ್ಕದ ಊರಿನಲ್ಲಿ ಪ್ರಚಾರ ಮುಗಿಸುವ ವೇಳೆಗೆ ಸೂರ್ಯ ನೆತ್ತಿಯ ಮೇಲೆ ಬಂದಾಗಿತ್ತು. ಆಗ ರಸ್ತೆಬದಿಯ ಮನೆಗಳತ್ತ ಮುಖ ಮಾಡಿದ ಸಂಕೇತ್‌, ಈ ಬಾರಿ ಜೆಡಿಎಸ್‌ ಬೆಂಬಲಿಸುವಂತೆ ಕೋರಿದರು.

ಅದೇ ದಿನ ಮಧ್ಯಾಹ್ನ ಅಮ್ಮತ್ತಿ, ಸಿದ್ದಾಪುರ, ಮಾಲ್ದಾರೆ, ವಿರಾಜಪೇಟೆಯಲ್ಲೂ ಭರ್ಜರಿ ಪ್ರಚಾರ ನಡೆಸಿದರು. ಸಂಜೆ 6 ಗಂಟೆಯ ತನಕವೂ ಪ್ರಚಾರದ ಉತ್ಸಾಹ ಮಾತ್ರ ಕುಗ್ಗಿರಲಿಲ್ಲ.

‘ಜೆಡಿಎಸ್‌ ಅಧಿಕಾರಕ್ಕೆ ಬಂದ 24 ತಾಸಿನಲ್ಲಿ ಕಾಫಿ ಬೆಳೆಗಾರರ ಸಾಲ ಮನ್ನಾ ಮಾಡುತ್ತೇವೆ. ಎಚ್‌.ಡಿ. ಕುಮಾರಸ್ವಾಮಿ ಅವರೂ ವರ್ಷದ ಹಿಂದೆಯೇ ಭರವಸೆ ನೀಡಿದ್ದಾರೆ’ ಎಂದು ಬೆಳೆಗಾರರ ಮತಬುಟ್ಟಿಗೆ ಕೈಹಾಕಿದ್ದಾರೆ. ಅಷ್ಟೇ ಅಲ್ಲದೇ ಹಾಡಿಗಳಿಗೂ ಸೌಕರ್ಯದ ಭರವಸೆ ನೀಡಿದರು. ಇದೇ ವೇಳೆ ‘ಪ್ರಜಾವಾಣಿ’ ಜತೆಗೆ ಮಾತನಾಡಿದ ಸಂಕೇತ್‌, ‘ಇಡೀ ಕ್ಷೇತ್ರ ಸುತ್ತಾಡಿದ್ದೇನೆ. ಕ್ಷೇತ್ರದಲ್ಲಿ ಮೊದಲ ಬಾರಿಗೆ ಜೆಡಿಎಸ್‌ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ’ ಎಂದು ಸಂತಸ ಹಂಚಿಕೊಂಡರು.

‘ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುವುದರಲ್ಲಿ ಅನುಮಾನ ಇಲ್ಲ. ಆರಂಭದಲ್ಲಿ ತ್ರಿಕೋನ ಸ್ಪರ್ಧೆಯಿದ್ದರೂ ಈಗ ಜೆಡಿಎಸ್‌– ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. 2008 ಹಾಗೂ 2013ರಲ್ಲಿ ಎರಡು ಬಾರಿ ಗೆದ್ದಿರುವ ಬೋಪಯ್ಯ ಹೇಳಿಕೊಳ್ಳುವ ಅಭಿವೃದ್ಧಿ ಕೆಲಸ ಮಾಡಿಲ್ಲ. ಆನೆ, ಮಾನವ ಸಂಘರ್ಷ ತಡೆಗೂ ಕ್ರಮ ಕೈಗೊಂಡಿಲ್ಲ. ಅರಣ್ಯ ಸಚಿವರಾಗಿದ್ದ ರಮನಾಥ್‌ ರೈ ಸಹ ಜಿಲ್ಲೆಯತ್ತ ಮುಖಮಾಡಲಿಲ್ಲ. ರಾಷ್ಟ್ರೀಯ ಪಕ್ಷಗಳ ಕಾರ್ಯ ವೈಖರಿಯಿಂದ ಜನರು ಬೇಸತ್ತಿದ್ದಾರೆ’ ಎಂದು ದೂರಿದರು.

‘ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಏಳು ಬಾರಿ, ಬಿಜೆಪಿಗೆ ನಾಲ್ಕು ಬಾರಿ ಅವಕಾಶ ಸಿಕ್ಕಿದೆ. ಆದರೆ, ಸಮಸ್ಯೆಗಳಿಗೆ ಮಾತ್ರ ಮುಕ್ತಿ ಸಿಕ್ಕಿಲ್ಲ. ಸಾಲಕ್ಕೆ ಹೆದರಿ ಸಣ್ಣ ಬೆಳೆಗಾರರು ಬಂದೂಕಿನಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೃಷಿಕರ ಜೀವನಮಟ್ಟ ಸುಧಾರಣೆ ಆಗಬೇಕಾದರೆ ಸಾಲ ಮನ್ನಾ ಅನಿವಾರ್ಯ. ಹೀಗಾಗಿ, ಎಚ್‌.ಡಿ. ದೇವೇಗೌಡ ಹಾಗೂ ಕುಮಾರ ಸ್ವಾಮಿ ಕೈಬಲಪಡಿಸಲು ಕ್ಷೇತ್ರದ ಜನರು ನಿರ್ಧರಿಸಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

**
ಮೊದಲ ಬಾರಿಗೆ ಕ್ಷೇತ್ರದಲ್ಲಿ ಜೆಡಿಎಸ್‌ ಪರವಾದ ಅಲೆಯಿದೆ. ಎಚ್‌.ಡಿ. ಕುಮಾರಸ್ವಾಮಿ ಅವರ ಕೈಬಲಪಡಿಸಲು ಮತದಾರರು ನಿರ್ಧರಿಸಿದ್ದಾರೆ
– ಸಂಕೇತ್‌ ಪೂವಯ್ಯ, ಜೆಡಿಎಸ್‌ ಅಭ್ಯರ್ಥಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.