ADVERTISEMENT

ಪಕ್ಷ ಸಂಘಟನೆಗೆ ಜೀವಿಜಯ ಕರೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2011, 9:15 IST
Last Updated 12 ಫೆಬ್ರುವರಿ 2011, 9:15 IST

ಸೋಮವಾರಪೇಟೆ: ಮುಂದಿನ ಕೆಲವೇ ತಿಂಗಳಲ್ಲಿ ರಾಜ್ಯದ ರಾಜಕೀಯದ ಚಿತ್ರಣ ಸಂಪೂರ್ಣ ಬದಲಾವಣೆ ಹೊಂದಲಿದೆ. ಆದ್ದರಿಂದ ಗ್ರಾಮಮಟ್ಟದಲ್ಲಿ ಜೆಡಿಎಸ್ ಪಕ್ಷವನ್ನು ಪುನರ್ ಸಂಘಟಿಸಲು ಕಾರ್ಯಕರ್ತರು ಮುಂದಾಗಬೇಕೆಂದು ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡರಾದ ಬಿ.ಎ.ಜೀವಿಜಯ ಕರೆ ನೀಡಿದರು.ಸ್ಥಳೀಯ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು. ರಾಜ್ಯದ ಸದ್ಯದ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿದರೆ ವಿಧಾನ ಸಭಾ ಚುನಾವಣೆಯು ಸನ್ನಿಹಿತವಾದಂತೆ ಕಾಣುತ್ತಿದ್ದು, ಜೆಡಿಎಸ್ ಇದರಲ್ಲಿ ಅತ್ಯಧಿಕ ಸ್ಥಾನ ಗಳಿಸುವ ಸಾಧ್ಯತೆ ನಿಚ್ಚಳವಾಗಿದೆ. ಇದಕ್ಕೆ ಪೂರಕವಾಗಿ ಕಾರ್ಯಕರ್ತರು ಪಕ್ಷದ ಬಲವರ್ಧನೆಗೆ ಶ್ರಮಿಸಬೇಕಾಗಿದೆ ಎಂದರು.

ಪಕ್ಷದ ವತಿಯಿಂದ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜೇತರಾದ ಸದಸ್ಯರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದರ ಜೊತೆಗೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕು. ಚುನಾವಣೆಯಲ್ಲಿ ಸೋತಿರುವ ಅಭ್ಯರ್ಥಿಗಳು ಎದೆಗುಂದದೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಪಕ್ಷದ ಬೆಳವಣಿಗೆಯತ್ತ ಗಮನ ಹರಿಸಬೇಕೆಂದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ.ವಿಜಯ ಮಾತನಾಡಿ, ಮುಂಬರುವ ದಿನಗಳಲ್ಲಿ ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರಲ್ಲಿ ಚೈತನ್ಯ ತುಂಬುವ ಕೆಲಸ ನಡೆಯಬೇಕೆಂದರು.ತಾಲ್ಲೂಕು ಘಟಕದ ಅಧ್ಯಕ್ಷ ಅಧ್ಯಕ್ಷತೆ ವಹಿಸಿ ಎಸ್.ಬಿ.ಭರತ್‌ಕುಮಾರ್ ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ಪಕ್ಷದ ಕೆಲವು ಕಾರ್ಯಕರ್ತರಿಂದಲೇ ಹಿನ್ನಡೆ ಸಾಧಿಸುವಂತಾಯಿತು ಎಂದರು.

ಪಕ್ಷದ ಮುಖಂಡ ಕೆ.ಟಿ.ಪರಮೇಶ್ ಪ್ರಾಸ್ತಾವಿಕ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಕೆ.ಚಿಣ್ಣಪ್ಪ ಹಾಗೂ ಜೆಡಿಎಸ್ ರಾಜ್ಯ ಸಮಿತಿಯ ನಟೇಶಗೌಡ ಮಾತನಾಡಿದರು. ಪಕ್ಷದ ಬಲವರ್ಧನೆಗೆ ಕಾರ್ಯಕರ್ತರಿಂದ ಅನಿಸಿಕೆಗಳನ್ನು ಸಂಗ್ರಹಿಸಲಾಯಿತು. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ವಿಜೇತರಾದ ಪಕ್ಷದ ಸದಸ್ಯರನ್ನು ಸನ್ಮಾನಿಸಲಾಯಿತು.
 
ಜೆಡಿಎಸ್‌ನಲ್ಲಿದ್ದು ಬಳಿಕ ಪಕ್ಷೇತರರಾಗಿ ಸುಂಟಿಕೊಪ್ಪ ಕ್ಷೇತ್ರದಿಂದ ಸ್ಪರ್ಧಿಸಿ ತಾಲ್ಲೂಕು ಪಂಚಾಯಿತಿಗೆ ಆಯ್ಕೆಯಾದ ಅಬ್ದುಲ್ ಲತೀಫ್ ಜೆಡಿಎಸ್‌ಗೆ ಮತ್ತೆ ಸೇರ್ಪಡೆಗೊಂಡರು. ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಂ.ಡಿಸಿಲ್ವಾ ಸ್ವಾಗತಿಸಿದರು. ಕೆ.ಎ.ಆದಂ ವಂದಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಗೀತಾ ಶಿವಪ್ಪ, ಚಿತ್ರಾ ರಾಜೇಶ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಎಚ್.ಆರ್.ಸುರೇಶ್, ಪವಿತ್ರಾ ದೇವೇಂದ್ರ, ಪಾರ್ವತಮ್ಮ, ಸವಿತಾ ಸತೀಶ್, ಅಬ್ದುಲ್ ಲತೀಫ್ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.