ADVERTISEMENT

ಬೋನಿಗೆ ಬಿದ್ದ ಹುಲಿ: ದೂರವಾದ ಆತಂಕ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2012, 9:30 IST
Last Updated 21 ಅಕ್ಟೋಬರ್ 2012, 9:30 IST

ಗೋಣಿಕೊಪ್ಪಲು: ತಿತಿಮತಿಯ ಮುಖ್ಯ ರಸ್ತೆ ಬಳಿ ಮೂರು ದಿನಗಳ ಹಿಂದೆ ಹಸುವೊಂದನ್ನು ಬಲಿತೆಗೆದುಕೊಂಡು ಮತ್ತೊಂದು ಬಲಿಗಾಗಿ ಹೊಂಚು ಹಾಕುತ್ತಿದ್ದ ಹುಲಿ ಕೊನೆಗೂ ಶುಕ್ರವಾರ ರಾತ್ರಿ ಬೋನಿಗೆ ಬಿದ್ದಿದೆ.

ತಿತಿಮತಿಯ ಸತ್ಯನ್ ಅವರ ಕೊಟ್ಟಿಗೆ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ  ಶುಕ್ರವಾರ ರಾತ್ರಿ 11.30 ರ ವೇಳೆಯಲ್ಲಿ ಹುಲಿ ಸಿಕ್ಕಿಬಿತ್ತು. ಇದನ್ನು ಶನಿವಾರ ನಸುಕಿನಲ್ಲಿಯೇ ಮೈಸೂರಿನ ಮೃಗಾಲಯಕ್ಕೆ ಸಾಗಿಸಲಾಯಿತು.

ನಾಗರಹೊಳೆ ರಾಜೀವ್‌ಗಾಂಧಿ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಂತಿರುವ ತಿತಿಮತಿಯ ಸತ್ಯನ್ ಅವರ ಕೊಟ್ಟಿಗೆಗೆ ನುಗ್ಗಿ ಹಸುವನ್ನು ಕೊಂದು ಹಾಕಿದ್ದ ಹುಲಿ  ಕಳೆದ ಎರಡು ದಿನಗಳಿಂದ ಅದೇ ಸ್ಥಳದಲ್ಲಿ ಹೊಂಚು ಹಾಕುತ್ತಿತ್ತು.

ಇದರಿಂದ ಎಚ್ಚೆತ್ತುಕೊಂಡ  ನಾಗರಹೊಳೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬೆಳ್ಳಿಯಪ್ಪ, ಮತ್ತಿಗೋಡು ವಲಯ ಅರಣ್ಯಾಧಿಕಾರಿ ದೇವರಾಜು ಹುಲಿ ಸೆರೆ ಹಿಡಿಯಲು ಬೋನು ಇಟ್ಟು ಕಾಯುತ್ತಿದ್ದರು. ಎರಡೇ ದಿನಗಳಲ್ಲಿ ಹುಲಿ ಬೋನಿಗೆ ಬಿದ್ದು ಅರಣ್ಯಾಧಿಕಾರಿಗಳು ನಿಟ್ಟುಸಿರು ಬಿಡುವಂತೆ ಮಾಡಿದೆ.

ಶನಿವಾರ ರಾತ್ರಿ ಬೋನಿನ ಬಳಿ ವಲಯ ಅರಣ್ಯಾಧಿಕಾರಿಗಳಾದ ದೇವರಾಜು, ಗೋಪಾಲ, ಸಿಬ್ಬಂದಿ ಸಂಜು, ಮಾದೇಶ, ಲಿಂಗರಾಜು, ಚಿಕ್ಕಕಾಳ, ಬಸವರಾಜು ಕಾಯುತ್ತ ಕುಳಿತಿದ್ದರು. ಹುಲಿ ಬೋನಿಗೆ ಬಿದ್ದ ಸುದ್ದಿ ಕೇಳಿ ಮಧ್ಯರಾತ್ರಿಯಲ್ಲಿಯೇ ತಿತಿಮತಿ ಸುತ್ತಮುತ್ತಲಿನ ಜನತೆ ಸಾಗರದಂತೆ ಹರಿದು ಬಂದು ಹುಲಿಯನ್ನು ವೀಕ್ಷಿಸಿದರು. 

ಕಳೆದ ವರ್ಷ ಕಾನೂರು ಸುತ್ತಮುತ್ತ ಒಂದು ತಿಂಗಳ ಕಾಲ  15  ಜಾನುವಾರುಗಳನ್ನು ಬಲಿತೆಗೆದುಕೊಂಡು  ಸೆರೆ ಸಿಕ್ಕದೇ ಅರಣ್ಯ ಇಲಾಖೆಗೆ ಚಳ್ಳೆಹಣ್ಣು ತಿನ್ನಿಸಿದ್ದ ಹುಲಿ ಇದೇ ಇರಬಹುದು ಎಂದು ಶಂಕಿಸಲಾಗಿದೆ.
ಇದೀಗ ವೈದ್ಯರು ಚಿಕಿತ್ಸೆ ನೀಡುತ್ತಿದ್ದು ಎರಡು ಮೂರು ತಿಂಗಳಲ್ಲಿ  ಗಾಯ ವಾಸಿಯಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT