ADVERTISEMENT

ನದಿದಂಡೆಯಲ್ಲಿ ಕಸ ವಿಲೇವಾರಿ!

​ಪ್ರಜಾವಾಣಿ ವಾರ್ತೆ
Published 5 ಜುಲೈ 2017, 8:48 IST
Last Updated 5 ಜುಲೈ 2017, 8:48 IST
ಕುಶಾಲನಗರ ಸಮೀಪದ ಮುಳ್ಳುಸೋಗೆಯ ಕಾವೇರಿ ನದಿ ದಂಡೆಯಲ್ಲಿ ಬಿದ್ದಿರುವ ಕಸದ ರಾಶಿ
ಕುಶಾಲನಗರ ಸಮೀಪದ ಮುಳ್ಳುಸೋಗೆಯ ಕಾವೇರಿ ನದಿ ದಂಡೆಯಲ್ಲಿ ಬಿದ್ದಿರುವ ಕಸದ ರಾಶಿ   

ಕುಶಾಲನಗರ: ಸಮೀಪದ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಿನನಿತ್ಯ ಸಂಗ್ರಹವಾಗುವ ಕಸವನ್ನು ವಿಲೇವಾರಿ ಮಾಡಲು ಸೂಕ್ತ ಜಾಗದ ಕೊರತೆಯಿಂದಾಗಿ ಕಾವೇರಿ ನದಿ ದಂಡೆಯಲ್ಲಿಯೇ ಕಸವನ್ನು ಹಾಕಲಾಗುತ್ತಿದೆ.

ಮುಳ್ಳುಸೋಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ 10 ಸಾವಿರ ಜನಸಂಖ್ಯೆ ಇದೆ. ವಿವಿಧ ಬಡಾವಣೆಗಳಲ್ಲಿ ನಿತ್ಯ ಮೂರರಿಂದ, ನಾಲ್ಕು ಟ್ರ್ಯಾಕ್ಟರ್‌ಗಳಷ್ಟು ಕಸ ಸಂಗ್ರಹವಾಗುತ್ತಿದೆ.
ಪಂಚಾಯಿತಿಯಿಂದ ಕಸ ಸಂಗ್ರಹ ಮಾಡಲು ಸರಿಯಾಗಿ ಕ್ರಮ ಕೈಗೊಳ್ಳದ ಕಾರಣ ಬಡಾವಣೆ ನಿವಾಸಿಗಳು ಎಲ್ಲೆಂದರಲ್ಲಿ ಕಸ ತಂದು ಸುರಿಯುತ್ತಿದ್ದಾರೆ. ಮಳೆಯಿಂದಾಗಿ ವಾತಾವರಣವೇ ಗಬ್ಬೆದ್ದು ನಾರುವಂತ ಪರಿಸ್ಥಿತಿ ಉಂಟಾಗಿದೆ.

ಹಸುಗಳು, ಬೀದಿನಾಯಿಗಳು ಕಸವನ್ನು ಎಳೆದಾಡುತ್ತಿರುವುದರಿಂದ ರಸ್ತೆಗಳೆಲ್ಲ ಕಸಮಯವಾಗಿವೆ.  ಆರು ವರ್ಷಗಳಿಂದ ಗೊಂದಿಬಸವನಹಳ್ಳಿಯಲ್ಲಿರುವ ಕಲ್ಲುಕ್ವಾರೆ ಗುಂಡಿಗೆ ಕಸ ಹಾಕಲಾಗುತ್ತಿತ್ತು. ಈಚೆಗೆ ಅಲ್ಲಿಯ ಜನರು ಕಸ ಹಾಕಬಾರದು ಎಂದು ಕಸದವಾಹನ ತಡೆದು ಪ್ರತಿಭಟನೆ ನಡೆಸಿದ್ದರು.

ADVERTISEMENT

ಕಸ ವಿಲೇವಾರಿಗೆ ಸೂಕ್ತ ಜಾಗ ಒದಗಿಸಿಕೊಡುವಂತೆ ಪಂಚಾಯಿತಿ ಆಡಳಿತ ಮಂಡಳಿ ಜಿಲ್ಲಾಧಿಕಾರಿಗೆ ಮನವಿ ಮಾಡಿದ ಮೇರೆಗೆ ಈಗ ಗೊಂದಿಬಸವನಹಳ್ಳಿ ಪೈಸಾರಿ ಸರ್ವೇ ನಂ 1/1ರಲ್ಲಿ 3 ಎಕರೆಗೆ ತಹಶೀಲ್ದಾರ್ ಶಿಫಾರಸು ಮಾಡಿದ್ದಾರೆ. ಈಗಾಗಲೇ ಪಂಚಾಯಿತಿಯಿಂದ ₹ 5 ಲಕ್ಷ ವೆಚ್ಚದಲ್ಲಿ ಜಾಗದ ಸುತ್ತಲೂ ಬೇಲಿ ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ.

ಒಂದು ವಾರದೊಳಗೆ ಕಸ ವಿಲೇವಾರಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾ.ಪಂ. ಉಪಾಧ್ಯಕ್ಷ ತಾರಾನಾಥ್ ತಿಳಿಸಿದರು. ‘ಗ್ರಾಮದಲ್ಲಿ ಕಸ ವಿಲೇವಾರಿ ಸಮಸ್ಯೆಯನ್ನು ತಾತ್ಕಾಲಿಕವಾಗಿ ಬಗೆಹರಿಸುವುದಕ್ಕಾಗಿ ಮೂರು ತಿಂಗಳುಗಳಿಂದ  ಸಂಗ್ರಹವಾಗಿರುವ ಕಸವನ್ನು ನದಿ ರಸ್ತೆಯಲ್ಲಿರುವ ನನ್ನ ಜಾಗದಲ್ಲಿ ವಿಲೇವಾರಿ ಮಾಡಲು ಅವಕಾಶ ಮಾಡಿಕೊಟ್ಟಿದ್ದೇನೆ’ ಎಂದು ತಾರಾನಾಥ್ ತಿಳಿಸಿದರು.

ಪಂಚಾಯಿತಿ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ  ಆರು ತಿಂಗಳುಗಳಿಂದ ಸರಿಯಾಗಿ ಕಸ ಸಂಗ್ರಹ ಮಾಡುತ್ತಿಲ್ಲ. ಇದರಿಂದ ಜನರು ಕಸವನ್ನು ರಸ್ತೆ ಬದಿಗೆ ತಂದು ಹಾಕುತ್ತಿದ್ದಾರೆ. ಇದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗಿ ಹರಡುವ ಭೀತಿ ಎದುರಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ದಿನೇಶ್ ಆತಂಕ ವ್ಯಕ್ತಪಡಿಸಿದ್ದಾರೆ.

* * 

ಜನರು ಮನೆಯ ಕಸವನ್ನು ರಸ್ತೆ ಬದಿಗೆ ತಂದು ಹಾಕುತ್ತಿದ್ದಾರೆ. ಇದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗಿ ಹರಡುವ ಭೀತಿ ಎದುರಾಗಿದೆ
ದಿನೇಶ್
ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ, ಮುಳ್ಳುಸೋಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.