ADVERTISEMENT

ತುಂತುರು ಮಳೆ: ಬಳ್ಳಿ ನೆಡಲು ಸಕಾಲ

ಕಾಳುಮೆಣಸಿನತ್ತ ಬೆಳೆಗಾರರ ಚಿತ್ತ– ಉತ್ತಮ ಇಳುವರಿ ಮುನ್ಸೂಚನೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2018, 12:48 IST
Last Updated 4 ಜೂನ್ 2018, 12:48 IST

ನಾಪೋಕ್ಲು: ಜಿಲ್ಲೆಗೆ ಮುಂಗಾರು ಪ್ರವೇಶಿಸುತ್ತಿದ್ದಂತೆ ಕೃಷಿ ಚಟುವಟಿಕೆಗಳು ಬಿರುಸುಗೊಂಡಿದ್ದು, ಬೆಳೆಗಾರರು ಕಾಳುಮೆಣಸಿನ ಕೃಷಿಯತ್ತ ಒಲವು ತೋರುತ್ತಿದ್ದಾರೆ.

ಕಾಳುಮೆಣಸಿನ ದರದಲ್ಲಿ ಗಣನೀಯ ಕುಸಿತ ಕಂಡಿದ್ದರೂ ಕೃಷಿಕರ ಉತ್ಸಾಹ ತಗ್ಗಿಲ್ಲ. ಮೇ ತಿಂಗಳಿನಲ್ಲಿ ನಡುನಡುವೆ ಸುರಿದ ಉತ್ತಮ ಮಳೆ, ಕಾಳು ಮೆಣಸಿನ ಇಳುವರಿ ಮೇಲೆ ಉತ್ತಮ ಪರಿಣಾಮ ಬೀರಲಿದೆ ಎಂದು ಬೆಳೆಗಾರರು ಸಂತಸಗೊಂಡಿದ್ದಾರೆ.

ಹೋಬಳಿ ವ್ಯಾಪ್ತಿಯ ಕಾಫಿಯ ತೋಟಗಳಲ್ಲಿ ಉಪಬೆಳೆಯಾಗಿ ಬೆಳೆಯಲಾಗುತ್ತಿರುವ ಕಾಳುಮೆಣಸಿನ ಬಳ್ಳಿಗಳು ಚಿಗುರೊಡೆದಿದ್ದು, ಉತ್ತಮ ಇಳುವರಿ ನೀಡುವ ಮುನ್ಸೂಚನೆ ನೀಡಿವೆ. ಮುಂಗಾರು ಮಳೆ ಸಕಾಲದಲ್ಲಿ ಲಭಿಸಿದರೆ ಅಧಿಕ ಇಳುವರಿ ಸಿಗಬಹುದೆಂಬುದು ಬೆಳೆಗಾರರ ನಿರೀಕ್ಷೆ. ಇದರೊಂದಿಗೆ ಕಾಳುಮೆಣಸಿನ ಬಳ್ಳಿಗಳನ್ನು ನೆಡುವ ಕೆಲಸ ಗ್ರಾಮೀಣ ಭಾಗಗಳಲ್ಲಿ ಬಿರುಸಿನಿಂದ ಸಾಗುತ್ತಿದೆ.

ADVERTISEMENT

ಖಾಸಗಿ ನರ್ಸರಿಗಳಲ್ಲಿ ಸಿದ್ಧಪಡಿಸಲಾಗಿರುವ ಕಾಳುಮೆಣಸಿನ ಬಳ್ಳಿಗಳು ಬಿರುಸಿನಿಂದ ಮಾರಾಟವಾಗುತ್ತಿವೆ. ಬಹುತೇಕ ರೈತರು ಈಗಾಗಲೇ ನೆಟ್ಟು ಬೆಳೆಸಿರುವ ಕಾಳು ಮೆಣಸಿನ ಬಳ್ಳಿಗಳನ್ನು ಬುಡದಿಂದ ಕತ್ತರಿಸಿ ತೆಗೆದು ಮರುನಾಟಿ ಮಾಡುತ್ತಾರೆ. ನರ್ಸರಿಗಳಲ್ಲೂ ಅಧಿಕ ಪ್ರಮಾಣದಲ್ಲಿ ಗಿಡಗಳು ಲಭಿಸುತ್ತಿದ್ದು ಖಾಲಿ ಮರಗಳಿಗೆ ಬಳ್ಳಿಗಳನ್ನು ನೆಡಲು ರೈತರು ಆಸಕ್ತಿ ತೋರುತ್ತಿದ್ದಾರೆ. ಕಾಫಿಯ ತೋಟಗಳಲ್ಲಿನ ಕೃಷಿಗಿಂತ ಕಾಳು ಮೆಣಸಿನ ಕೃಷಿ ಆರ್ಥಿಕವಾಗಿ ಲಾಭದಾಯಕ ಎಂಬುದು ಬೆಳೆಗಾರರ ಅಭಿಮತ. ಹೀಗಾಗಿಯೇ ಕಾಳು ಮೆಣಸಿನ ಕೃಷಿಯತ್ತ ಕೃಷಿಕರು ಹೆಚ್ಚಿನ ಒಲವು ತೋರುತ್ತಿದ್ದಾರೆ.

