ADVERTISEMENT

ಬೇತು: ಮುಗಿಯದ ನೀರಿನ ಬವಣೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2012, 5:25 IST
Last Updated 4 ಜೂನ್ 2012, 5:25 IST

ನಾಪೋಕ್ಲು: ನಾಪೋಕ್ಲು ಪಟ್ಟಣದಿಂದ ಒಂದು ಕಿ.ಮೀ. ಅಂತರದಲ್ಲಿರುವ ಬೇತು ಗ್ರಾಮದ ಮಂದಿ ನೀರಿಲ್ಲದೇ ಪರದಾಡುತ್ತಿದ್ದಾರೆ. ಈ ಗ್ರಾಮದ ಸುತ್ತ ನೀರಿನ ಸೆಲೆ ಸಾಕಷ್ಟಿದ್ದರೂ ಗ್ರಾಮದ ಮಂದಿಗೆ ನೀರಿಗೆ ತತ್ವಾರ!

ಸಮರ್ಪಕ ನೀರು ಸರಬರಾಜು ಯೋಜನೆ ಇಲ್ಲದೇ ಬೇಸಿಗೆಯಲ್ಲಿ ಇಡೀ ಗ್ರಾಮದ ಮಂದಿ ನೀರಿನ ಬವಣೆಯಿಂದ ಬಳಲಿದೆ. ನೀರಿಗಾಗಿ ಕೊಳವೆ ಬಾವಿಯನ್ನು, ದೂರದ ಹೊಳೆಯನ್ನು ಅವಲಂಬಿಸುವಂತಾಗಿದೆ. ಗ್ರಾಮ ಪಂಚಾಯಿತಿ ವತಿಯಿಂದ ನೀರು ಸರಬರಾಜಿಗಾಗಿ  ಸಾಕಷ್ಟು ಯೋಜನೆ ರೂಪಿಸಿದ್ದರೂ ನೀರು ಪೂರೈಕೆಯ ಸಮಸ್ಯೆಗಳು ಮುಗಿಯುತ್ತಿಲ್ಲ.

ನೀರು ಹರಿಯುವ ಕೊಳವೆ, ಪಂಪ್ ದುರಸ್ತಿ, ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಹೀಗೆ ಹತ್ತಾರು ಸಮಸ್ಯೆಗಳೊಂದಿಗೆ ಗ್ರಾಮಸ್ಥರಿಗೆ ತಿಂಗಳಿಗೆ ಮೂರು ದಿನ ನೀರು ಸಿಕ್ಕರೆ ಅದೇ ಭಾಗ್ಯ ಎಂಬಂತಾಗಿದೆ.

ಈ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಬಳಿ ನೀರು ಸಂಗ್ರಹಣಾ ತೊಟ್ಟಿ ಇದೆ. ಗ್ರಾಮದ ಮಕ್ಕಿ ದೇವಾಲಯಕ್ಕೆ ತೆರಳುವ ರಸ್ತೆ ಬದಿಯಲ್ಲಿ ಸ್ವಜಲಧಾರಾ ಯೋಜನೆಯಡಿ ನಿರ್ಮಿಸಲಾದ ಬೃಹತ್ ನೀರಿನ ಟ್ಯಾಂಕ್ ಇದೆ. ಆದರೆ ನೀರು ಪೂರೈಕೆಯ ಯೋಜನೆಗಳು ವಿಫಲಗೊಂಡು ಟ್ಯಾಂಕ್ ಎಂದಿಗೂ ಭರ್ತಿಯಾಗುವುದೇ ಇಲ್ಲ.

ವರ್ಷದ ಆರಂಭದಲ್ಲಿ ಹತ್ತು ಅಶ್ವಶಕ್ತಿಯ ಮೋಟರ್ ಪಂಪ್ ದುರಸ್ತಿಯಾಗಿ ಬರಲು ಎರಡು ಮೂರು ತಿಂಗಳು ಸಂದಿತು. ಬಳಿಕ ಅಳವಡಿಸಲಾಗಿರುವ ಪೈಪ್‌ಗಳನ್ನು ಸರಿಪಡಿಸಲು ಸಾಕಷ್ಟು ಸಮಯ ತೆಗೆದುಕೊಂಡಿತು. ಎಲ್ಲಾ ಸರಿಯಾಗಿ ಇನ್ನೇನು ನೀರು ಪೂರೈಸಬೇಕು ಎನ್ನುವಷ್ಟರಲ್ಲಿ ವಿದ್ಯುತ್ ಸಂಪರ್ಕ ಅಡಚಣೆಯುಂಟಾಗಿ ಮತ್ತೆ ನೀರಿಗೆ ತತ್ವಾರ ಉಂಟಾಗಿದೆ.

ಗ್ರಾಮಕ್ಕೆ ನೀರು ಸರಬರಾಜಿನ ವ್ಯವಸ್ಥೆಯನ್ನು ಗ್ರಾಮ ಪಂಚಾಯಿತಿ ಮೊದಲ ಆದ್ಯತೆಯಾಗಿ ರೂಪಿಸಿಕೊಡಲಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.