ADVERTISEMENT

ಬಿಜೆಪಿ ಸರ್ಕಾರ ನೈತಿಕವಾಗಿ ಅಧಃಪತನಗೊಂಡಿದೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 9:00 IST
Last Updated 3 ಫೆಬ್ರುವರಿ 2011, 9:00 IST

ಮಡಿಕೇರಿ: ‘ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ಸರ್ಕಾರ ನೈತಿಕವಾಗಿ ಅಧಃಪತನಗೊಂಡಿದ್ದು, ದಿವಾಳಿತನದತ್ತ ಸಾಗಿದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬುಧವಾರ ಇಲ್ಲಿ ಟೀಕಿಸಿದರು. ನಗರದ ಕಾವೇರಿ ಹಾಲ್‌ನಲ್ಲಿ ನಡೆದ ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ. ಪ್ರದೀಪ್ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಭ್ರಷ್ಟಾಚಾರ ಆರೋಪಕ್ಕೆ ಗುರಿಯಾದ ಅಶೋಕ್ ಚವ್ಹಾಣ್, ಶಶಿ ತರೂರ್, ಎ. ರಾಜಾ, ಸುರೇಶ್ ಕಲ್ಮಾಡಿ, ನಟವರ್‌ಸಿಂಗ್ ಅವರಿಂದ ಕಾಂಗ್ರೆಸ್ ರಾಜೀನಾಮೆ ಪಡೆಯಿತು. ಆದರೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ಹಗರಣಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾದರೂ ಬಿಜೆಪಿ ವರಿಷ್ಠರು ಅವರ ರಾಜೀನಾಮೆ ಪಡೆದಿಲ್ಲ’ ಎಂದು ಟೀಕಿಸಿದರು.

‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅನೈತಿಕ ಕೆಲಸ ಮಾಡಿರುವುದನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಒಪ್ಪಿಕೊಂಡರೂ, ಕಾನೂನು ಬಾಹಿರ ಕೆಲಸ ಮಾಡಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಿರುವುದು ನಾಚಿಕೆಗೇಡು. ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ನೇತೃತ್ವದಲ್ಲಿ ಪಕ್ಷದ ಮುಖಂಡರಾದ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ರಾಷ್ಟ್ರಪತಿಗಳನ್ನು ಭೇಟಿ ಮಾಡಿ ರಾಜ್ಯಪಾಲರನ್ನು ವಾಪಸು ಕರೆಸಿಕೊಳ್ಳುವಂತೆ ಒತ್ತಾಯ ಮಾಡಿದ್ದು ದುರದೃಷ್ಟಕರ’ ಎಂದು ಜರೆದರು.

ಸಿಬಿಐ ತನಿಖೆಗೆ ಆಗ್ರಹ: ರಾಜ್ಯದ ವಿವಿಧೆಡೆ ಚರ್ಚ್‌ಗಳ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಬಿ.ಕೆ. ಸೋಮಶೇಖರ್ ವಿಚಾರಣಾ ಆಯೋಗ ನೀಡಿರುವ ಅಂತಿಮ ವರದಿಯಲ್ಲಿ ಸರ್ಕಾರ ಹಾಗೂ ಸಂಘ ಪರಿವಾರವನ್ನು ಖುಲಾಸೆಗೊಳಿಸಿರುವುದನ್ನು ಪ್ರಸ್ತಾಪಿಸಿದ ಅವರು, ‘ಮಧ್ಯಂತರ ವರದಿಯಲ್ಲಿ ಭಜರಂಗ ದಳ ಹಾಗೂ ಸಂಘ ಪರಿವಾರದ ಕೈವಾಡವಿದೆ ಎಂದು ಪ್ರಸ್ತಾಪಿಸಿದ ಆಯೋಗ, ಅಂತಿಮ ವರದಿಯಲ್ಲಿ ಸರ್ಕಾರ ಹಾಗೂ ಸಂಘ ಪರಿವಾರವನ್ನು ಖುಲಾಸೆಗೊಳಿಸಿರುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಆಯೋಗದ ವರದಿಯನ್ನು ತಿರಸ್ಕರಿಸಿ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

