ADVERTISEMENT

ಮಡಿಕೇರಿಯಲ್ಲಿ ‘ಬಿಸು ಪರ್ಬ’ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2018, 9:12 IST
Last Updated 18 ಏಪ್ರಿಲ್ 2018, 9:12 IST
ಮಡಿಕೇರಿಯ ಕಾವೇರಿ ಹಾಲ್‌ನಲ್ಲಿ ಮಂಗಳವಾರ ಜಿಲ್ಲಾ ತುಳುವೆರ ಜನಪದ ಕೂಟದ ಆಶ್ರಯದಲ್ಲಿ ನಡೆದ ‘ಬಿಸು ಪರ್ಬ’ ಸಂತೋಷ ಕೂಟದಲ್ಲಿ ನಡೆದ ಯಕ್ಷ ನೃತ್ಯ
ಮಡಿಕೇರಿಯ ಕಾವೇರಿ ಹಾಲ್‌ನಲ್ಲಿ ಮಂಗಳವಾರ ಜಿಲ್ಲಾ ತುಳುವೆರ ಜನಪದ ಕೂಟದ ಆಶ್ರಯದಲ್ಲಿ ನಡೆದ ‘ಬಿಸು ಪರ್ಬ’ ಸಂತೋಷ ಕೂಟದಲ್ಲಿ ನಡೆದ ಯಕ್ಷ ನೃತ್ಯ   

ಮಡಿಕೇರಿ: ‘ತುಳುವರ ಸಂಸ್ಕಾರ, ಸಂಸ್ಕೃತಿ ನಾಶವಾಗುತ್ತಿದೆ. ಆ ನಿಟ್ಟಿನಲ್ಲಿ ಸಮುದಾಯ ಬಾಂಧವರಲ್ಲಿ ಎಚ್ಚರ ಅಗತ್ಯ. ನಮ್ಮ ಆಚಾರ, ಧಾರ್ಮಿಕ ನಂಬಿಕೆಗಳನ್ನು ನಾವೇ ಉಳಿಸಿ– ಬೆಳೆಸಿ ಮುಂದಿನ ಪೀಳಿಗೆಗೂ ಪಸರಿಸಬೇಕು’ ಎಂದು ಜಾನಪದ ವಿದ್ವಾಂಸ ದಯಾನಂದ ಕತ್ತಲ್ಸರ್ ಕೋರಿದರು.

ನಗರದ ಕಾವೇರಿ ಹಾಲ್‌ನಲ್ಲಿ ಮಂಗಳವಾರ ಜಿಲ್ಲಾ ತುಳುವೆರ ಜನಪದ ಕೂಟದ ಆಶ್ರಯದಲ್ಲಿ ನಡೆದ ‘ಬಿಸು ಪರ್ಬ’ ಸಂತೋಷ ಕೂಟದಲ್ಲಿ ಅವರು ಮಾತನಾಡಿದರು.

‘ತುಳುನಾಡಿನ ಸಾಂಪ್ರದಾಯಿಕ ಆಚರಣೆಗಳು ವಿನಾಶದತ್ತ ಸಾಗುತ್ತಿವೆ. ಪೂರ್ವಜರು ಆಚರಿಸಿದ ತುಳು ನಾಡ ಹಬ್ಬಗಳು ಮುಂದಿನ ಪೀಳಿಗೆಗೆ ನೆನಪಾಗಿ ಮಾತ್ರ ಉಳಿಯಬಹುದು. ಯುವ ಕರಲ್ಲಿ ಜಾಗೃತಿ ಅಗತ್ಯ’ ಎಂದು ಹೇಳಿದರು.

ADVERTISEMENT

ತುಳುವೆರ ಜನಪದ ಕೂಟದ ಮುಖ್ಯಸ್ಥ ಕಿಲ್ಪಾಡಿ ಶೇಖರ್ ಭಂಡಾರಿ ಮಾತನಾಡಿ, ಜಿಲ್ಲೆಯಲ್ಲಿ ತುಳುನಾಡಿನ ಸಂಸ್ಕೃತಿಯ ಪರಿಚಯ ಹಾಗೂ ಬಿಸು ಪರ್ಬ ಸಂತೋಷ ಕೂಟ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತೋಷ ತಂದಿದೆ. ಸಿರಿವಂತಿಕೆಯಿಂದ ಕೂಡಿದ ತುಳುನಾಡಿನ ಸಂಸ್ಕೃತಿಯನ್ನು ಜಿಲ್ಲೆಯಾದ್ಯಂತ ಪರಿಚಯಿಸಿ ಉಳಿಸಿ ಬೆಳೆಸುವಂತಾಗಬೇಕು ಎಂದು ಕರೆ ನೀಡಿದರು.

