ಮಡಿಕೇರಿ: ಭೂಮಿ ರಹಿತರಿಗೆ ಭೂಮಿ ನೀಡುವಂತೆ ಹಾಗೂ ರೈತರ ಭೂಮಿ ರಕ್ಷಣೆಗೆ ಆಗ್ರಹಿಸಿ ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.
ಕೋಟೆ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ. ದುರ್ಗಾಪ್ರಸಾದ್ ಮಾತನಾಡಿ, ಜಿಲ್ಲೆಯ ಭೂಮಿಯು ದೊಡ್ಡ ಉದ್ಯಮಿಗಳ ಪಾಲಾಗುತ್ತಿದೆ. ಇದಕ್ಕೆ ತಡೆಯೊಡ್ಡಿ ನಿವೇಶನ ರಹಿತ ಬಡವರಿಗೆ ಹಂಚಬೇಕು.
ಭೂ ರಹಿತ ನಿವೃತ್ತ ಸೈನಿಕರಿಗೆ, ವಿಧವೆಯರಿಗೆ ಮತ್ತು ಅವರ ಮಕ್ಕಳಿಗೆ ಸರ್ಕಾರ ಭೂಮಿಯನ್ನು ನೀಡಬೇಕು ಎಂದು ಒತ್ತಾಯಿಸಿದರು. ಭೂಮಿ ನೀಡುವಂತೆ ಒತ್ತಾಯಿಸಿ ಡಿವೈಎಫ್‌ಐ, ಕೂರ್ಗ್ ಡಿಸ್ಟ್ರಿಕ್ಟ್ ಜನರಲ್ ವರ್ಕರ್ಸ್ ಯೂನಿಯನ್‌ಗಳಂತಹ ಸಂಘಟನೆಗಳು ಅರ್ಜಿ ನೀಡಿವೆ. ಇವುಗಳ ಜೊತೆ ಸೈನಿಕರು, ಮಾಜಿ ಸೈನಿಕರು ನೀಡಿರುವ ಅರ್ಜಿಗಳನ್ನು ತಿರಸ್ಕರಿಸಬಾರದು. ಜಿಲ್ಲೆಯ ವಿವಿಧೆಡೆ ಭೂಮಿಗಾಗಿ ಅರ್ಜಿ ಸಲ್ಲಿಸಿದ ಭೂರಹಿತರಿಗೆಲ್ಲಾ ಭೂಮಿ ನೀಡಬೇಕು ಎಂದು ಆಗ್ರಹಿಸಿದರು.
ಕಾಫಿ ತೋಟದಲ್ಲಿ ಕಾರ್ಮಿಕರಾಗಿ ದುಡಿದು ನಿವೃತ್ತರಾಗುವವರೆಗೆ ಆದ್ಯತೆ ವೆುೀಲೆ ನಿವೇಶನ ನೀಡಬೇಕು. ಸರ್ಕಾರಿ ಜಮೀನುಗಳಲ್ಲಿ ವಾಸವಾಗಿರುವ ಬಡವರಿಗೆ ಅಕ್ರಮ-ಸಕ್ರಮದಡಿ ನಿವೇಶನ ಮಂಜೂರು ಮಾಡಬೇಕೆಂದರು. ವಿಶ್ವ ಪಾರಂಪರಿಕ ತಾಣ, ಪಶ್ಚಿಮ ಘಟ್ಟಕ್ಕೆ ಸೇರ್ಪಡೆ, ಗಜಪಥ ನಿರ್ಮಾಣ, ಹುಲಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೊಳಿಸುವ ಮೊದಲು ಸ್ಥಳೀಯರ ಅಭಿಪ್ರಾಯ ಪಡೆಯಬೇಕು. ಅವರೊಂದಿಗೆ ಚರ್ಚಿಸಿದ ನಂತರ ತೀರ್ಮಾನ ಕೈಗೊಳ್ಳಬೇಕು ಎಂದು ಹೇಳಿದರು.
ಬಾಣೆ ಜಮೀನು ಕುರಿತು ವಿಧಾನಸಭೆಯಲ್ಲಿ ಕೈಗೊಳ್ಳಲಾದ ತಿದ್ದುಪಡಿಗೆ ಅಂಕಿತ ಹಾಕುವಂತೆ ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಅವರು ಸಲಹೆ ನೀಡಿದರು. ಪ್ರತಿಭಟನೆಯಲ್ಲಿ ಸಂಘಟನಾ ಸಮಿತಿ ಸದಸ್ಯರಾದ ಇಬ್ರಾಹಿಂ, ರಮೇಶ್, ಕಟ್ಟಡ ಕಾರ್ಮಿಕರ ಸಂಘದ ಖಾಸಿಂ, ಡೇವಿಡ್, ಇಬ್ರಾಹಿಂ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.