‘ಇಂತಹ ವರದಿಗಳಿಂದ ಮತೀಯ ಅಲ್ಪಸಂಖ್ಯಾತರು ಕಾನೂನಿನ ಬಗ್ಗೆ ಗೌರವ ಕಳೆದುಕೊಳ್ಳುವಂತಾಗಿದೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸುವ ಮೂಲಕ ತಪ್ಪಿತಸ್ಥರನ್ನು ಶಿಕ್ಷಿಸಬೇಕು’ ಎಂದು ಸಿದ್ದರಾಮಯ್ಯ ಒತ್ತಾಯಿಸಿದರು. ಅವ್ಯವಹಾರ ಆರೋಪದ ಮೇರೆಗೆ ಕೃಷ್ಣಯ್ಯಶೆಟ್ಟಿ, ಕಟ್ಟಾಸುಬ್ರಹ್ಮಣ್ಯ ನಾಯ್ಡು, ರಾಮಚಂದ್ರಗೌಡ, ಅತ್ಯಾಚಾರ ಆರೋಪಕ್ಕೆ ಗುರಿಯಾದ ಹರತಾಳು ಹಾಲಪ್ಪ ರಾಜೀನಾಮೆ ನೀಡಿದ್ದನ್ನು ಪ್ರಸ್ತಾಪಿಸಿದ ಅವರು, ‘ಹಗಲು ದರೋಡೆ ನಡೆಸುತ್ತಿರುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಕಾಂಗ್ರೆಸ್ ಬೀದಿಗಿಳಿದು ಹೋರಾಟ ಆರಂಭಿಸಿದೆ. ಸಾರ್ವಜನಿಕ ಆಸ್ತಿಪಾಸ್ತಿ ಲೂಟಿ ಮಾಡಿದವರನ್ನು ಜೈಲಿಗೆ ಕಳಿಸಬೇಕಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಮಾತ್ರ ಇಂತಹ ಭ್ರಷ್ಟರನ್ನು ಜೈಲಿಗೆ ಕಳಿಸಲು ಸಾಧ್ಯವಾಗಲಿದೆ’ ಎಂದರು.

ಕಾಂಗ್ರೆಸ್ ಗತ ವೈಭವ ಮರುಕಳಿಸಲಿ
‘ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸೋಲು-ಗೆಲುವು ಸ್ವಾಭಾವಿಕ ಕ್ರಿಯೆ. ಒಂದು ಕಾಲದಲ್ಲಿ ಕೊಡಗು ಕಾಂಗ್ರೆಸ್‌ನ ಭದ್ರಕೋಟೆ. ಹೊಸ ಜಿಲ್ಲಾಧ್ಯಕ್ಷರ ಕಾಲದಲ್ಲಿ ಆ ಗತ ವೈಭವ ಮರುಕಳಿಸುವಂತಾಗಬೇಕು. ಯಾವುದೇ ಪಕ್ಷಕ್ಕೆ ಕಾರ್ಯಕರ್ತರೇ ಆಸ್ತಿ. ನಾಯಕರು ಹಾಗೂ ಕಾರ್ಯಕರ್ತರ ಜತೆ ನಿರಂತರ ಸಂಪರ್ಕ ಸಾಧಿಸಿ ಪಕ್ಷವನ್ನು ಸಂಘಟಿಸಲು ನೂತನ ಅಧ್ಯಕ್ಷರು ಪ್ರಯತ್ನ ನಡೆಸಬೇಕು’ ಎಂದು ಕರೆ ನೀಡಿದರು.

‘ಜನಪರ ಹೋರಾಟಗಳನ್ನು ಕೈಗೆತ್ತಿಕೊಂಡಾಗ ಖಂಡಿತಾ ಜನ ನಿಮ್ಮ ಜತೆ ಬರುತ್ತಾರೆ. ಕಾಂಗ್ರೆಸ್ ಪ್ರಸ್ತುತ ವಿರೋಧ ಪಕ್ಷದ ಸ್ಥಾನದಲ್ಲಿದ್ದರೂ ನಮಗೇನೂ ಕೆಲಸ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ’ ಎಂದು ಸಲಹೆ ಮಾಡಿದರು. ಹೆಸರಿಗೆ ಮಾತ್ರ ಅಧ್ಯಕ್ಷ: ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ. ಪ್ರದೀಪ್, ‘ನಾನು ಹೆಸರಿಗೆ ಮಾತ್ರ ಅಧ್ಯಕ್ಷ. ಒಬ್ಬ ಕಾರ್ಯಕರ್ತನಂತೆ ಗ್ರಾಮೀಣ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಪಕ್ಷವನ್ನು ಸಂಘಟಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ’ ಎಂದು ಭರವಸೆ ನೀಡಿದರು.

