ADVERTISEMENT

ಪೊನ್ನಂಪೇಟೆ ನ್ಯಾಯಾಲಯ ಕಟ್ಟಡ ಉದ್ಘಾಟನೆಗೆ ಸಜ್ಜು

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2017, 6:57 IST
Last Updated 22 ಡಿಸೆಂಬರ್ 2017, 6:57 IST

ಗೋಣಿಕೊಪ್ಪಲು: ಪೊನ್ನಂಪೇಟೆಯಲ್ಲಿ ₹10.9 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತ ನ್ಯಾಯಾಲಯದ ಕಟ್ಟಡ ಶನಿವಾರ ಉದ್ಘಾಟನೆಗೊಳ್ಳಲಿದೆ. 2014ರಲ್ಲಿ ಆರಂಭಗೊಂಡ ಕಟ್ಟಡ ಕಾಮಗಾರಿ ಇದೀಗ ಮುಕ್ತಾಯಗೊಂಡಿದೆ. ನೆಲ ಅಂತಸ್ತು ಸೇರಿದಂತೆ ಒಟ್ಟು 5 ಅಂತಸ್ತಿನ ಈ ಬೃಹತ್ ಕಟ್ಟಡದಲ್ಲಿ 3 ಕೋರ್ಟ್ ಸಭಾಂಗಣ ಹಾಗೂ 85 ವಿಶಾಲವಾದ ಕೊಠಡಿಗಳಿವೆ.

ನೆಲಮಹಡಿಯಲ್ಲಿ ನ್ಯಾಯಾಲಯ, ಸಾಕ್ಷಿಗಳ, ಕಕ್ಷಿದಾರರ, ನಗದು ವಿಭಾಗ ನಗದು ಶಿರಸ್ಥೇದಾರರು, ಮುಖ್ಯ ಅಫಿದಾಧಿಕಾರಿ, ವಿದ್ಯುತ್ ಕೊಠಡಿ, ತಾಯಿಮಗುವಿನ ನಿರೀಕ್ಷಣಾ ಕೊಠಡಿ, ಅಂಗವಿಕಲರ ನಿರೀಕ್ಷಣಾ ಕೊಠಡಿ, ಮಹಿಳಾ ವಕೀಲರ ಕೊಠಡಿ, ಬೆರಳಚ್ಚು ಮತ್ತು ನಕಲು ವಿಭಾಗ, ಅಧ್ಯಕ್ಷರು, ವಕೀಲರ ಸಂಘ, ಕಂಪ್ಯೂಟರ್ ಕೊಠಡಿ, ಕಡತಗಳ ಕೊಠಡಿ, ನ್ಯಾಯಾಧೀಶರ ಕೊಠಡಿ ಸೇರಿದಂತೆಅನೇಕ ಕೊಠಡಿಗಳಿವೆ.

ನ್ಯಾಯಾಲಯ ಸಂಕೀರ್ಣದ ಬಲಬದಿಯಲ್ಲಿ ನ್ಯಾಧೀಶರ ಸುಸಜ್ಜಿತವಾಗಿ ವಸತಿ ಗೃಹ ನಿರ್ಮಾಣಮಾಡಲಾಗಿದೆ. ಎಡ ಬದಿಯಲ್ಲಿ ಕ್ಯಾಂಟೀನ್ ಹಾಗೂ ಮುಂಭಾಗದ ಬಲ ಭಾಗದಲ್ಲಿ ಪ್ರಾಪರ್ಟಿ ಕೊಠಡಿಗಳಿವೆ. ನ್ಯಾಯಾಲಯದ ಕೋರ್ಟ್ ಸಭಾಂಗಣದಲ್ಲಿ ಪೀಠೋಪಕರಣಗಳನ್ನು ವ್ಯವಸ್ಥೆ ಮಾಡಲಾಗಿದೆ. ಲಿಫ್ಟ್ ಅಳವಡಿಸುವ ಕಾರ್ಯಕೂಡ ನಡೆಯುತ್ತಿದೆ. ಕಟ್ಟಡದ ಸುತ್ತ ಕೆಂಪು ಬಣ್ಣ ಹಚ್ಚಿದ್ದರೆ, ಒಳಗಿನ ಎಲ್ಲ ಕೊಠಡಿಗಳಗೆ ಹಾಲುಬಿಳುಪಿನ ಬಣ್ಣ ಹಚ್ಚಲಾಗಿದೆ.

ADVERTISEMENT

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪಕ್ಕದಲ್ಲಿರುವ ನ್ಯಾಯಾಲಯದ ನೂತನ ಕಟ್ಟಡದ ಸುತ್ತ ಕಾಪೌಂಡ್ ನಿರ್ಮಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಕಟ್ಟಡದ ಮುಂದೆ ಹಿಂದೆಯೇ ಇದ್ದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರವನ್ನು ಹಾಗೆಯೆ ಉಳಿಸಲಾಗಿದೆ.

ನ್ಯಾಯಾಲಯಕ್ಕೆ ತೆರಳುವ ಮಾರ್ಗದ ರಸ್ತೆಗೆ ಡಾಂಬರ್ ಹಾಕಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಲಿಂಗರಾಜು, ಯತೀಶ್, ಜೂನಿಯರ್ ಎಂಜಿನಿಯರ್ ನವೀನ್ ಮೊಣ್ಣಪ್ಪ ಕಾಮಗಾರಿ ಜವಾಬ್ದಾರಿ ಹೊತ್ತಿದ್ದಾರೆ.

23 ರಂದು ಬೆಳಿಗ್ಗೆ 10.30ಕ್ಕೆ ನ್ಯಾಯಾಲಯ ಸಂಕೀರ್ಣವನ್ನು ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಉದ್ಘಾಟಿಸಲಿದ್ದಾರೆ. ಸಿವಿಲ್ ನ್ಯಾಯಾಲಯ ಕಟ್ಟಡವನ್ನು ಹೈಕೋರ್ಟ್ ನ್ಯಾಯಾಧೀಶ ಎ.ಎಸ್.ಬೋಪಣ್ಣ, ನ್ಯಾಯಾಧೀಶರ ವಸತಿ ಗೃಹವನ್ನು ಕಾನೂನು ಸಚಿವ ಟಿ.ಬಿ.ಜಯಚಂದ್ರ, ಆಡಳಿತ ಕಚೇರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಮ್ ಉದ್ಘಾಟಿಲಿದ್ದಾರೆ.

ನ್ಯಾಯಾಧೀಶ ಆರ್.ಬಿ.ಬೂದಿಹಾಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕರಾದ ಕೆ.ಜಿ.ಬೋಪಯ್ಯ, ಶಾಂತೆಯಂಡ ವೀಣಾ ಅಚ್ಚಯ್ಯ, ಅಪ್ಪಚ್ಚುರಂಜನ್, ಸುನಿಲ್ ಸುಬ್ರಮಣಿ, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.