ಮಡಿಕೇರಿ: ನಗರದ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಟಿಪ್ಪು ಮತ್ತು ಕೊಡವರು’ ಕೃತಿಯ ಮಂಥನ ಕಾರ್ಯಕ್ರಮವು ಟಿಪ್ಪು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತೆಗಳುವುದಕ್ಕಾಗಿಯೇ ಸೀಮಿತಗೊಂಡಂತಿತ್ತು. ಯಾವ ಅತಿಥಿಯೂ ಕೃತಿಯ ಬಗ್ಗೆ ನಾಲ್ಕಾರು ವಿಮರ್ಶಾತ್ಮಕ ಮಾತುಗಳನ್ನಾಡಲಿಲ್ಲ.
ರಂಗಭೂಮಿ ಕೊಡಗು ಪ್ರಕಾಶನವು ಹೊರತಂದಿರುವ ಅಡ್ಡಂಡ ಕಾರ್ಯಪ್ಪ ಅವರ ‘ಟಿಪ್ಪು ಮತ್ತು ಕೊಡವರು’ ಪುಸ್ತಕದ ಮಂಥನ ಕಾರ್ಯಕ್ರಮದಲ್ಲಿ ಸ್ವತಃ ಲೇಖಕರು ಸೇರಿದಂತೆ ಭಾಗವಹಿಸಿದ್ದ ಅತಿಥಿಗಳಾರೂ ಪುಸ್ತಕದ ಬಗ್ಗೆ ಮಾತುಗಳನ್ನಾಡಲಿಲ್ಲ.
ಪ್ರಾಸ್ತಾವಿಕ ಮಾತುಗಳನ್ನಾಡಿದ ಕೃತಿಕರ್ತ, ಬಿಜೆಪಿಯ ಮಾಜಿ ವಕ್ತಾರ ಅಡ್ಡಂಡ ಕಾರ್ಯಪ್ಪ ಅವರು, ಕೊಡಗಿನ ವೀರಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಜನ್ಮದಿನಾಚರಣೆ ಯನ್ನು ರಾಜ್ಯದಾದ್ಯಂತ ಆಚರಿಸದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಅವರು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಟಿಪ್ಪು ಸುಲ್ತಾನ್ ಅವರ ಜನ್ಮದಿನಾಚರಣೆಯನ್ನು ಆಚರಿಸಿದೆ ಎಂದು ಆರೋಪಿಸಿದರು.
ದೇಶದ ಮೊದಲ ಪ್ರಧಾನಿ, ಕಾಂಗ್ರೆಸ್ಸಿನ ಜವಾಹರ ಲಾಲ್ ನೆಹರೂ ಕೂಡ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರನ್ನು ಅವಮಾನಿಸಿದ್ದರು. ಜನರಲ್ ತಿಮ್ಮಯ್ಯ ಅವರ ಶಕ್ತಿ ಸಾಮರ್ಥ್ಯವನ್ನು ವಿಶ್ವಸಂಸ್ಥೆಯು ಪರಿಗಣಿಸಿ, ಸೈಪ್ರಸ್ ದೇಶಕ್ಕೆ ರಾಯಭಾರಿಯನ್ನಾಗಿ ನೇಮಿಸಿತ್ತು ಎಂದು ಸ್ಮರಿಸಿದರು. ಕೊಡವರ ಹತ್ಯೆ ಹಾಗೂ ಮತಾಂತರಕ್ಕೆ ಕಾರಣರಾಗಿರುವ ಟಿಪ್ಪು ನನ್ನು ಮಾತ್ರ ನಾವು ವಿರೋಧಿಸುತ್ತೇವೆ. ಹೊರತು, ಮುಸ್ಲಿಮರನ್ನಲ್ಲ. ಕೊಡವರು ನಿಜವಾದ ಜಾತ್ಯತೀತರಾಗಿದ್ದಾರೆ. ಡೋಂಗಿ ಜಾತ್ಯತೀತರಲ್ಲ ಎಂದು ಹೇಳಿದರು.