‘ಕೇವಲ ಅಧಿಕಾರ ಲಾಲಸೆ ಅಥವಾ ರಾಜಕೀಯ ಲಾಭದ ದೃಷ್ಟಿಯಿಂದ ಪಕ್ಷವನ್ನು ಕಟ್ಟುವ ಅಗತ್ಯವಿಲ್ಲ. ಬದಲಿಗೆ, ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಉತ್ತಮ ಸಮಾಜ ನಿರ್ಮಾಣದ ದೃಷ್ಟಿಯಿಂದ ಪಕ್ಷವನ್ನು ಸಂಘಟಿಸಬೇಕಾಗಿದೆ. ನಾನು ಕಾಂಗ್ರೆಸ್ ಅಧ್ಯಕ್ಷನಾದ ಮೇಲೆ ಎಲ್ಲ ಮುಖಂಡರು ಅಗತ್ಯ ಸಹಕಾರ- ಬೆಂಬಲ ನೀಡುವ ಭರವಸೆ ನೀಡಿದ್ದಾರೆ. ಹೀಗಾಗಿ, ಅತ್ಯಂತ ನಿಷ್ಠೆ, ಪ್ರಾಮಾಣಿಕತೆಯಿಂದ ಪಕ್ಷವನ್ನು ಕಟ್ಟಲು ಪ್ರಯತ್ನಿಸುತ್ತೇನೆ’ ಎಂದು ಆಶ್ವಾಸನೆ ನೀಡಿದರು.

‘ಪ್ರತಿ ದಿನ 18 ಗಂಟೆಗಳ ಕಾಲ ಪಕ್ಷದ ಸಂಘಟನೆಗಾಗಿ ಶ್ರಮಿಸಲು ಸಿದ್ಧನಿದ್ದೇನೆ. ಜಿಲ್ಲೆಯಲ್ಲಿ ಒಂದು ರಾಜಕೀಯ ವ್ಯವಸ್ಥೆ ಕಲ್ಪಿಸಲು ಹಿರಿಯರು ಸೂಕ್ತ ಮಾರ್ಗದರ್ಶನ ನೀಡುವುದರ ಜತೆಗೆ, ಕಾರ್ಯಕರ್ತರು ಇದೇ ಹುಮ್ಮಸ್ಸಿನಿಂದ ಪ್ರೋತ್ಸಾಹ ನೀಡಬೇಕು’ ಎಂದು ಕೋರಿದರು. ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾನಾಯ್ಡು, ಶಾಸಕರಾದ ದಿನೇಶ್ ಗುಂಡೂರಾವ್, ಎನ್.ಎ. ಹ್ಯಾರಿಸ್, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ವೀಣಾ ಅಚ್ಚಯ್ಯ ಮಾತನಾಡಿದರು. ಕೆಪಿಸಿಸಿ ಸದಸ್ಯ ಟಿ.ಪಿ. ರಮೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ಅಬ್ದುಲ್ ರೆಹಮಾನ್ ಸ್ವಾಗತಿಸಿದರು. ತಾ.ಪಂ. ಸದಸ್ಯ ನೆರವಂಡ ಉಮೇಶ್ ಕಾರ್ಯಕ್ರಮ ನಿರೂಪಿಸಿದರು.

ಸಂಸದ ಎಚ್. ವಿಶ್ವನಾಥ್, ಮಾಜಿ ಸಚಿವರಾದ ಎಂ.ಎಂ. ನಾಣಯ್ಯ, ಟಿ. ಜಾನ್, ಸುಮಾ ವಸಂತ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಎನ್. ಪ್ರೇಮ್‌ಕುಮಾರ್, ಬೆಂಗಳೂರು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಎಂ. ನಾಗರಾಜ್, ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್. ಅರುಣ್ ಮಾಚಯ್ಯ, ಕೆಪಿಸಿಸಿ ಸದಸ್ಯರಾದ ಕೆ.ಪಿ. ಚಂದ್ರಕಲಾ, ಪದ್ಮಿನಿ ಪೊನ್ನಪ್ಪ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಜಿ. ಕುಟ್ಟಪ್ಪ, ಮುಖಂಡರಾದ ಮಿಟ್ಟು ಚಂಗಪ್ಪ, ತಾರಾ ಅಯ್ಯಮ್ಮ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.