ADVERTISEMENT

ನನಸಾಗದ ಮಿನಿ ವಿಧಾನಸೌಧ ನಿರ್ಮಾಣದ ಕನಸು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2012, 6:05 IST
Last Updated 9 ಏಪ್ರಿಲ್ 2012, 6:05 IST

ವಿರಾಜಪೇಟೆ: ತಾಲ್ಲೂಕು ಕೇಂದ್ರವಾದ ವಿರಾಜಪೇಟೆಯಲ್ಲಿ ಮಿನಿ ವಿಧಾನಸೌಧದ ನಿರ್ಮಾಣಕ್ಕೆ 2011ರ ಮಾರ್ಚ್ ತಿಂಗಳಲ್ಲಿ ಸರ್ಕಾರ 2 ಕೋಟಿ ರೂ. ಮಂಜೂರು ಮಾಡಿದ್ದರೂ ಕಟ್ಟಡ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ. ಕಾಮಗಾರಿ ಚಾಲನೆಗೆ ಇಲಾಖೆಗೆ ಇನ್ನೂ ಶುಭ ಗಳಿಗೆ ದೊರೆತಿಲ್ಲ.

13ವರ್ಷಗಳ ಹಿಂದೆಯೇ ವಿರಾಜಪೇಟೆ ತಾಲ್ಲೂಕಿಗೆ ಮಿನಿ ವಿಧಾನಸೌಧಕ್ಕೆ ಮಂಜೂರಾತಿ ದೊರೆತಿದ್ದರೂ ಸೂಕ್ತ ಸ್ಥಳ ಗುರುತಿಸಲು ಅನೇಕ ವರ್ಷಗಳು ಕಾಲಹರಣವಾಯಿತು. ಹಣ ಮಂಜೂರಾತಿಯ ನಂತರ ಇಲಾಖೆ ಇ- ಮೇಲ್ ಟೆಂಡರ್‌ನಲ್ಲಿ ಗುತ್ತಿಗೆದಾರರನ್ನು ಆಯ್ಕೆ ಮಾಡಿದೆ. ಆರು ತಿಂಗಳ

ಹಿಂದೆ ಹಳೆ ತಾಲ್ಲೂಕು ಕಚೇರಿಯ ಸ್ಥಳದಲ್ಲಿಯೇ ಅಧಿಕೃತವಾಗಿ ವಿಧಾನಸಭಾ ಅಧ್ಯಕ್ಷ ಕೆ.ಜಿ. ಬೋಪಯ್ಯ ಅವರು ಭೂಮಿ ಪೂಜೆ ನೆರವೇರಿಸಿದರು. ಆದರೆ ಕಾಮಗಾರಿ ಆರಂಭಕ್ಕೆ ಲೋಕೋಪಯೋಗಿ ಇಲಾಖೆಗೆ ಸಾಧ್ಯವಾಗಿಲ್ಲ.

ಕಾಂಗ್ರೆಸ್ ಪಕ್ಷದ ವಿರಾಜಪೇಟೆ ನಗರ ಸಮಿತಿ, ಕಮ್ಯುನಿಸ್ಟ್ ಪಕ್ಷದ ವಿರಾಜಪೇಟೆ ಶಾಖೆ, ಡೆಮಾಕ್ರೆಟಿಕ್ ಸೋಷಲಿಸ್ಟ್ ಪಾರ್ಟಿ ಆಫ್ ಇಂಡಿಯಾದ ಸ್ಥಾನೀಯ ಶಾಖೆ, ಜಯ ಕರ್ನಾಟಕ ಸಂಘದ ನಗರ ಸಮಿತಿ, ನಾಗರಿಕ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಮಿನಿ ಸೌಧದ ನಿರ್ಮಾಣದ ವಿಳಂಬಕ್ಕೆ ಇಲಾಖೆಯನ್ನು ದೂರುತ್ತಿದ್ದು, ಇಲಾಖೆಗೆ ಲಿಖಿತ ದೂರುಗಳನ್ನು ಸಹ ಸಲ್ಲಿಸಿದ್ದಾರೆ.

ಈಗ ಬಾಡಿಗೆ ಕಟ್ಟಡದಲ್ಲಿರುವ ತಾಲ್ಲೂಕು ಕಚೇರಿ, ಪಟ್ಟಣದ ಹೃದಯ ಭಾಗದಿಂದ ಸುಮಾರು 1 ಕಿ.ಮೀ. ದೂರದಲ್ಲಿದೆ. ತಾಲ್ಲೂಕು ಕಚೇರಿಯ ಯಾವುದೇ ಕೆಲಸಕ್ಕೂ ಆಟೋದಲ್ಲಿಯೇ ತೆರಳಬೇಕಾಗಿದೆ. ತಾಲ್ಲೂಕಿನ ವಿವಿಧೆಡೆಗಳಿಂದ ಬರುವವರಿಗೂ ಇದು ಇನ್ನಷ್ಟು ಸಮಸ್ಯೆಯಾಗಿದೆ. ಮಿನಿ ಸೌಧದ ನಿರ್ಮಾಣದವರೆಗೂ ಇದೇ ಸಮಸ್ಯೆಗಳು ಮುಂದುವರೆಯುತ್ತವೆ ಎಂದು ಇಲ್ಲಿನ ಸಂಘಟನೆಗಳ ಆರೋಪವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.