ಕೂಟದ ಉಪಾಧ್ಯಕ್ಷ ಬಿ.ವೈ. ಆನಂದ ರಘು ಮಾತನಾಡಿ, ಜಿಲ್ಲೆಯಲ್ಲಿ 2 ಲಕ್ಷಕ್ಕೂ ಹೆಚ್ಚು ತುಳು ಭಾಷಿಕರಿದ್ದು, ಇವರಲ್ಲಿ 13 ಜನಾಂಗಗಳ ಸಂಘಟನೆಗಳನ್ನು ಒಗ್ಗೂಡಿಸಿ ಕೂಟವನ್ನು ರಚಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯ ಯೋಜನೆಗಳನ್ನು ಹಮ್ಮಿಕೊಳ್ಳ ಲಾಗುವುದು ಎಂದು ಹೇಳಿದರು.

ಚಿತ್ರನಟ ಸುನಿಲ್‌, ತುಳುವೆರ ಜನಪದ ಕೂಟದ ಕಾರ್ಯಾದ್ಯಕ್ಷ ಹರೀಶ್ ಆಳ್ವ, ಕೂಟದ ಉಪಾಧ್ಯಕ್ಷ ಬಿ.ಡಿ. ನಾರಾಯಣ ರೈ, ಪ್ರಧಾನ ಕಾರ್ಯದರ್ಶಿ ಪಿ.ಎಂ. ರವಿ, ಬಾಲಕೃಷ್ಣ ರೈ, ಉದ್ಯಮಿ ಜಯಂತಿ ಶೆಟ್ಟಿ, ಸಲಹೆಗಾರ ಎಂ.ಡಿ. ನಾಣಯ್ಯ, ತಾಲ್ಲೂಕುಗಳ ಜನಪದ ಕೂಟದ ಅಧ್ಯಕ್ಷರಾದ ದಿನೇಶ್ ಕುಲಾಲ್, ದಾಮೋದರ ಆಚಾರ್ಯ, ವಿಜಯಲಕ್ಮಿ ಹಾಜರಿದ್ದರು. ಬಳಿಕ ತುಳು ಭಾಷೆಗೆ ಸಂಬಂಧಿಸಿದ ಜನಪದ ಶೈಲಿಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಮಂಗಳೂರಿನ ಉಮೇಶ್ ಮಿಜಾರ್ ತಂಡದವರಿಂದ ಹಾಸ್ಯಮಯ ನಾಟಕ ಪ್ರದರ್ಶನ ನಡೆಯಿತು.

‘ಮೂಢನಂಬಿಕೆ ಬಿಡಿ’

‘ಪೂರ್ವಿಕರು ಹೇಳಿಕೊಟ್ಟಿದ್ದ ಸಂಸ್ಕೃತಿಯನ್ನು ಆಧುನಿಕತೆಯ ವ್ಯಾಮೋಹಕ್ಕೆ ಒಳಗಾಗಿ ಮರೆಯುತ್ತಿದ್ದೇವೆ. ಭಯ ಭಕ್ತಿಯಿಂದ ಪೂಜೆ ಮಾಡುವ ದೈವಕೋಲ ಆಚರಣೆಯನ್ನು ಅವಹೇಳನ ಮಾಡುತ್ತಿದ್ದೇವೆ. ಮೂಲ ನಂಬಿಕೆಗೆ ಒತ್ತು ನೀಡಬೇಕು. ಮೂಢನಂಬಿಕೆಗೆ ಅಲ್ಲ’ ಎಂದು ದಯಾನಂದ ಕತ್ತಲ್ಸರ್ ವಾದಿಸಿದರು.

**

ತುಳುವೆರ ಜನಪದ ಕೂಟದ ಮೂಲಕ ಸಹಕಾರ ಬ್ಯಾಂಕ್ ಆರಂಭ ಮಾಡುವ ಚಿಂತನೆ ಇದ್ದು, ಸಮುದಾಯದ ಸಹಕಾರ ಅಗತ್ಯವಿದೆ – ಕಿಲ್ಪಾಡಿ ಶೇಖರ್ ಭಂಡಾರಿ, ಮುಖ್ಯಸ್ಥ, ತುಳುವೆರ ಜನಪದ ಕೂಟ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.