ADVERTISEMENT

ಪಕ್ಷ ವಿರೋಧಿಗಳಿಗೆ ತಕ್ಕಪಾಠ: ಟಿ.ಪಿ. ರಮೇಶ್

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2017, 6:38 IST
Last Updated 3 ಮಾರ್ಚ್ 2017, 6:38 IST

ಮಡಿಕೇರಿ:  ‘ಶ್ರೀಮತಿ ಬಂಗೇರಾ ಹಾಗೂ ವೀಣಾಕ್ಷಿ ಅವರ ನಗರಸಭೆ ಸದಸ್ಯತ್ವ ಅನರ್ಹಗೊಳಿಸಿ ಜಿಲ್ಲಾಧಿಕಾರಿ ನ್ಯಾಯಾಲಯ ಮಹತ್ವದ ಆದೇಶ, ಪಕ್ಷ ವಿರೋಧಿಗಳಿಗೆ ಇದೊಂದು ಪಾಠ’ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಟಿ.ಪಿ.ರಮೇಶ್‌ ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರಸಭೆ ಅಧ್ಯಕ್ಷ– ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ಪಕ್ಷದ ವಿಪ್ ಉಲ್ಲಂಘಿಸಿದ್ದರು. ಇದಕ್ಕೆ ಪೂರಕ ದಾಖಲೆ ಸಲ್ಲಿಸಲಾಗಿತ್ತು. ಉತ್ತಮ ಆದೇಶ ಹೊರಬಿದ್ದಿದೆ ಎಂದರು.

‘ನಗರಸಭೆ ನಡಾವಳಿಯಲ್ಲಿ ಬಿಜೆಪಿ ಪಕ್ಷದ ಪರ ಕೈ ಎತ್ತಿರುವುದು ದಾಖಲಾಗಿದೆ. ಕಾಂಗ್ರೆಸ್‌ಗೆ ವಂಚನೆ ಮಾಡಿ ಪಕ್ಷಾಂತರ ನಿಷೇಧ ಕಾಯ್ದೆಯಡಿ ತಪ್ಪಿತಸ್ಥರು ಎಂದು ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಸಾಬೀತಾಗಿದೆ’ ಎಂದು ತಿಳಿಸಿದರು.

‘ಕಳೆದ ಒಂದು ವರ್ಷದಿಂದ ಕಾಂಗ್ರೆಸ್‌ನ ಪ್ರಭಾರ ಅಧ್ಯಕ್ಷನಾಗಿ ಕೆಲಸ ಮಾಡುತ್ತಿರುವೆ. ಇದರ ಜತೆಗೆ ಕರ್ನಾಟಕ ರೇಷ್ಮೆ ಮಂಡಳಿ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಬೇಕಿದ್ದು ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಮತ್ತೊಬ್ಬರನ್ನು ನೇಮಕ ಮಾಡಿ. ಆದಷ್ಟು ಬೇಗ ತೀರ್ಮಾನ ಕೈಗೊಳ್ಳುವಂತೆ ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಟ್ಟಿರುವೆ’ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಸದಸ್ಯ ಎಚ್.ಎಂ.ನಂದಕುಮಾರ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಜಿಲ್ಲಾ ಸಂಚಾಲಕ ಮೈನಾ ಇತರರು ಇದ್ದರು.

*
ಇಬ್ಬರು ಸದಸ್ಯರೂ ಕಾಂಗ್ರೆಸ್ ಚಿಹ್ನೆಯಡಿ ಸ್ಪರ್ಧಿಸಿ ಚುನಾಯಿತರಾಗಿದ್ದರು. ಗೆದ್ದ ಬಳಿಕ ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತದೋ ಅದಕ್ಕೆ ಇಬ್ಬರೂ ಬದ್ಧವಾಗಿರಬೇಕಿತ್ತು.
–ಟಿ.ಪಿ. ರಮೇಶ್‌,
ಅಧ್ಯಕ್ಷ, ಜಿಲ್ಲಾ  ಕಾಂಗ್ರೆಸ್‌ ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT