ADVERTISEMENT

ಪರಿಶಿಷ್ಟ ಜಾತಿ ಕಾಲೋನಿ: ನೀರಿಗೆ ತತ್ವಾರ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2012, 8:35 IST
Last Updated 21 ಏಪ್ರಿಲ್ 2012, 8:35 IST
ಪರಿಶಿಷ್ಟ ಜಾತಿ ಕಾಲೋನಿ: ನೀರಿಗೆ ತತ್ವಾರ
ಪರಿಶಿಷ್ಟ ಜಾತಿ ಕಾಲೋನಿ: ನೀರಿಗೆ ತತ್ವಾರ   

ಶನಿವಾರಸಂತೆ: ಸಮೀಪದ ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಲಂಬಿ ಗ್ರಾಮದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕಾಲೋನಿಯಲ್ಲಿ ಜನ ಕುಡಿಯುವ ನೀರಿಗೂ ಪರದಾಡುವಂತಾಗಿದೆ.
ಈ ಕಾಲೋನಿಯಲ್ಲಿ ಒಟ್ಟು 80 ಕುಟುಂಬಗಳಿವೆ.

ಜಿಲ್ಲಾ ಪಂಚಾಯಿತಿ ವತಿಯಿಂದ 1985-86ರಲ್ಲಿ ಕುಡಿಯುವ ನೀರಿಗಾಗಿ ಮೇಲಿನ ಗ್ರಾಮದ ಟ್ಯಾಂಕ್‌ಗೆ ಪೈಪ್‌ಲೈನ್ ಅಳವಡಿಸಿ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ 3 ವರ್ಷಗಳಿಂದ ನೀರು ಸರಬರಾಜು ಸ್ಥಗಿತಗೊಂಡಿದೆ!

ಪೈಪ್‌ಲೈನ್‌ನಲ್ಲಿ ಬರುವ ನೀರನ್ನು ಗ್ರಾಮದ ಕೆಲವೇ ಜನರು ಅಕ್ರಮವಾಗಿ ಪೈಪ್‌ಗಳನ್ನು ಅಳವಡಿಸಿಕೊಂಡು ತಮ್ಮ ಮನೆಗಳ ಹಿತ್ತಲಿನ ತರಕಾರಿ ಹಾಗೂ ಹೂವಿನ ಗಿಡಗಳಿಗೆ ಬಳಸುತ್ತಿದ್ದರೆ, ಇತ್ತ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರೂ ದೂರದಿಂದ ನೀರು ಹೊತ್ತು ತರುವ ದುಸ್ಥಿತಿ ಉಂಟಾಗಿದೆ.

ಈ ಕಾಲೋನಿಯ ನಿವಾಸಿಗಳು ಮೊದಲು ಕೊಳವೆ ಬಾವಿಯಿಂದ ನೀರು ಉಪಯೋಗಿಸುತ್ತಿದ್ದರು. ಕೆಲ ದಿನಗಳಿಂದ ಈ ಕೊಳವೆ ಬಾವಿಯ ನೀರು ದುರ್ವಾಸನೆಯಿಂದ ಕೂಡಿದ್ದು ಕುಡಿಯಲು ಅಯೋಗ್ಯವಾಗಿದೆ. ಇದರಿಂದಾಗಿ ಕುಡಿಯುವ ನೀರಿಗಾಗಿ ದೂರದ ಹಳ್ಳಕೊಳ್ಳಗಳನ್ನು ಅವಲಂಬಿಸಬೇಕಾಗಿದೆ.

ಪೈಪ್‌ಲೈನ್ ನೀರು ಪೋಲಾಗುತ್ತಿರುವ ವಿಚಾರ ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿಗೆ ತಿಳಿದಿದ್ದರೂ, ಮನವಿ ಸಲ್ಲಿಸಿದರೂ ಆಡಳಿತದಲ್ಲಿರುವವರು ಹಾಗೂ ಗ್ರಾಮಾಭಿವೃದ್ಧಿ ಅಧಿಕಾರಿಗಳು ಮೌನವಾಗಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ರಾಜಮ್ಮ ರುದ್ರಯ್ಯ ಹಾಗೂ ಕಾಲೋನಿ ನಿವಾಸಿಗಳು ದೂರಿದ್ದಾರೆ.

2007-08ರಲ್ಲಿ ಕಾಲೋನಿಯಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ಕಿರು ನೀರು ಯೋಜನೆಯಡಿ 7 ಲಕ್ಷ ರೂಪಾಯಿ ವೆಚ್ಚದಲ್ಲಿ ನೀರಿನ ಟ್ಯಾಂಕ್ ನಿರ್ಮಿಸಿ, ಪೈಪ್‌ಲೈನ್ ಅಳವಡಿಸಲಾಗಿತ್ತು. ಆದರೆ, ಇಲ್ಲಿಯವರೆಗೂ ಈ ನೀರಿನ ಟ್ಯಾಂಕ್‌ಗೆ ಹನಿ ನೀರೂ ಸರಬರಾಜಾಗಿಲ್ಲ.

ಗುತ್ತಿಗೆದಾರರಿಗೆ ಜಿಲ್ಲಾ ಪಂಚಾಯಿತಿ ವತಿಯಿಂದ ಪೂರ್ಣ ಹಣ ಸಂದಾಯವಾಗಿದೆ. ಕಾಲೋನಿಗೆ ಬಿಡುವ ನೀರನ್ನು ಗ್ರಾಮದ ಮೇಲಿನ ನೀರಿನ ಟ್ಯಾಂಕ್‌ಗೆ ಪೈಪ್ ಅಳವಡಿಸಿ ಬಿಡಲಾಗುತ್ತಿದೆ. ಈ ನೀರಿನ ಪೈಪ್‌ಲೈನ್ ದಾರಿಯಲ್ಲೇ ಒಡೆದುಹೋಗಿ ರಸ್ತೆಯಲ್ಲಿ ನೀರು ಹರಿದು ಪೋಲಾಗುತ್ತಿದೆ. ಆದರೆ ಪರಿಶಿಷ್ಟ ಜಾತಿ-ಪಂಗಡದ ಕಾಲೋನಿಗೆ ಮಾತ್ರ ನೀರು ಲಭಿಸುತ್ತಿಲ್ಲ.

ಸೋಮವಾರಪೇಟೆಯಲ್ಲಿರುವ ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಅವರ ನಿರ್ಲಕ್ಷ್ಯವೇ ಈ ಸಮಸ್ಯೆಗೆ ಕಾರಣ ಎಂದು ನಿವಾಸಿಗಳು ದೂರಿದ್ದಾರೆ.ಒಂದು ವಾರದೊಳಗೆ ಸಂಬಂಧಿಸಿದ ಅಧಿಕಾರಿಗಳು ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಎಂಜಿನಿಯರ್ ಕಚೇರಿ ಎದುರು ಪರಿಶಿಷ್ಟ ಜಾತಿ-ಪಂಗಡದ ಕಾಲೋನಿಯವರು, ದಲಿತ ಸಂಘರ್ಷ ಸಮಿತಿಯವರು ಪ್ರತಿಭಟನೆ ನಡೆಸಲಿದ್ದಾರೆ ಎಂದು ರಾಜಮ್ಮರುದ್ರಯ್ಯ ಎಚ್ಚರಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.