ADVERTISEMENT

ಬಂದರು ಮೂಲಕ ಕಾಫಿ ರಫ್ತಿಗೆ ಅಗತ್ಯ ಸಹಕಾರ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 8:20 IST
Last Updated 21 ಫೆಬ್ರುವರಿ 2011, 8:20 IST

ಮಡಿಕೇರಿ: ಕರ್ನಾಟಕದ ಏಕೈಕ ಪ್ರಮುಖ ಬಂದರಾದ ನವ ಮಂಗಳೂರು ಬಂದರಿನ ಮೂಲಕ ಕೊಡಗಿನ ಕಾಫಿ ಉದ್ಯಮಿಗಳು ವಿದೇಶಗಳಿಗೆ ಕಾಫಿ ರಫ್ತು ಮಾಡುವುದಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್ ಅಧ್ಯಕ್ಷ ಪಿ. ತಮಿಳ್‌ವಾನ್ನನ್ ಭರವಸೆ ನೀಡಿದ್ದಾರೆ.ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್, ಎಫ್‌ಕೆಸಿಸಿಐ ಹಾಗೂ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಸಂಸ್ಥೆಯ ಸಹಯೋಗದಲ್ಲಿ ಕೂರ್ಗ್ ಇಂಟರ್ ನ್ಯಾಷನಲ್ ಹೋಟೆಲ್ ಸಭಾಂಗಣದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ವ್ಯಾಪಾರ ಉತ್ತೇಜನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕೊಡಗಿನ ಕಾಫಿ ರಫ್ತುದಾರರು 450 ಕಿ.ಮೀ. ದೂರವಿರುವ ಕೊಚ್ಚಿ ಬಂದರಿನಿಂದ ಕಾಫಿ ರಫ್ತು ಮಾಡುವುದಕ್ಕೆ ಹಡಗು ಸರಕು ರವಾನೆ ಬಾಡಿಗೆಗಾಗಿ 38 ಸಾವಿರ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಅದೇ, ಕೇವಲ 134 ಕಿ.ಮೀ. ದೂರದಲ್ಲಿರುವ ಮಂಗಳೂರು ಬಂದರಿನ ಮೂಲಕ ರಫ್ತು ಮಾಡಲು 15 ಸಾವಿರ ರೂಪಾಯಿ ಖರ್ಚು ಮಾಡಿದರೆ ಸಾಕು. ಅಲ್ಲದೆ, ಬಂದರಿನ ಮೂಲಕ ರಫ್ತು ಮಾಡುವ ರಫ್ತುದಾರರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಟ್ರಸ್ಟ್ ಬದ್ಧವಾಗಿದೆ’ ಎಂದು ಆಶ್ವಾಸನೆ ನೀಡಿದರು.

‘ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಂದ 2010-11ನೇ ಸಾಲಿನಲ್ಲಿ ಇದುವರೆಗೆ 94,636 ಟನ್‌ಗಳಷ್ಟು ದಾಖಲೆ ಪ್ರಮಾಣದ ಕಾಫಿಯನ್ನು ಮಂಗಳೂರು ಬಂದರಿನ ಮೂಲಕ ರಫ್ತು ಮಾಡಲಾಗಿದೆ. ಸುಮಾರು 3 ಲಕ್ಷ ಟನ್ ದೇಶೀಯ ಕಾಫಿ ಉತ್ಪಾದನೆಯಲ್ಲಿ ಶೇ 60ರಷ್ಟು ರಫ್ತಾಗುತ್ತಿರುವಾಗ ಇನ್ನಷ್ಟು ಪ್ರಮಾಣದಲ್ಲಿ ಕಾಫಿ ರಫ್ತು ಮಾಡಲು ಟ್ರಸ್ಟ್ ಬಯಸುತ್ತದೆ. ನ್ಯೂ ಮಂಗಳೂರು ಬಂದರು ಯಾವುದೇ ರೀತಿಯ ಸಾಮಗ್ರಿಯನ್ನು ಸ್ಪರ್ಧಾತ್ಮಕ ದರ ಹಾಗೂ ಜಾಗರೂಕತೆಯಿಂದ ನಿಭಾಯಿಸಲು ಸನ್ನದ್ಧವಾಗಿದೆ’ ಎಂದು ಹೇಳಿದರು.

ಕಂಪ್ಯೂಟರೀಕರಣ: ‘ಸುಮಾರು 11 ಕೋಟಿ ರೂಪಾಯಿ ವೆಚ್ಚದಲ್ಲಿ ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್ ಅನ್ನು ಶೀಘ್ರ ಕಂಪ್ಯೂಟರೀಕರಣಗೊಳಿಸಲು ಉದ್ದೇಶಿಸಲಾಗಿದೆ.ಇದರಿಂದ ಸಾರ್ವಜನಿಕರು ಬಂದರಿನ ಬಗ್ಗೆ ಕಂಪ್ಯೂಟರ್ ಮುಂದೆ ಕೂತಲ್ಲಿಯೇ ಮಾಹಿತಿ ಪಡೆಯಲು ಸಹಕಾರಿಯಾಗಲಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಪಶ್ಚಿಮ ಕರಾವಳಿಯಲ್ಲಿ ವೇಗದಲ್ಲಿ ಬೆಳೆಯುತ್ತಿರುವ ನ್ಯೂ ಮಂಗಳೂರು ಬಂದರು 36 ವರ್ಷಗಳ ಸೇವೆಯನ್ನು ಪೂರೈಸಿದ್ದು, 14 ಮೀಟರ್ ಆಳದ ಡ್ರಾಫ್ಟ್ ಹೊಂದಿದೆ. 1974-75ರಲ್ಲಿ ಕೇವಲ ಒಂದು ಲಕ್ಷ ಟನ್‌ಗಿಂತ ಕಡಿಮೆ ಹಾಗೂ ಕೇವಲ 77 ಹಡಗುಗಳ ವಹಿವಾಟು ನಡೆಸುತ್ತಿದ್ದ ಬಂದರು, ಇದೀಗ 1186 ಹಡಗುಗಳ ಮೂಲಕ 35.52 ಮಿಲಿಯನ್ ಟನ್ ವ್ಯಾಪಾರ ವಹಿವಾಟು ನಡೆಸುತ್ತಿದೆ ಎಂದು ಮಾಹಿತಿ ನೀಡಿದರು.

