ADVERTISEMENT

ಪರಮೇಶ್ವರಿ ದೇವಿ ಪ್ರತಿಷ್ಠಾಪನೋತ್ಸವ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2012, 9:40 IST
Last Updated 7 ಏಪ್ರಿಲ್ 2012, 9:40 IST

ವಿರಾಜಪೇಟೆ: ವಿರಾಜಪೇಟೆಯ ತೆಲುಗರ ಬೀದಿಯಲ್ಲಿ ಜೀರ್ಣೋದ್ಧಾರಗೊಂಡ ಅಂಗಾಳಪರಮೇಶ್ವರಿ ದೇವಾಲಯದ ನೂತನ ಗರ್ಭಗುಡಿಯಲ್ಲಿ ಗುರುವಾರ ರಾತ್ರಿ ದೇವಿ ವಿಗ್ರಹ ಪ್ರತಿಷ್ಠಾಪನೆ ನಡೆಯಿತು.

ತಮಿಳುನಾಡಿನ ತಂತ್ರಿಗಳು ಸಾಂಪ್ರದಾಯಿಕ ಪೂಜೆ ವೇದ ಮಂತ್ರಗಳೊಂದಿಗೆ ಅಂಗಾಳಪರಮೇಶ್ವರಿ ದೇವಿಯ ಪ್ರತಿಷ್ಠಾಪನೆ ನಡೆಸಿಕೊಟ್ಟರು.

ವಿರಾಜಪೇಟೆಯ ಮಾರಿಯಮ್ಮ ಹಾಗೂ ಅಂಗಾಳಪರಮೇಶ್ವರಿ ದೇವಾಲಯದ ಟ್ರಸ್ಟ್ ವತಿಯಿಂದ ಬುಧವಾರದಿಂದ ಆರಂಭಗೊಂಡಿದ್ದ ದೇವಿಯ ಪ್ರತಿಷ್ಠಾಪನಾ ಮಹೋತ್ಸವ, ಶುಕ್ರವಾರ ದೇವಾಲಯದ ಗೋಪುರದ ಕಳಶ ಸ್ಥಾಪನೆ, ಕುಂಭಾಭಿಷೇಕ ಹಾಗೂ ಶಡದ್ವ ಹೋಮದೊಂದಿಗೆ ತೆರೆ ಕಂಡಿತು.

ದೇವಿಯ ಪ್ರತಿಷ್ಠಾಪನೋತ್ಸವ ಅಂಗವಾಗಿ ಗುರುವಾರ ಮಧ್ಯಾಹ್ನ ಇಲ್ಲಿಯ ಮಾರಿಗುಡಿಯಿಂದ ಮಲಬಾರ್ ರಸ್ತೆಯ ಮೀನುಪೇಟೆಯ ತನಕ ದೇವಿಯ ನಗರ ಪ್ರದಕ್ಷಿಣೆ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.

ಮೆರವಣಿಗೆಯಲ್ಲಿ ಪೂರ್ಣಕುಂಭ ಹೊತ್ತ ಮಹಿಳೆಯರು, ಆನೆ ಅಂಬಾರಿ, ಅಶ್ವ ಸವಾರಿ, ಗೋ ಕರು, ಎತ್ತಿನ ಗಾಡಿಯಲ್ಲಿ ದೇವಿಯ ವಿಗ್ರಹ, ತಮಿಳುನಾಡಿನ ಬ್ಯಾಂಡ್, ಕೇರಳದ ಚಂಡೆ ಮದ್ದಳೆ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.

ವಿರಾಜಪೇಟೆಯ ತೆಲುಗರಬೀದಿ, ಜೈನರಬೀದಿ, ಫೀಲ್ಡ್‌ಮಾರ್ಷಲ್ ಕಾರ್ಯಪ್ಪ ರಸ್ತೆ ಮುಖ್ಯರಸ್ತೆಯ ಮೂಲಕ ಸಾಗಿದ ಮೆರವಣಿಗೆ ಸಂಜೆ 6.30ರ ವೇಳೆಗೆ ದೇವಾಲಯಕ್ಕೆ ಹಿಂತಿರುಗಿತು. ರಾತ್ರಿ 7ಕ್ಕೆ ಆರಂಭಗೊಂಡ ಪ್ರತಿಷ್ಠಾಪನೆ ಕಾರ್ಯ ರಾತ್ರಿ12. 30ರವರೆಗೂ ಜರುಗಿತು.

ಅರಮೇರಿ ಕಳಂಚೇರಿ ಮಠಾಧೀಶರಾದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಶುಕ್ರವಾರ ಬೆಳಿಗ್ಗೆ ಕುಂಭಾಭಿಷೇಕ ನೆರವೇರಿಸಿದರು.

ಪ್ರತಿಷ್ಠಾಪನೆಯ ಅಂಗವಾಗಿ ಭಕ್ತಾದಿಗಳಿಗೆ ಮೂರು ದಿನಗಳಿಂದಲು ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ದೇವಿಯ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಟ್ರಸ್ಟ್ ಅಧ್ಯಕ್ಷ ಟಿ.ಕೆ.ಶ್ರೀನಿವಾಸ್, ಖಜಾಂಚಿ ಟಿ.ಡಿ.ಗುರುನಾಥ್, ಟಿ.ಅಂಗುಮುತ್ತು, ಟಿ.ಕೆ.ಜನಾರ್ಧನ ಹಾಗೂ ಟಿ.ಜೆ.ದಿವಾಕರ್ ವಿಶೇಷವಾಗಿ ಶ್ರಮಿಸಿದರು.

ಪ್ರತಿಷ್ಠಾಪನಾ ಮಹೋತ್ಸವಕ್ಕೆ ಗುರುವಾರ ಮಧ್ಯಾಹ್ನ ಆಗಮಿಸಿದ ವಿಧಾನಸಭಾ ಅಧ್ಯಕ್ಷ ಕೆ.ಜಿ.ಬೋಪಯ್ಯ ಅವರು ದೇವಿಯ ನಗರ ಪ್ರದಕ್ಷಿಣೆ ಮೆರವಣಿಗೆಗೆ ಚಾಲನೆ ನೀಡಿ ಕೇರಳದ ಚಂಡೆ ಮದ್ದಳೆ ತಂಡದ ನೃತ್ಯ ವೀಕ್ಷಿಸಿದರು.

ಬೋಪಯ್ಯ ಅವರು ದೇವಾಲಯದ ಭೇಟಿ ಸಂದರ್ಭದಲ್ಲಿ ತಾಲ್ಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಸುಜಾ ಕುಶಾಲಪ್ಪ, ಆರ್.ಎಂ.ಸಿ ಅಧ್ಯಕ್ಷ ರಘು ನಾಣಯ್ಯ ಜಿಲ್ಲಾ ಪಂಚಾಯಿತಿ ಸದಸ್ಯೆ ಮಣಿನಂಜಪ್ಪ ಇತರರು ಹಾಜರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.