ADVERTISEMENT

ತಲಕಾವೇರಿ: ಮಹಿಳೆಯರಿಗೆ ವಸ್ತ್ರಸಂಹಿತೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2012, 19:30 IST
Last Updated 28 ಜೂನ್ 2012, 19:30 IST
ತಲಕಾವೇರಿ: ಮಹಿಳೆಯರಿಗೆ ವಸ್ತ್ರಸಂಹಿತೆ
ತಲಕಾವೇರಿ: ಮಹಿಳೆಯರಿಗೆ ವಸ್ತ್ರಸಂಹಿತೆ   

ಮಡಿಕೇರಿ: ತಲಕಾವೇರಿ- ಭಾಗಮಂಡಲ ಸ್ಥಳವು ಧಾರ್ಮಿಕ ಸ್ಥಳವಾಗಿದ್ದು, ಪ್ರವಾಸಿಗರ ಮೋಜಿನ ತಾಣವಲ್ಲ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಹುಚ್ಚಾಟಗಳಿಗೆ ಕಡಿವಾಣ ಹಾಕಬೇಕು ಹಾಗೂ ಅವರಿಗೆ ವಸ್ತ್ರ ಸಂಹಿತೆ ಕಡ್ಡಾಯಗೊಳಿಸಬೇಕೆಂದು ಗುರುವಾರ ನಡೆದ ದೇವಸ್ಥಾನ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಯಿತು.

ಭಾಗಮಂಡಲದ ತ್ರಿವೇಣಿ ಸಂಗಮದ ಬಳಿ ಕಟ್ಟಡದಲ್ಲಿ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿದ ತಲಕಾವೇರಿ-ಭಗಂಡೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಈ ನಿರ್ಣಯ ಕೈಗೊಂಡರು.

ರಾಜ್ಯದ ವಿವಿಧ ಹಿಂದೂ ದೇವಸ್ಥಾನಗಳಲ್ಲಿ ಇರುವಂತೆ ಈ ದೇವಸ್ಥಾನದಲ್ಲೂ ವಸ್ತ್ರಸಂಹಿತೆ ವಿಧಿಸಲೇಬೇಕು ಎಂದು ಸದಸ್ಯರು ಒತ್ತಾಯಿಸಿದರು.

ADVERTISEMENT

ಈ ಸ್ಥಳದ ಪಾವಿತ್ರ್ಯ ಕಾಪಾಡಿಕೊಳ್ಳಬೇಕಾದರೆ ಇಲ್ಲಿಗೆ ಬರುವ ಭಕ್ತಾದಿಗಳಿಗೆ ವಸ್ತ್ರ ಸಂಹಿತೆ ವಿಧಿಸಲೇಬೇಕು. ವಿಶೇಷವಾಗಿ ಮಹಿಳೆಯರಿಗೆ ವಸ್ತ್ರ ಸಂಹಿತೆ ಜಾರಿಗೊಳಿಸಲೇಬೇಕು. ಜೀನ್ಸ್, ಟಿ-ಶರ್ಟ್, ಸ್ಲೀವ್‌ಲೆಸ್, ಸ್ಕರ್ಟ್, ಚಡ್ಡಿ ಮುಂತಾದವುಗಳನ್ನು ಧರಿಸಿದ ಮಹಿಳೆಯರನ್ನು ಭಾಗಮಂಡಲದ ಪ್ರವೇಶ ದ್ವಾರದ ಬಳಿಯೇ ತಡೆಯಲು ನಿರ್ಣಯಿಸಲಾಯಿತು.

