ವಿರಾಜಪೇಟೆ: ‘ಪ್ರಕೃತಿಯೆಂಬುದು ನಗರವಾಸಿಗಳಿಗೆ ಮೋಜಿನ ತಾಣವಾದರೆ, ಗ್ರಾಮೀಣರಿಗೆ ಬದುಕು ಕಟ್ಟಿಕೊಟ್ಟ ನೆಚ್ಚಿನ ತಾಣ. ಇನ್ನೂ ಯುವ ವಿದ್ಯಾರ್ಥಿಗಳಿಗಾದರೋ ಸಾಹಸದೊಂದಿಗೆ ಅರಿವನ್ನು ಮೂಡಿಸುವ ರೋಚಕ ತಾಣ’ ಎಂಬುದು ಅನುಭವಿಕರ ಮಾತು.
ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ರೋವರ್ಸ್ ಹಾಗೂ ರೇಂಜರ್ಸ್ ಘಟಕದ ವತಿಯಿಂದ ಕರಡ ಸಮೀಪದ ಚೋಮ ಬೆಟ್ಟಕ್ಕೆ ಈಚೆಗೆ ಚಾರಣವನ್ನು ಆಯೋಜಿಸಲಾಗಿತ್ತು.
ಬೆಳಿಗ್ಗೆ ಉತ್ಸಾಹದಿಂದ ಚೋಮ ಬೆಟ್ಟದ ತಪ್ಪಲಿನಲ್ಲಿ ಬಂದು ಸೇರಿದ ವಿದ್ಯಾರ್ಥಿಗಳು ಅದರ ಬೃಹದಾಕಾರವನ್ನು ನೋಡಿ ಈ ಬೆಟ್ಟವನ್ನು ಏರಲು ತಮ್ಮಿಂದ ಸಾಧ್ಯವೆ ? ಎಂದು ತಮ್ಮಲ್ಲಿಯೆ ಪ್ರಶ್ನಿಸಿಕೊಳ್ಳಲು ಪ್ರಾರಂಭಿಸಿದರು. ಮನದಲ್ಲಿ ಮೂಡಿದ ಅನುಮಾನದ ಎಳೆಯನ್ನು ನಿರ್ಲಕ್ಷಿಸಿ, ಸ್ಫೂರ್ತಿಯುತವಾದ ಮಾತುಗಳಿಂದ ಒಬ್ಬರು ಮತ್ತೊಬ್ಬರಿಗೆ ಶಕ್ತಿ ತುಂಬಿ ಬೆಟ್ಟವನ್ನು ಹತ್ತಲು ಪ್ರಾರಂಭಿಸಿದರು.
ಬೆಟ್ಟವನ್ನು ಹತ್ತುತ್ತಿದ್ದಂತೆಯೆ ಚೋಮ ಬೆಟ್ಟದ ಅಪೂರ್ವ ಸೌಂದರ್ಯ ರಾಶಿ ವಿದ್ಯಾರ್ಥಿಗಳ ಗಮನ ಸೆಳೆಯಿತು. ಪಕೃತಿಯ ಈ ಅಪರೂಪವಾದ ಸೌಂದರ್ಯವನ್ನು ಅಸ್ವಾಧಿಸುವ ಭರದಲ್ಲಿ ಕಡಿದಾದ ಬೆಟ್ಟವನ್ನೆರುತ್ತಿರುವ ದಣಿವೂ ಕೂಡ ಮರೆಯಾಗಿ ಉತ್ಸಾಹದಿಂದ ವಿದ್ಯಾರ್ಥಿಗಳು ಮುಂದಡಿಯಿಟ್ಟರು.
ಚಾರಣದ ಹಾದಿಯಲ್ಲಿ ಕಾಲೇಜಿನ ಅಧ್ಯಾಪಕರು ಪಕೃತಿ ರಕ್ಷಣೆಯ ಮಹತ್ವ ಹಾಗೂ ಕಾಡು ಪ್ರಾಣಿಗಳಿಂದ ಅಪಾಯ ಎದುರಾದರೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ರೋವರ್ಸ್ ಹಾಗೂ ರೇಂಜರ್ಸ್‌ನ ಸಮವಸ್ತ್ರ ಸಹಿತ ವಿದ್ಯಾರ್ಥಿಗಳು ಬೆಟ್ಟವೇರುತ್ತಿದ್ದ ದೃಶ್ಯ ನೋಡುಗರ ಕಣ್ಮನ ಸೆಳೆಯುವಂತಿತ್ತು.
