ADVERTISEMENT

`ಮಕ್ಕಳಿಗೆ ಪುರಾಣಗಳ ಪರಿಚಯ ಮಾಡಿ'

​ಪ್ರಜಾವಾಣಿ ವಾರ್ತೆ
Published 10 ಜೂನ್ 2013, 6:56 IST
Last Updated 10 ಜೂನ್ 2013, 6:56 IST

ಮಡಿಕೇರಿ: ಬಾಲ್ಯಾವಸ್ಥೆಯಲ್ಲಿಯೇ ಪುರಾಣ ಕಥೆಗಳನ್ನು ಮಕ್ಕಳಿಗೆ ಹೇಳಿ ಬೆಳೆಸಿದರೆ, ಮಕ್ಕಳಲ್ಲಿ ಉತ್ತಮ ಸದ್ಗುಣಗಳು ರೂಪುಗೊಳ್ಳಲು ಸಾಧ್ಯ ಎಂದು ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕ ಡಾ. ಉಜಿರೆ ಶ್ರೀಧರ ಭಟ್ಟ ಅಭಿಪ್ರಾಯಪಟ್ಟರು.

ನಗರದ ಲಕ್ಷ್ಮೀನರಸಿಂಹ ಕಲ್ಯಾಣ ಮಂಟಪದಲ್ಲಿ ಭಾನುವಾರ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಹಾಗೂ ಶ್ರೀ ರಾಮಚಂದ್ರಾಪುರಮಠ ಕೊಡಗು ಹವ್ಯಕ ವಲಯ ಮತ್ತು ಬ್ರಹ್ಮಿಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನವು 20ನೇ ವರ್ಷದ ಅಂಗವಾಗಿ ಆಯೋಜಿಸಿದ್ದ `ವಿಂಶೋತ್ಸವ' ಕಾರ್ಯಕ್ರಮದ ಪುರಾಣ ಪ್ರವಚನ ಮಾಲಿಕಾ ಯೋಜನೆಯಲ್ಲಿ `ಬ್ರಹ್ಮಾಂಡ ಪುರಾಣ' ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

ಭಾರತಿಯರಿಗೆ ಇತಿಹಾಸದ ಅರಿವು ಕಡಿಮೆ ಎನ್ನುವ ಮಾತಿದೆ. ಆದರೆ, ಪುರಾಣದ ಪುಟಗಳನ್ನು ತಿರುವಿ ಹಾಕಿದರೆ ಪುರಾತನ ಇತಿಹಾಸದ ಅಂಶಗಳನ್ನು ಅರಿಯಲು ಸಾಧ್ಯ ಎಂದರು.

ಪುರಾಣದಲ್ಲಿ `ಬ್ರಹ್ಮಾಂಡ ಪುರಾಣ' ಕೊನೆಯ ಪುರಾಣವಾಗಿದ್ದು, ಇದು ಮಾನವನ ಕಲ್ಪನೆಗೂ ಮಿಗಿಲಾದದ್ದು. ಪುರಾಣದ ವಿಚಾರ ಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ಹೇಳಿದರು.

ಉಡುಪಿ ಜಿಲ್ಲೆಯ ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ಪಾದೇಕಲ್ಲು ವಿಷ್ಣು ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿ, ಬ್ರಹ್ಮಿಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನವು 1993ರಿಂದ ಆರಂಭವಾಗಿ ಹಲವು ರೀತಿಯ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ಸಂಸ್ಕೃತ ವಿದ್ಯಾಭ್ಯಾಸ ಮಾಡಿದ ಎಲ್ಲ ವರ್ಗದ ವಿದ್ಯಾರ್ಥಿಗಳನ್ನು ಪ್ರೋತ್ಸಾಹ ನೀಡುತ್ತಿರುವುದಾಗಿ ತಿಳಿಸಿದರು.

ಪತ್ರಕರ್ತ ಜಿ.ರಾಜೇಂದ್ರ, ಸಾಹಿತಿ ಮಹಾಬಲೇಶ್ವರ ಭಟ್ಟ, ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಅಧ್ಯಕ್ಷ ಶರತ್ ಕುಮಾರ್ ಮತ್ತಿತರರು ಹಾಜರಿದ್ದರು.
ಕೊಡಗು ಹವ್ಯಕ ವಲಯದ ಅಧ್ಯಕ್ಷ ಹರೀಶ್ ಸ್ವಾಗತಿಸಿದರು. ಮಿತ್ತೂರು ತಿರುಮಲೇಶ್ವರ ಭಟ್ಟ ಹಾಗೂ ಶ್ರೀನಿವಾಸ್ ಭಟ್ಟ್ ಪ್ರಾರ್ಥಿಸಿದರು. ಈಶ್ವರ ಭಟ್ಟ ನಿರೂಪಿಸಿದರು. ಆರಂಭಕ್ಕೂ ಮೊದಲು ಭಕ್ತಿ ಗೀತಾ ಗಾಯನ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.