ಅನುಮತಿ ಏಕೆ?: ‘ನಾವಿಲ್ಲಿ ಆಯೋಜಿಸಿರುವುದು ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮ. ಇದಕ್ಕಾಗಿ ಜಿಲ್ಲಾಧಿಕಾರಿಗಳ ಅನುಮತಿ ಏಕೆ ಪಡೆಯಬೇಕು? ಈಚೆಗೆ ಕೋಲ್‌ಮಂದ್ ನಮ್ಮೆ ಆಚರಿಸಲು ಕೂಡ ಜಿಲ್ಲಾಧಿಕಾರಿಗಳ ಅನುಮತಿ ಪಡೆಯಬೇಕೆಂದು ಒತ್ತಾಯಿಸಲಾಗಿತ್ತು. ಇಲ್ಲಿನ ಹಬ್ಬ ಹರಿದಿನಗಳನ್ನು ಆಚರಿಸಲು ಏಕೆ ಅನುಮತಿ ಪಡೆಯಬೇಕು?’ ಎಂದು ಅಡ್ಡಂಡ ಕಾರ್ಯಪ್ಪ ಪ್ರಶ್ನಿಸಿದರು.
ಕೊಡಗಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲದಂತಾಗಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾತನಾಡುವವರ ಧ್ವನಿಯನ್ನು ಅಡಗಿಸುವ ಯತ್ನ ನಡೆಯುತ್ತಿದೆ. ಈ ಕಾರ್ಯಕ್ರಮವನ್ನು ಪೊಲೀಸರು ಸಂಪೂರ್ಣವಾಗಿ ವಿಡಿಯೊ ಚಿತ್ರೀಕರಣ ಮಾಡುತ್ತಿದ್ದಾರೆ. ಮುಕ್ತವಾಗಿ ಮಾತನಾಡದಂತೆ ಒತ್ತಡ ಸೃಷ್ಟಿಸುವ ಯತ್ನ ಇದಾಗಿದೆ ಎಂದು ಆರೋಪಿಸಿದರು.
ಪುಸ್ತಕ ಖರೀದಿಸಲಿಲ್ಲ: ಪುಸ್ತಕದ ಹೆಸರಿನಲ್ಲಿ ‘ಟಿಪ್ಪು’ ಹೆಸರಿರುವ ಕಾರಣ ಕೊಡವ ಸಮಾಜದವರು ಪುಸ್ತಕ ಖರೀದಿಸಲು ನಿರಾಕರಿಸಿದ್ದಾರೆ. ಕೊಡ ವರು ಅಷ್ಟರಮಟ್ಟಿಗೆ ಟಿಪ್ಪು ಬಗ್ಗೆ ದ್ವೇಷ ಹೊಂದಿದ್ದಾರೆ ಎಂದು ಕೃತಿಯ ಲೇಖಕ ಅಡ್ಡಂಡ ಕಾರ್ಯಪ್ಪ ಹೇಳಿದರು.
ಟಿಪ್ಪು ಕೇವಲ ಕೊಡವರ ಮೇಲೆ ದೌರ್ಜನ್ಯ ಮಾಡಿಲ್ಲ. ಕೊಡಗಿನ ಗೌಡ ಜನಾಂಗದವರ ಮೇಲೂ ಮಾಡಿದ್ದಾನೆ. ಇದನ್ನು ಪುಸ್ತಕದಲ್ಲಿ ಪ್ರಸ್ತಾಪಿಸಲು ಮರೆತುಬಿಟ್ಟೆ. ಮುಂದಿನ ಕೃತಿಯಲ್ಲಿ ಇದನ್ನು ಬರೆಯುತ್ತೇನೆ ಎಂದು ನುಡಿದರು.
