ಮಡಿಕೇರಿ: ಅನುಮೋದಿತ ನಕ್ಷೆ ಉಲ್ಲಂಘಿಸಿ ನಿರ್ಮಾಣವಾಗುತ್ತಿದ್ದ ಇಲ್ಲಿನ ಮೀನು ಮಾರುಕಟ್ಟೆ ಬಳಿಯ ಅಪಾರ್ಟ್‌ಮೆಂಟ್ ಕಾಮಗಾರಿಗೆ ತಡೆಯೊಡ್ಡಲಾಗಿದೆ ಎಂದು ನಗರಸಭೆಯ ಪೌರಾಯುಕ್ತೆ ಬಿ.ಬಿ. ಪುಷ್ಪಾವತಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ನಗರದ ಬ್ಲಾಕ್ ನಂಬರ್ 7ರಲ್ಲಿ ಸರ್ವೇ ನಂಬರ್ 5/5, 5/4, 5/ಎ, 5/1 ಮತ್ತು 5/3ರಲ್ಲಿ ಡಿಎಚ್‌ಎಸ್ ಕಂಪೆನಿಯ ಅಪಾರ್ಟ್‌ಮೆಂಟ್ ನಿರ್ಮಾಣಗೊಳ್ಳುತ್ತಿದೆ. ನೆಲಮಹಡಿ ಸೇರಿ ಐದು ಮಹಡಿಗಳನ್ನು ಕಟ್ಟಲು ನಗರಸಭೆ ಹಾಗೂ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ಅನುಮತಿ ಪಡೆಯಲಾಗಿತ್ತು.
ಆದರೆ, ಈಗ ಕಟ್ಟಡವು ಏಳು ಅಂತಸ್ತಿನವರೆಗೆ ನಿರ್ಮಾಣವಾಗಿದೆ. ಇದರ ಬಗ್ಗೆ ಸ್ಥಳೀಯರು ನಗರಸಭೆಗೆ ದೂರು ನೀಡಿದ್ದರು. ಇದರನ್ವಯ ಸ್ಥಳ ಪರಿಶೀಲಿಸಿ ವರದಿ ನೀಡುವಂತೆ ಮುಡಾ ಆಯುಕ್ತರಿಗೆ ಪೌರಾಯುಕ್ತರು ಪತ್ರ ಬರೆದಿದ್ದರು.
ಇದರ ಆಧಾರದ ಮೇಲೆ ಮುಡಾ ಆಯುಕ್ತರು, ‘ಅನುಮೋದಿತ ನಕ್ಷೆಯನ್ನು ಉಲ್ಲಂಘಿಸಿ ಕಟ್ಟಡ ನಿರ್ಮಾಣವಾಗಿದೆ’ ಎಂದು ಪೌರಾಯುಕ್ತರಿಗೆ ವರದಿ ನೀಡಿದರು. ಇದನ್ನು ಪರಿಶೀಲಿಸಿದ ಪೌರಾಯುಕ್ತರು, ಕಟ್ಟಡ ನಿರ್ಮಿಸುತ್ತಿರುವ ಡಿ.ಎಚ್. ಮೊಯಿದು ಅವರಿಗೆ ನೋಟಿಸ್ ನೀಡಿ ವಿವರಣೆ ಕೇಳಿದ್ದಾರೆ. ಅಲ್ಲದೇ, ಕಟ್ಟಡ ನಿರ್ಮಾಣಕ್ಕೆ ನೀಡಲಾಗಿದ್ದ ಅನುಮತಿಯನ್ನು ರದ್ದುಗೊಳಿಸಿದ್ದಾರೆ.
ಎಚ್ಚರಿಕೆ: ‘ನಿಯಮ ಮೀರಿ ಕಟ್ಟಡಗಳನ್ನು ನಿರ್ಮಿಸಿದರೆ ಅವುಗಳ ವಿರುದ್ಧ ಯಾವುದೇ ಮುಲಾಜಿಲ್ಲದೇ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಪೌರಾಯುಕ್ತೆ ಪುಷ್ಪಾವತಿ ಎಚ್ಚರಿಕೆ ನೀಡಿದ್ದಾರೆ.
‘ಮಡಿಕೇರಿಯು ಗುಡ್ಡಗಾಡು ಪ್ರದೇಶವಾಗಿದ್ದು, ಇಲ್ಲಿನ ಮಣ್ಣು ಸಡಿಲವಾಗಿದ್ದು ಬೃಹದಾಕಾರದ ಕಟ್ಟಡಗಳ ನಿರ್ಮಾಣಕ್ಕೆ ಯೋಗ್ಯವಾಗಿಲ್ಲ. ಬೃಹದಾಕಾರದ ಕಟ್ಟಡಗಳ ಒತ್ತಡವನ್ನು ಇಲ್ಲಿನ ನೆಲ ಸಹಿಸುವುದಿಲ್ಲ. ಕುಸಿದು ಬೀಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ದುರದೃಷ್ಟವಶಾತ್ ಕಟ್ಟಡ ಕುಸಿದು ಬಿದ್ದು, ಅನಾಹುತ ಸಂಭವಿಸಿದರೆ ಯಾರು ಹೊಣೆಯಾಗುತ್ತಾರೆ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.