ADVERTISEMENT

ತೂಬಿನ ಕಟ್ಟೆ ದುರಸ್ತಿಗೆ ಗ್ರಾಮಸ್ಥರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 6:43 IST
Last Updated 6 ಸೆಪ್ಟೆಂಬರ್ 2013, 6:43 IST

ಶನಿವಾರಸಂತೆ: ಸಮೀಪದ ಕೂಜಗೇರಿ ಗ್ರಾಮದ ಒಂದು ಎಕರೆ ವಿಸ್ತೀರ್ಣದ ಕೆರೆಗೆ 5 ವರ್ಷಗಳ ಹಿಂದೆ ನಿರ್ಮಿಸಿದ್ದ ನೀರಿನ ತೂಬಿನ ಕಟ್ಟೆ ಒಡೆದು ಹೋಗಿರುವುದರಿಂದ ಕೆರೆ ನೀರು ವ್ಯರ್ಥವಾಗಿ ಹರಿದುಹೋಗುತ್ತಿದೆ. 100 ಎಕರೆ ಕೃಷಿ ಗದ್ದೆಗಳಿಗೆ ನೀರುಣಿಸುವ ಸಾಮರ್ಥ್ಯವಿದ್ದ ದೊಡ್ಡಕೆರೆ ಇಂದು ಬರಿದಾಗಿದೆ ಎಂದು ಕೆಲ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಗ್ರಾಮಸ್ಥರ ಕೋರಿಕೆ ಮೇರೆಗೆ ಹಿಂದಿನ ಜಿಲ್ಲಾಧಿಕಾರಿ ಅನುದಾನದಡಿಯಲ್ಲಿ ರೂ. 90 ಸಾವಿರ ವೆಚ್ಚದಲ್ಲಿ ನೀರಿನ ತೂಬು ನಿರ್ಮಾಣಗೊಂಡಿತ್ತು. ಜಿಲ್ಲಾ ಪಂಚಾಯಿತಿ ಸಹಾಯಕ ಎಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಹೋಗಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಗ್ರಾಮಸ್ಥರು ದೂರಿದ್ದಾರೆ.

ಗ್ರಾಮದ ಪ್ರಗತಿಪರ ರೈತ ಕೆ.ಟಿ. ಹರೀಶ್ ಸಲ್ಲಿಸಿರುವ ಮನವಿಗೆ ಸ್ಪಂದಿಸಿ ಮಳೆ ಹಾನಿ ಪ್ರಕೃತಿ ವಿಕೋಪ ಯೋಜನೆಯಡಿ ಸರಿಪಡಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಒಡೆದು ಹೋಗಿರುವ ನೀರಿನ ತೂಬಿನ ಕಟ್ಟೆಯ ದುರಸ್ತಿಯನ್ನು ಶೀಘ್ರ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.