ಪತ್ರಕರ್ತ ಬಿ.ಜಿ. ಅನಂತಶಯನ ಮಾತನಾಡಿ, ಟಿಪ್ಪು ನಡೆಸಿದ ನರಮೇಧ ಹಾಗೂ ಮತಾಂತರದಿಂದ ಆತನನ್ನು ಕೊಡಗಿನ ಜನರು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಟಿಪ್ಪುನನ್ನು ವಿರೋಧಿ ಸುವುದು ಎಂದರೆ ಮುಸ್ಲಿಮರನ್ನು ದ್ವೇಷ ಮಾಡಿ ಎಂದರ್ಥವಲ್ಲ. ಇತಿಹಾಸ ಗತಿಸಿ ಹೋಗಿದೆ, ಇಂದಿನ ಶಾಂತಿ– ಸಾಮ ರಸ್ಯವನ್ನು ಕಾಪಾಡಿಕೊಂಡು ಹೋಗೋಣ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮಂಡೇಪಂಡ ಸುಜಾ ಕುಶಾಲಪ್ಪ ಮಾತನಾಡಿ, ಮುಖ್ಯಮಂತ್ರಿ ಸಿದ್ದ ರಾಮಯ್ಯ ಟಿಪ್ಪುನನ್ನು ವೈಭವೀ ಕರಿಸುವ ಕೆಲಸ ಮಾಡಬಾರದಿತ್ತು. ಕೊಡಗಿನಲ್ಲಿ ಟಿಪ್ಪು ಜಯಂತಿ ಅವಶ್ಯಕತೆ ಇರಲಿಲ್ಲ ಎಂದು ನುಡಿದರು.
ಜಿ.ಪಂ. ಸದಸ್ಯ ಬಿಜೆಪಿಯ ಶಾಂತೆಯಂಡ ರವಿ ಕುಶಾಲಪ್ಪ ಮಾತನಾಡಿ, ರೈತರ ಕಣ್ಣೀರು ಒರೆಸದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಪ ಸಂಖ್ಯಾತರನ್ನು ಓಲೈಸುವ ಉದ್ದೇಶ ದಿಂದ ಟಿಪ್ಪು ಜಯಂತಿಗೆ ಕೈಹಾಕಿದ್ದರು. ಕೇರಳದಿಂದ ಜನರು ಬರಲಿದ್ದಾರೆ ಎಂದು ಹೇಳಿದ್ದರೂ ಜಿಲ್ಲಾಧಿಕಾರಿ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳಲಿಲ್ಲ.
ಹಿಂಸಾಚಾರ ನಡೆದು ಸಾವು– ನೋವು ಸಂಭವಿಸಿತು. ಇದಕ್ಕೆಲ್ಲ ಮುಖ್ಯಮಂತ್ರಿ ಅವರೇ ಕಾರಣ ಎಂದು ಆರೋಪಿಸಿದರು. ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಮಾತನಾಡಿ, ಕೊಡವರ ನರಮೇಧ ನಡೆಸಿರುವ ಟಿಪ್ಪು ಸುಲ್ತಾನ್ ಸ್ವೀಕಾರಾರ್ಹ ವ್ಯಕ್ತಿಯಲ್ಲ. ಇಲ್ಲಿ ಯಾವುದೇ ಕಾರಣಕ್ಕೂ ಜಯಂತಿ ಆಚರಣೆ ಬೇಡ. ಬೇಕಿದ್ದರೆ ಮೈಸೂರು, ಬೆಂಗಳೂರು, ರಾಜ್ಯದೆಲ್ಲೆಡೆ ಮಾಡಿ ಕೊಳ್ಳಲಿ ಎಂದು ಹೇಳಿದರು.
ಪೊಲೀಸ್ ಕಣ್ಗಾವಲು: ಕಾರ್ಯ ಕ್ರಮದಲ್ಲಿ ಬೆರಳಣಿಕೆಯಷ್ಟು ಜನ ಸಾರ್ವಜನಿಕರು ಮಾತ್ರ ಕಾಣಿಸಿ ಕೊಂಡರು. ಪೊಲೀಸರು ಹಾಗೂ ಮಾಧ್ಯಮದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಭಾಂಗಣದ ಹೊರಗೆ ಕೂಡ ಪೊಲೀಸರ ಬಂದೋಬಸ್ತ್ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.