ಸಂಪೂರ್ಣವಾಗಿ ದೇಹವನ್ನು ಮುಚ್ಚುವಂತೆ ಉಡುಪುಗಳನ್ನು ಧರಿಸಿರಬೇಕು. ಸಲ್ವಾರ್ ಕಮೀಜ್, ಸೀರೆ, ಮುಂತಾದವುಗಳಿರಲಿ. ಇದರ ಬಗ್ಗೆ ಪ್ರವೇಶ ದ್ವಾರದಲ್ಲಿ ಮಾಹಿತಿ ನೀಡುವ ಸೂಚನಾ ಫಲಕಗಳನ್ನು ಅಳವಡಿಸಲು ತೀರ್ಮಾನಿಸಲಾಯಿತು.

ಸುರಕ್ಷತಾ ಪಡೆ ರಚನೆ: ತಲಕಾವೇರಿ ಹಾಗೂ ಬ್ರಹ್ಮಗಿರಿ ಬೆಟ್ಟದ ತುದಿಯ ಮೇಲೆ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಅಕ್ರಮ ಪ್ರವೇಶ ಮಾಡುತ್ತಿದ್ದಾರೆ. ಸಾರಾಯಿ ಕುಡಿದುಕೊಂಡು ಇಡೀ ವಾತಾವರಣ  ಗಲೀಜು ಮಾಡುತ್ತಿದ್ದಾರೆ. ಇವರನ್ನು ತಡೆಯಲು ಪೊಲೀಸರನ್ನು ನೆಚ್ಚಿಕೊಂಡು ಕುಳಿತರೆ ಸಾಧ್ಯವಾಗದು. ದೇವಸ್ಥಾನದ ಸಮಿತಿ ವತಿಯಿಂದ ಸುರಕ್ಷಾ ಪಡೆ ರಚಿಸಬೇಕು ಎಂದು ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಡ್ಡಂಡ ಕಾರ್ಯಪ್ಪ ಸಲಹೆ ನೀಡಿದರು.

ಎಲ್ಲ ಕೆಲಸವನ್ನೂ ಪೊಲೀಸರಿಂದ ಅಪೇಕ್ಷಿಸುವುದು ಬೇಡ. ಇಲ್ಲಿನ ಸ್ಥಳೀಯರ ಬಳಿ ಸಾಮಾನ್ಯವಾಗಿ ಕೋವಿಗಳಿವೆ. ಅವುಗಳನ್ನು ಯುವಕರು ಹಿಡಿದುಕೊಂಡು ದೇವಸ್ಥಾನದ ಆಸುಪಾಸಿನಲ್ಲಿ ಗಸ್ತು ತಿರುಗಿದರೆ ಸಾಕು ಅಕ್ರಮ ಪ್ರವೇಶವನ್ನು ತಡೆಯಬಹುದು ಎಂದು  ವಿಧಾನಸಭಾಧ್ಯಕ್ಷ ಬೋಪಯ್ಯ ಹೇಳಿದರು.

ದೇವಸ್ಥಾನ ಸಮಿತಿಯ ಸದಸ್ಯರಾಗಿರುವ ಜಿ.ರಾಜೇಂದ್ರ ಮಾತನಾಡಿ, ಕಳೆದ ವರ್ಷ ತಲಕಾವೇರಿಯಲ್ಲಿ ಕಾಣಿಕೆ ಹುಂಡಿ ಕಳ್ಳತನವಾಗಿದ್ದು, ಇದುವರೆಗೆ ಪತ್ತೆಯಾಗಿಲ್ಲ. ತಲಕಾವೇರಿಯಲ್ಲಿ ಇನ್ನಷ್ಟು ಸುರಕ್ಷಾ ಕ್ರಮಗಳನ್ನು ಬಿಗಿಗೊಳಿಸಬೇಕಾಗಿದೆ ಎಂದರು.

ಸಭೆಯಲ್ಲಿ ಭಗಂಡೇಶ್ವರ-ತಲಕಾವೇರಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮನು ಮುತ್ತಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಎಂ.ಬಿ. ದೇವಯ್ಯ, ತಲಕಾವೇರಿಯ ಪ್ರಧಾನ ಅರ್ಚಕರಾದ ನಾರಾಯಣಾಚಾರ್, ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.