ADVERTISEMENT

ನನೆಗುದಿಗೆ ಬಿದ್ದ ಕುಡಿಯುವ ನೀರಿನ ಯೋಜನೆ

ಇಪ್ಪತ್ತೈದು ವರ್ಷಗಳಿಂದ ನೀಗದ ಬವಣೆ

ಪ್ರಜಾವಾಣಿ ವಿಶೇಷ
Published 8 ಜುಲೈ 2013, 8:53 IST
Last Updated 8 ಜುಲೈ 2013, 8:53 IST
ಕುಶಾಲನಗರ ಸಮೀಪದ ಶಾಂತಿ ಬಡಾವಣೆಯಲ್ಲಿರುವ ವಾಲ್‌ಗುಂಡಿಯಲ್ಲಿ ಕೊಳಚೆ ನೀರು ನಿಂತಿದೆ.
ಕುಶಾಲನಗರ ಸಮೀಪದ ಶಾಂತಿ ಬಡಾವಣೆಯಲ್ಲಿರುವ ವಾಲ್‌ಗುಂಡಿಯಲ್ಲಿ ಕೊಳಚೆ ನೀರು ನಿಂತಿದೆ.   

ಕುಶಾಲನಗರ: ಕುಶಾಲನಗರದಿಂದ ಶಿರಂಗಾಲದವರೆಗಿನ ಆರು ಗ್ರಾಮ ಪಂಚಾಯಿತಿಗಳ ಹತ್ತಾರು ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ನೀಗಿಸಲು 4 ಕೋಟಿ ರೂಪಾಯಿ ವೆಚ್ಚದಲ್ಲಿ ರೂಪಿಸಲಾದ  ಮಹತ್ವದ ಯೋಜನೆ ನನೆಗುದಿ ಬಿದ್ದಿದೆ. ಮತ್ತೊಂದೆಡೆ ಈ ಎಲ್ಲಾ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ.

ಏಳು ವರ್ಷಗಳ ಹಿಂದೆ ಕರ್ನಾಟಕ ಗ್ರಾಮೀಣ ಪಂಚಾಯತ್ ರಾಜ್ಯ ಯೋಜನೆ ಅಡಿಯಲ್ಲಿ ರೂಪಿತವಾದ ಈ ಯೋಜನೆಗೆ ಜಿಲ್ಲಾ ಪಂಚಾಯಿತಿ ಮೇಲುಸ್ತುವಾರಿಯಲ್ಲಿ ಕಾಮಗಾರಿ ಆರಂಭವಾಯಿತು. ಕಾಮಗಾರಿ ಬಹುತೇಕ ಪೂರ್ಣಗೊಂಡರೂ ತದನಂತರದಲ್ಲಿ ಸ್ಥಗಿತಗೊಂಡು ಏಳು ವರ್ಷಗಳೇ ಸಂದರೂ ಪೂರ್ಣಗೊಳ್ಳದಿರುವುದು ಮಾತ್ರ ವಿಪರ್ಯಾಸ.

ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಶಕ್ತಿ ಬಡಾವಣೆಯಲ್ಲಿ ಪಾರ್ಕ್ ಮೀಸಲಿರಿಸಿದ್ದ ಹತ್ತು ಸೆಂಟ್ ಜಾಗದಲ್ಲಿ ಅಲ್ಲಿನ ಜನರ ವಿರೋಧದ ನಡುವೆಯೂ ಐದು ಸೆಂಟ್ ಜಾಗ ಬಳಸಿ  2.50 ಲಕ್ಷ ಲೀಟರ್ ಸಾಮರ್ಥ್ಯದ 80 ಲಕ್ಷ ವೆಚ್ಚದಲ್ಲಿ ಟ್ಯಾಂಕ್ ನಿರ್ಮಾಣ ಮಾಡಿ 7 ವರ್ಷ ಗಳೇ ಕಳೆದವು. ಆದರೆ, ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದ ಈ ಯೋಜನೆ ಪೂರ್ಣಗೊಂಡಿಲ್ಲ ಎಂಬುದು ಜನರ ಆಕ್ರೋಶ.

ಶಕ್ತಿ ಬಡಾವಣೆಯಲ್ಲಿ ನಿರ್ಮಾಣವಾಗಿರುವ ಟ್ಯಾಂಕ್ ಸೋರಿಕೆಯಾಗುವ ಹಂತ ತಲುಪಿದ್ದರೂ ಉದ್ದೇಶಿತ ಯೋಜನೆ ಮಾತ್ರ ಪೂರ್ಣಗೊಳ್ಳದಿರುವುದರಿಂದ ಜನರ ನೀರಿನ ಬವಣೆ ಹೇಳತೀರದಾಗಿದೆ. ಇಂದೋ ನಾಳೆಯೋ ಬವಣೆ ತೀರಬಹುದೆಂದು ಕಾದು ಬೇಸತ್ತು ಹೋಗಿದ್ದಾರೆ. ಮತ್ತೊಂದೆಡೆ ವಿದ್ಯುತ್ಚಕ್ತಿ ಇಲಾಖೆಯಿಂದ ವಿದ್ಯುತ್ ಸಂಪರ್ಕ ಕಲ್ಪಿಸುತ್ತಿಲ್ಲ ಎಂಬ ಒಂದೇ ಕಾರಣ ನೀಡಿ ಜನಪ್ರತಿನಿಧಿಗಳು ಕೈಚೆಲ್ಲಿ ಕುಳಿತ್ತಿದ್ದಾರೆ.

ಇನ್ನು ಶಕ್ತಿ ಬಡಾವಣೆ ನಿವಾಸಿಗಳಂತು ಇತ್ತ ಮಹತ್ವದ ಯೋಜನೆಯೂ ಪೂರ್ಣಗೊಳ್ಳದೆ ಅತ್ತ ಪಂಚಾಯಿಂದಲೂ ಕುಡಿಯುವ ನೀರು ದೊರೆಯದೇ ಹನಿ ನೀರಿಗಾಗಿ ಪರಿತಪಿಸಬೇಕಾದ ಸ್ಥಿತಿಯಲ್ಲಿ ಬದುಕು ದೂಡಬೇಕಾಗಿದೆ.

ಒಟ್ಟಿನಲ್ಲಿ ಕುಡಿಯುವ ನೀರಿನ ಈ ಮಹತ್ವ ಯೋಜನೆ ತಕ್ಷಣದಲ್ಲೆೀ ಪೂರ್ಣಗೊಂಡು ನೀರು ದೊರೆಯಬೇಕೆಂಬ ನಿರೀಕ್ಷೆಯಲ್ಲಿ ಹತ್ತಾರು ಹಳ್ಳಿಗಳ ಜನರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.