ಎಫ್‌ಕೆಸಿಸಿಐ ಅಧ್ಯಕ್ಷ ಎನ್.ಎಸ್. ಶ್ರೀನಿವಾಸಮೂರ್ತಿ ಮಾತನಾಡಿ, 2009-10ನೇ ಸಾಲಿನಲ್ಲಿ ಕರ್ನಾಟಕ 1,60,000 ಕೋಟಿ ರೂಪಾಯಿ ಮೌಲ್ಯದ ಸರಕುಗಳನ್ನು ರಫ್ತು ಮಾಡಿದೆ. ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್‌ನ ಉತ್ತೇಜನದ ನಡುವೆಯೂ ಹೊರಗಿನ ಮುಂಬೈ, ಟ್ಯುಟುಕೊರಿನ್, ಕೊಚ್ಚಿ ಹಾಗೂ ಚೆನ್ನೈ ಬಂದರುಗಳ ಮೂಲಕ ರಾಜ್ಯದ ರಫ್ತುದಾರರು ಸರಕು ರಫ್ತು ಮಾಡುತ್ತಿರುವುದು ದುರದೃಷ್ಟಕರ. ಇದಕ್ಕೆ ಸಂಪರ್ಕ ಸಮಸ್ಯೆ ಮುಖ್ಯ ಕಾರಣ. ಈ ಹಿನ್ನೆಲೆಯಲ್ಲಿ ರಸ್ತೆ ಅಭಿವೃದ್ಧಿ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ತುರ್ತು ಕಲ್ಪಿಸುವಂತೆ ಸಂಸ್ಥೆಯು ಸರ್ಕಾರವನ್ನು ಒತ್ತಾಯಿಸಿದೆ ಎಂದರು.

ಎಫ್‌ಕೆಸಿಸಿ ಉಪಾಧ್ಯಕ್ಷ ಬಂಗೇರ ಮಾತನಾಡಿ, ಬೆಂಗಳೂರಿನಲ್ಲಿಯೂ ಇದೇ ರೀತಿ ಉದ್ಯಮಿಗಳು, ಬಂದರು ಬಳಕೆದಾರರು ಹಾಗೂ ಸರಕು ಸಾಗಾಟದಾರರ ಜೊತೆ ಸಂವಾದ ಕಾರ್ಯಕ್ರಮ ನಡೆಸಿದಲ್ಲಿ ರಾಜಧಾನಿಯಿಂದಲೂ ಅಧಿಕ ಸಂಖ್ಯೆಯ ಉದ್ಯಮಿಗಳು ಮಂಗಳೂರು ಬಂದರಿನ ಮೂಲಕ ಸರಕು ಸಾಗಿಸಲು ಮುಂದಾಗುತ್ತಾರೆ ಎಂದು ಸಲಹೆ ಮಾಡಿದರು.

ಮೇ 1ರಂದು ವಾಹನ ಸಂಚಾರಕ್ಕೆ ಮುಕ್ತ: ಈ ಮಧ್ಯೆ, ಸಭೆಯಲ್ಲಿ ಭಾಗವಹಿಸಿದ್ದ ಕೆಆರ್‌ಡಿಸಿಎಲ್ ಎಂಜಿನಿಯರ್, ಮಡಿಕೇರಿ- ಸಂಪಾಜೆ ನಡುವೆ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಏಪ್ರಿಲ್ ಅಂತ್ಯದೊಳಗೆ ಮುಗಿಸಿ, ಕೊಟ್ಟ ಮಾತಿನಂತೆ ಮೇ 1ರಂದು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಪ್ರಕಟಿಸಿದರು.

ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್‌ನ ಉಪಾಧ್ಯಕ್ಷ ಟಿ.ಎಸ್.ಎನ್. ಮೂರ್ತಿ, ಪರಿಸರ ಮಾಲಿನ್ಯ ತಡೆಗೆ ಟ್ರಸ್ಟ್ ಕೈಗೊಂಡಿರುವ ಯೋಜನೆಗಳ ಬಗ್ಗೆ ವಿವರಿಸಿದರು. ಟ್ರಸ್ಟ್‌ನ ಸಂಚಾರ ವ್ಯವಸ್ಥಾಪಕ ಎಸ್. ಗೋಪಾಲಕೃಷ್ಣ ಸ್ವಾಗತಿಸಿದರು. ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಜಿ. ಚಿದ್ವಿಲಾಸ್ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಬಿ.ಎನ್. ಪ್ರಕಾಶ್ ವಂದಿಸಿದರು. ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‌ನ ಮಾಜಿ ಅಧ್ಯಕ್ಷ ಗಿರೀಶ್ ಗಣಪತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.