ADVERTISEMENT

ಧುಮ್ಮಿಕ್ಕುತ್ತಿರುವ ಕಾನನ ಸುಂದರಿಯರು

​ಪ್ರಜಾವಾಣಿ ವಾರ್ತೆ
Published 5 ಜುಲೈ 2017, 8:52 IST
Last Updated 5 ಜುಲೈ 2017, 8:52 IST
ನಾಪೋಕ್ಲು ಸಮೀಪದ ಚೆಯ್ಯಂಡಾಣೆ ಬಳಿ ಚೇಲಾವರ ಗ್ರಾಮದಲ್ಲಿ ಮೂರು ಹಂತಗಳಲ್ಲಿ ಧುಮುಕುವ ಬಲಿಯಟ್ರ ಜಲಪಾತ
ನಾಪೋಕ್ಲು ಸಮೀಪದ ಚೆಯ್ಯಂಡಾಣೆ ಬಳಿ ಚೇಲಾವರ ಗ್ರಾಮದಲ್ಲಿ ಮೂರು ಹಂತಗಳಲ್ಲಿ ಧುಮುಕುವ ಬಲಿಯಟ್ರ ಜಲಪಾತ   

ನಾಪೋಕ್ಲು: ಕಾನನದ ಸುಂದರಿ ಚೇಲಾವರ ಜಲಪಾತದ ಚೆಲುವು ಆಸ್ವಾದಿಸಲು ಈಗ ಸುಸಮಯ. ಭೋರ್ಗರೆದು ಧುಮ್ಮಿಕ್ಕುತ್ತಿರುವ ಜಲಪಾತ ಈಗ ನಯನಮನೋಹರ.
ಮಳೆಗಾಲದಲ್ಲಿ ಮೈದುಂಬುವ ಈ ಜಲಪಾತ ಕೊಡಗಿನ ಪ್ರವಾಸಿ ನಕ್ಷೆಯಲ್ಲಿ ವಿಶೇಷ ಸ್ಥಾನ ಪಡೆದಿದೆ. ಇದನ್ನು ವೀಕ್ಷಿಸಲು ಅಪಾರ ಸಂಖ್ಯೆಯ ಪ್ರವಾಸಿಗರು ಬರುತ್ತಿದ್ದಾರೆ. ಜಿಲ್ಲೆಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಲಾವರ ಗ್ರಾಮದಲ್ಲಿ ಜಲಪಾತವನ್ನು ಏಮೆಪಾರೆ ಜಲಪಾತ ಎನ್ನುತ್ತಾರೆ.

ದಕ್ಷಿಣಕೊಡಗಿನ ವಿರಾಜಪೇಟೆಯಿಂದ 26 ಕಿ.ಮೀ. ದೂರದಲ್ಲಿರುವ ಪುಟ್ಟ ಊರು ಚೆಯ್ಯಂಡಾಣೆಗೆ ತೆರಳಿ ಅಲ್ಲಿಂದ ಕವಲು ಹಾದಿಯಲ್ಲಿ 5 ಕಿ.ಮೀ. ದೂರಕ್ಕೆ ಸಾಗಿದರೆ ನಿಸರ್ಗದ ನಡುವಿನ ಅಪೂರ್ವ ಜಲಧಾರೆಗಳ ಸೊಬಗು ಸವಿಯಬಹುದು.

ಕಾಫಿಯ ತೋಟಗಳ ನಡುವಿನ ತೂಂಗುಕೊಲ್ಲಿಯತ್ತ ಹೆಜ್ಜೆ ಹಾಕುತ್ತಿದ್ದಂತೆ ಎಡಬದಿಯ ಕಣಿವೆಯಲ್ಲಿ ಆಮೆಯ ಬೆನ್ನಿನಂತೆ ಕಾಣುವ ಕಪ್ಪು ಬಂಡೆಯ ಮೇಲಿಂದ ಸೋಮನ ನದಿ ಧರೆಗಿಳಿಯುತ್ತಿರುವುದು ಕಂಡುಬರುತ್ತದೆ. ಎಡಬದಿಯಲ್ಲಿರುವ ಕಾಫಿಯ ತೋಟಗಳ ನಡುವೆ ಸಾಗಿದರೆ ಜಲಪಾತದ ಸನಿಹಕ್ಕೆ ತಲುಪಬಹುದು.

ADVERTISEMENT

ಜಲಪಾತಕ್ಕೆ ತೆರಳಲು ಪ್ರವಾಸೋದ್ಯಮ ಇಲಾಖೆಯಿಂದ 6 ಕಿ.ಮೀ ಮಾರ್ಗದಲ್ಲಿ ₹ 3 ಕೋಟಿ ವೆಚ್ಚದಲ್ಲಿ ಈಚೆಗೆ ಕಾಂಕ್ರೀಟ್‌ ರಸ್ತೆ ನಿರ್ಮಾಣ ಮಾಡಿರುವುದರಿಂದ ಸಂಚಾರ ಸುಲಭವಾಗಿದೆ.

ಆದರೆ, ಪ್ರವಾಸಿಗರ ಭದ್ರತೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳು ಕ್ರಮ ಕೈಗೊಳ್ಳಬೇಕಿದೆ. ಜಲಧಾರೆಯ ಸೆಳೆತಕ್ಕೆ ಸಿಲುಕಿ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕಾಫಿ ತೋಟದ ಬದಿಯಲ್ಲಿ ಜಲಪಾತದೆಡೆಗೆ ತೆರಳಲು ಮೆಟ್ಟಿಲುಗಳನ್ನು ನಿರ್ಮಿಸಿದರೆ ಜಲಪಾತದ ವೀಕ್ಷಣೆ ಸುಲಭವಾದೀತು ಎನ್ನುತ್ತಾರೆ ಗ್ರಾಮಸ್ಥರು.

ಮನಮೋಹಕ ಬಲಿಯಟ್ರ
ನಾಪೋಕ್ಲು: ಏಮೆಪಾರೆ ಜಲಪಾತವನ್ನು ಕಣ್ತುಂಬಿಕೊಂಡು ಮುಂದಕ್ಕೆ ಸಾಗಿದರೆ ಅನತಿ ದೂರದಲ್ಲಿ ಮತ್ತೊಂದು ಜಲಪಾತವಿದೆ. ಇದಕ್ಕೆ ಬಲಿಯಟ್ರ ಜಲಪಾತ ಎಂದು ಹೆಸರು. ಸುಮಾರು 50 ಅಡಿಗಳಷ್ಟು ಎತ್ತರದಿಂದ ಮೂರು ಹಂತಗಳಲ್ಲಿ ಧುಮುಕುತ್ತದೆ.

ಜಲಪಾತಗಳನ್ನು ವೀಕ್ಷಿಸುವ ಕುತೂಹಲದಿಂದ ಮುಂದೆ ಸಾಗುವಾಗ ದೃಷ್ಟಿ ಕಾಲಿನತ್ತಲೇ ಇರಬೇಕಾದದ್ದು ಅನಿವಾರ್ಯ. ಜಲಧಾರೆಯಿಂದಾಗಿ ಸದಾ ತಂಪು ಇರುವ ತೋಟಗಳಲ್ಲಿ ಜಿಗಣೆಗಳು ಇರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.