ಸಮೀಪದ ಬೇತು ಗ್ರಾಮದ ತೋಟಗಾರಿಕಾ ಸಸ್ಯಕ್ಷೇತ್ರದಲ್ಲಿ ಪ್ರತಿ ವರ್ಷವೂ ಕಾಳುಮೆಣಸಿನ ಬಳ್ಳಿಗಳನ್ನು ನರ್ಸರಿಯಲ್ಲಿ ಬೆಳೆಯಲಾಗುತ್ತಿದ್ದು ಬೆಳೆಗಾರರಿಗೆ ವಿತರಿಸಲಾಗುತ್ತಿದೆ. ಈ ವರ್ಷವೂ ಕಾಳುಮೆಣಸಿನ ಬಳ್ಳಿಗಳ ನರ್ಸರಿ ಕಾರ್ಯ ನಡೆದಿದ್ದು ಆಗಸ್ಟ್ ತಿಂಗಳ ಅವಧಿಯಲ್ಲಿ ಬೆಳೆಗಾರರಿಗೆ ವಿತರಿಸಲಾಗುವುದು.

ವಿಯೆಟ್ನಾಂ ಪದ್ಧತಿಯಲ್ಲಿ ಕಾಳುಮೆಣಸಿನ ಬಳ್ಳಿಗಳನ್ನು ಇಲ್ಲಿ ಪ್ರಾಯೋಗಿಕವಾಗಿ ಬೆಳೆಯಲಾಗಿದೆ. ವೃತ್ತಾಕಾರದ ಬಲೆಯ ಸುತ್ತ ಕಾಳುಮೆಣಸಿನ ಬಳ್ಳಿಗಳನ್ನು ನೆಟ್ಟು ಬಳ್ಳಿಗಳನ್ನು ಹಬ್ಬಿಸಲಾಗುತ್ತಿದೆ. ‘ಒಂದು ಎಕರೆ ಕಾಫಿಯ ತೋಟದಲ್ಲಿ ಉಪಬೆಳೆಯಾಗಿ ಬೆಳೆದ ಕಾಳುಮೆಣಸಿನ ಬಳ್ಳಿಗಳಿಂದ ನಾಲ್ಕು ಕ್ವಿಂಟಾಲ್ ಇಳುವರಿ ಕಳೆದ ಸಾಲಿನಲ್ಲಿ ದೊರೆತಿದ್ದು ಈ ವರ್ಷವೂ ಉತ್ತಮ ಇಳುವರಿ ಲಭಿಸುವ ನಿರೀಕ್ಷೆ ಇದೆ’ ಎನ್ನುತ್ತಾರೆ ಬಲಮುರಿ ಗ್ರಾಮದ ಕೃಷಿಕ ಧರ್ಮೇಂದ್ರ.

‘ಬೇತು ಗ್ರಾಮ ವ್ಯಾಪ್ತಿಯಲ್ಲಿ ಕಾಳುಮೆಣಸಿನ ಬಳ್ಳಿಗಳಿಗೆ ಸಗಣಿ ಗೊಬ್ಬರವನ್ನು ಒದಗಿಸಿ ಉತ್ತಮ ಇಳುವರಿ ತೆಗೆಯುವ ನಿರೀಕ್ಷೆಯಲ್ಲಿದ್ದೆವು. ಕಾಡುಹಂದಿಗಳ ಉಪಟಳದಿಂದ ಸಗಣಿ ಗೊಬ್ಬರ ಪೂರೈಕೆ ಮಾಡುವುದನ್ನೇ ಸ್ಥಗಿತಗೊಳಿಸಬೇಕಾಗಿದೆ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಮತ್ತೋರ್ವ ಬೆಳೆಗಾರ ನಾರಾಯಣ.

ಕಾಡುಹಂದಿಗಳು ಕಾಳುಮೆಣಸಿನ ಬಳ್ಳಿಯ ಬುಡಗಳನ್ನು ಅಗೆದು ನಾಶಪಡಿಸುತ್ತವೆ ಎಂಬುದು ನಾರಾಯಣ ಅವರ ಅಳಲು. ಕಾಫಿತೋಟಗಳ ನಿರ್ವಹಣೆಯ ಸಮಸ್ಯೆ ಎದುರಿಸುತ್ತಿರುವ ಸಣ್ಣ ಮತ್ತು ಮಧ್ಯಮ ವರ್ಗದ ಬೆಳೆಗಾರರು ಕಾಳುಮೆಣಸಿನ ಕೃಷಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಬಿರುಸಿನ ಕೃಷಿ ಚಟುವಟಿಕೆ ಕೈಗೊಳ್ಳುತ್ತಿರುವ ದೃಶ್ಯಗಳು ಹೋಬಳಿ ವ್ಯಾಪ್ತಿಯ ಗ್ರಾಮೀಣ ಪ್ರದೇಶದಲ್ಲಿ ಕಂಡುಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.