ಬೆಟ್ಟವನ್ನು ಏರಲು ತನ್ನಿಂದ ಸಾಧ್ಯವೇ ಎನ್ನುವ ಶಂಕೆಯ ನಡುವೆ ದಣಿವು ಆಯಾಸಗಳ ಅರಿವಿಲ್ಲದೆ, ವಿದ್ಯಾರ್ಥಿಗಳು ಬೆಟ್ಟದ ತುದಿ ತಲುಪುವಲ್ಲಿ ಯಶಸ್ವಿಯಾದರು. ನಂತರ ಬೆಟ್ಟದ ಮೇಲ್ಭಾಗದಲ್ಲಿ ಅಧ್ಯಾಪಕರುಗಳ ಮಾರ್ಗದರ್ಶನದಂತೆ ವಿದ್ಯಾರ್ಥಿಗಳು ಟೆಂಟ್ ರಚಿಸಿ ಅದರೊಳಗೆ ಕುಳಿತುಕೊಂಡು ಬೆಟ್ಟವೇರಿದ ದಣಿವನ್ನು ಪರಿಹರಿಸಿಕೊಂಡರು. ಅಲ್ಲಿಯೇ ರೋವರ್ಸ್ ಹಾಗೂ ರೇಂಜರ್ಸ್‌ಗಳು ತಾವೂ ತಂದಿದ್ದ ತಿಂಡಿತಿನಿಸನ್ನು ಎಲ್ಲರೊಂದಿಗೆ ಹಂಚಿಕೊಂಡು ತಿಂದು ಸಂಭ್ರಮಿಸಿದರು. ನಂತರ ಸಮೀಪದಲ್ಲಿ ತಾತ್ಕಾಲಿಕ ಧ್ವಜಸ್ತಂಭ ನಿರ್ಮಿಸಿ, ಪ್ರಾರ್ಥನೆಯೊಂದಿಗೆ ಸ್ಕೌಟ್ ಹಾಗೂ ಗೈಡ್‌ನ ಧ್ವಜಾರೋಹಣ ನೆರವೇರಿಸಿದರು.
ಕೊನೆಯಲ್ಲಿ ಬೆಟ್ಟ ಇಳಿಯಲು ಬೇಕಾದ ಹಾದಿಯ ಮಾಹಿತಿಯುಳ್ಳ ಚೀಟಿಯನ್ನು ಬೇರೆ ಬೇರೆ ಸ್ಥಳಗಳಲ್ಲಿ ಅಡಗಿಸಿಟ್ಟು, ವಿದ್ಯಾರ್ಥಿಗಳಿಗೆ ಆ ಗುಪ್ತ ಚೀಟಿಗಳನ್ನು ಹುಡಕಲು ಸೂಚನೆ ನೀಡಲಾಯಿತು. ಒಂದು ಬಗೆಯ ಆಟದಂತಿದ್ದ ಈ ಕಾರ್ಯದಲ್ಲಿ ವಿದ್ಯಾರ್ಥಿಗಳು ಕುತೂಹಲದಿಂದ ಭಾಗವಹಿಸಿ ಗುಪ್ತ ಚೀಟಿಯನ್ನು ಪತ್ತೆಮಾಡಿ ಬೆಟ್ಟದಿಂದ ಕೆಳಕ್ಕೆ ಇಳಿಯುವ ಹಾದಿಯನ್ನು ಹುಡುಕುತ್ತ ಸಂತೋಷ ಅನುಭವಿಸಿದರು.
ಸಂಜೆಯ ವೇಳೆಗೆ ಕರಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶಿಬಿರಕ್ಕೆ ವಿದ್ಯಾರ್ಥಿಗಳು ಬಂದು ತಲುಪಿದರು. ಆ ದಿನ ಚೋಮ ಬೆಟ್ಟದಲ್ಲಿ ಅನುಭವಿಸಿದ ರಸನಿಮಿಷಗಳನ್ನು ಮೆಲುಕು ಹಾಕುತ್ತಾ ಶಿಬಿರದ ದೈನಂದಿನ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.