ADVERTISEMENT

ಪೊಲೀಸ್ ದೌರ್ಜನ್ಯ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2012, 7:50 IST
Last Updated 17 ಏಪ್ರಿಲ್ 2012, 7:50 IST

ಸೋಮವಾರಪೇಟೆ: ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಅಕ್ರಮ ಮರಳು ಮಾಫಿಯಾ ಹಾವಳಿ ಮಿತಿಮೀರಿದೆ. ಕೂಡಲೇ ಅಕ್ರಮ ಮರಳು ದಂಧೆಯನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ವಿ.ಪಿ.ಶಶಿಧರ್ ಅವರ ಬಂಧನ ಖಂಡಿಸಿ ಸೋಮವಾರ ಜೆಡಿಎಸ್ ಬೃಹತ್ ಪ್ರತಿಭಟನೆ ನಡೆಸಿತು.

ಇಲ್ಲಿನ ಮಡಿಕೇರಿ ರಸ್ತೆಯಲ್ಲಿರುವ ಪಕ್ಷದ ಕಚೇರಿಯಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಎಸ್‌ಬಿಎಂ ರಸ್ತೆ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಧಿಕ್ಕಾರದ ಘೋಷಣೆ ಕೂಗಿದರು. ನಂತರ ನಗರದ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಶಾಸಕ, ಪೊಲೀಸ್ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಾಲ್ಲೂಕು ಕಚೇರಿಗೆ ತೆರಳಿದ ಪ್ರತಿಭಟನಾಕಾರರು ಕಚೇರಿ ಎದುರು ಧರಣಿ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಜಿ ಸಚಿವ ಬಿ.ಎ.ಜೀವಿಜಯ ಮಾತನಾಡಿ, ತಾಲ್ಲೂಕಿನ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ನಿರಂತರವಾಗಿ ಅಕ್ರಮ ಮರಳು ತೆಗೆಯಲಾಗುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ. ಸಂಜೆ 6 ಗಂಟೆ ನಂತರ ಯಾವುದೇ ಕಾರಣಕ್ಕೂ ನದಿ ಪಾತ್ರದಿಂದ ಮರಳು ತೆಗೆಯದಂತೆ ಸರ್ಕಾರ ಸೂಚನೆ ನೀಡಿದ್ದರೂ, ಇದನ್ನು ಗಾಳಿಗೆ ತೂರಿ ಹಂಪಾಪುರ ಪ್ರದೇಶದಲ್ಲಿ ಮರಳು ತೆಗೆಯಲಾಗುತ್ತಿದೆ. ಅಲ್ಲದೇ, 6 ಕ್ಯೂಬಿಕ್ ಮರಳು ತೆಗೆಯುವ ಬದಲು 16 ಕ್ಯೂಬಿಕ್‌ಗೂ ಅಧಿಕ ಮರಳನ್ನು ಸಾಗಾಟ ಮಾಡಲಾಗುತ್ತಿದೆ ಎಂದು ದೂರಿದರು.

ಪ್ರತಿ ಲೋಡ್ ಮರಳಿಗೆ ರೂ. 2 ಸಾವಿರ ಪಡೆಯಬೇಕಿದ್ದರೂ 7 ರಿಂದ 8 ಸಾವಿರ ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ಇದರಿಂದ ಪ್ರತಿ ದಿನ 35 ಲಕ್ಷ ರೂಪಾಯಿ ನಷ್ಟು ವ್ಯವಹಾರ ನಡೆಯುತ್ತಿದ್ದರೂ, ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಸರ್ಕಾರಕ್ಕೆ ವಾರ್ಷಿಕ 1 ಕೋಟಿ ರೂಪಾಯಿ ಆದಾಯ ಬರುತ್ತಿರುವುದಾಗಿ ಹೇಳಿದ್ದಾರೆ.

ಒಂದು ದಿನದಲ್ಲೇ 35 ಲಕ್ಷ ವ್ಯವಹಾರ ನಡೆದರೂ ಸರ್ಕಾರಕ್ಕೆ ವಾರ್ಷಿಕ ಕೇವಲ ರೂ.1 ಕೋಟಿ ಸಲ್ಲಿಕೆಯಾಗುತ್ತಿದೆ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ನಷ್ಟವಾಗುತ್ತಿದೆ ಎಂದರು.
ಪ್ರಜಾಪ್ರಭುತ್ವ ದೇಶದಲ್ಲಿ ಅನ್ಯಾಯದ ವಿರುದ್ಧ ಹೋರಾಟ ನಡೆಸಲು ಪ್ರತಿಯೊಬ್ಬರಿಗೂ ಹಕ್ಕಿದೆ. ಅಕ್ರಮ ಮರಳುಗಾರಿಕೆಯಿಂದ ಬೇಸತ್ತಿರುವ ಸಾರ್ವಜನಿಕರ ಮನವಿಯ ಮೇರೆಗೆ ಜೆಡಿಎಸ್ ಹೋರಾಟ ರೂಪಿಸಿದೆ.

ಇಂತಹ ಸಂದರ್ಭದಲ್ಲಿ ಪ್ರತಿಭಟನೆ ಹತ್ತಿಕ್ಕಲು ಅಪ್ಪಚ್ಚು ರಂಜನ್ ಸೇರಿದಂತೆ ಆಡಳಿತ ಪಕ್ಷದ ಜನಪ್ರತಿನಿಧಿಗಳು ಷಡ್ಯಂತ್ರ ರೂಪಿಸಿ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ವಿ.ಪಿ.ಶಶಿಧರ್ ಸೇರಿದಂತೆ ಇತರರನ್ನು ಬಂಧಿಸಿರುವುದು ಖಂಡನೀಯ ಎಂದರು.

ಅನವಶ್ಯಕವಾಗಿ ಮೊಕದ್ದಮೆ ದಾಖಲಿಸಿ ಪೊಲೀಸ್ ದೌರ್ಜನ್ಯ ನಡೆಸುತ್ತಿರುವುದನ್ನು ಕೂಡಲೇ ಕೈಬಿಡಬೇಕು. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಪಕ್ಷದ ವತಿಯಿಂದ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬಳಿಕ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಪಕ್ಷದ ಮಡಿಕೇರಿ ಕ್ಷೇತ್ರ ಸಮಿತಿ ಅಧ್ಯಕ್ಷ ಎಸ್.ಬಿ.ಭರತ್ ಕುಮಾರ್, ಜಿ.ಪಂ. ಮಾಜಿ ಅಧ್ಯಕ್ಷ ವಿ.ಎಂ.ವಿಜಯ, ಜಿ.ಪಂ. ಸದಸ್ಯೆ ಎನ್.ಎಸ್.ಗೀತಾ, ತಾ.ಪಂ. ಸದಸ್ಯರಾದ ಎಚ್.ಆರ್. ಸುರೇಶ್, ಪವಿತ್ರ ದೇವೇಂದ್ರ, ಪಾರ್ವತಮ್ಮ, ಗ್ರಾ.ಪಂ. ಅಧ್ಯಕ್ಷೆ ತಿಲಕ ರೈ, ಸದಸ್ಯೆ ಉಷಾ, ಪ್ರಮುಖರಾದ  ಅಜೀಶ್, ದಿನೇಶ್, ಕಿಬ್ಬೆಟ್ಟ ಮಧು, ಮಸಗೋಡು ಸತೀಶ್, ಚನ್ನಾಪುರ ಅಶ್ವತ್ ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.