ADVERTISEMENT

ನೀರು-ಸೂರು-ಆಹಾರ: ನಾಳೆಯಿಂದ ಸಿಪಿಐ ಹೋರಾಟ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2012, 5:45 IST
Last Updated 4 ಆಗಸ್ಟ್ 2012, 5:45 IST

ಸಿದ್ದಾಪುರ: ಜನರಿಗೆ ಕುಡಿಯುವ ನೀರು, ನಿವೇಶನ ರಹಿತರಿಗೆ ಸೂರು ಹಾಗೂ ಆಹಾರದ ಭದ್ರತೆಗೆ ಆಗ್ರಹಿಸಿ ಸಿ.ಪಿ.ಐ. ನೇತೃತ್ವದಲ್ಲಿ ಇದೇ ತಿಂಗಳ 5ರಿಂದ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೋರಾಟ ಹಾಗೂ ಪ್ರತಿಭಟನೆಗಳನ್ನು ನಡೆಸಲಿರುವುದಾಗಿ  ಪಕ್ಷದ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ತಿಳಿಸಿದ್ದಾರೆ.

ನಿವೇಶನರಹಿತರಿಗೆ ನಿವೇಶನ, ನಿವಾಸಿಗಳಿಗೆ ಪಡಿತರ ಚೀಟಿ ಕಲ್ಪಿಸುವುದು ಹಾಗೂ ಗ್ರಾಮೀಣ ನಿವಾಸಿಗಳಿಗೆ ಹಕ್ಕು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಬುಧವಾರ ಪಕ್ಷದ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ತಿಳಿಸಿದ್ದಾರೆ.

ಕೊಡಗು ಜಿಲ್ಲೆಯ ತಿತಿಮತಿ ಗ್ರಾಮದಿಂದ ಚಳವಳಿಗೆ ಚಾಲನೆ ನೀಡಲಾಗುವುದು. ಇದರಿಂದ ಬಡವರು ಬಡವರಾಗಿಯೇ ಉಳಿಯುವಂತೆ ಆಗಿದೆ. ಸರ್ಕಾರಿ ಜಮೀನುಗಳು ಭೂಗಳ್ಳರ ಪಾಲಾಗಿದೆ, ಕೈಗಾರಿಕೆಗೆ ಹಾಗೂ ಜನರಿಗೆ ಉದ್ಯೋಗ ಸೃಷ್ಟಿಸಲು ವಿಫಲವಾದ ಹಲವು ಉದ್ಯಮಗಳಿಗೆ ಸರ್ಕಾರದ ಜಮೀನನ್ನು ಮಂಜೂರು ಮಾಡಲಾಗಿದೆ.

ಬಡವರಿಗೆ ಸೂರು ಕಲ್ಪಿಸುವ ಆಶ್ರಯ, ಅಂಬೇಡ್ಕರ್, ಇಂದಿರಾ ಆವಾಸ್, ಪ್ರಧಾನ ಮಂತ್ರಿ ಗ್ರಾಮೀಣ ಗೃಹ ನಿರ್ಮಾಣ, ಬಸವಶ್ರೆ ವಸತಿ ಯೋಜನೆಗಳು ಬಡವರ ಪಾಲಿಗೆ ಗಗನಕುಸುಮವಾಗಿದೆ ಎಂದು ಅವರು ಹೇಳಿದರು. ನಗರ ಪ್ರದೇಶಗಳಲ್ಲಿ  ಮಧ್ಯಮ ವರ್ಗದವರಿಗೆ ರಿಯಾಯಿತಿ ದರದಲ್ಲಿ  ಮನೆಗಳನ್ನು ನೀಡುವ ಉದ್ದೇಶದಿಂದ ಮುಂಗಡ ಹಣ ಪಡೆದು ಕೊಂಡು ಹತ್ತು ವರ್ಷಗಳು ಕಳೆದರೂ ನಿವೇಶನಗಳನ್ನು ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಪಕ್ಷದ ಸಹ ಕಾರ್ಯದರ್ಶಿ ಎನ್.ಡಿ. ಕುಟ್ಟಪ್ಪನ್, ರಮೇಶ್ ಮಾಯಮುಡಿ, ಸಿದ್ದಾಪುರ ವಲಯ ಕಾರ್ಯದರ್ಶಿ ಪೌಲೋಸ್, ಪಕ್ಷದ ಪ್ರಮುಖರಾದ ಸೆಲ್ವದಾಸ್, ಮಂಜು, ರಘು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.