ADVERTISEMENT

ಮನರಂಜನೆಯುಕ್ತ ಪ್ರವಾಸೋದ್ಯಮಕ್ಕೆ ಮಹತ್ವ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2018, 8:55 IST
Last Updated 27 ಫೆಬ್ರುವರಿ 2018, 8:55 IST

ವಿರಾಜಪೇಟೆ: ‘ಶಿಕ್ಷಣ ಹಾಗೂ ಮನೋರಂಜನೆಯಿಂದ ಕೂಡಿದ ಪ್ರವಾಸೋದ್ಯಮ ಮುಂದಿನ ದಿನಗಳಲ್ಲಿ ಹೆಚ್ಚಿನ ಮಹತ್ವ ಪಡೆಯಲಿದೆ’ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅಭಿಪ್ರಾಯಪಟ್ಟರು. ಪಟ್ಟಣದಲ್ಲಿ ಸೋಮವಾರ ಪ್ರಧಾನಮಂತ್ರಿ ಕೌಶಲಾಭಿವೃದ್ಧಿ ಕೇಂದ್ರದ ಕೊಡಗು ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರವಾಸಿಗಳಿಗೆ ಪರಿಸರ, ಸಂಸ್ಕೃತಿಯ ಅರಿವು ಮೂಡಿಸುವುದು ಅಗತ್ಯ. ಈ ಮೂಲಕ ನಮ್ಮ ನೆಲ, ಜಲ ಹಾಗೂ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು. ಹಿಂದೆ ಬ್ರಿಟೀಷರು ಬಂದಾಗ ಅವರ ಕೈಯಲ್ಲಿ ಬೈಬಲ್ ಇತ್ತು. ನಮ್ಮ ಕೈಯಲ್ಲಿ ನೆಲವಿತ್ತು. ನಮಗೆ ಕಣ್ಣು ಮುಚ್ಚಲು ಬ್ರಿಟೀಷರು ಹೇಳಿದರು. ಕಣ್ಣು ಬಿಟ್ಟಾಗ ನಮ್ಮವರ ಕೈಯಲ್ಲಿ ಬೈಬಲ್, ಬ್ರಿಟೀಷರ ಕೈಯಲ್ಲಿ ನಮ್ಮ ನೆಲ ಇತ್ತು. ಮುಂದೆ ಹೀಗಾಗಬಾರದು’ ಎಂದು ತಿಳಿಸಿದರು.

‘ಕಲ್ಪನೆ ಬದಲಾದರೆ ನೋಡುವ ದೃಷ್ಟಿ, ಗುರಿ ಬದಲಾಗುತ್ತದೆ. ಕೌಶಲ ಕೈಗಾರಿಕೆ, ವೃತ್ತಗಷ್ಟೇ ಸೀಮಿತವಲ್ಲ. ಬದುಕಿನ ಎಲ್ಲ ರಂಗಗಳಿಗೆ ಅನ್ವಯವಾಗುತ್ತದೆ. ಪ್ರಧಾನಮಂತ್ರಿ ಕೌಶಲ ಕೇಂದ್ರದಲ್ಲಿ ವಯಸ್ಸಿನ ಅಂತರವಿಲ್ಲದೆ ಯಾರೂ ಬೇಕಾದರೂ ಉಚಿತವಾಗಿ ತರಬೇತಿ ಪಡೆಯಬಹುದು’ ಎಂದು ತಿಳಿಸಿದರು.

ADVERTISEMENT

ಪ್ರಸ್ತುತ ಪಟ್ಟಣದ ಕೇಂದ್ರದಲ್ಲಿ ಮೂರು ಕೋರ್ಸ್‌ಗಳನ್ನು ಆರಂಭಿಸಲಾಗಿದೆ. ಸ್ಥಳೀಯವಾಗಿ ಯಾವ ಸ್ವರೂಪದ ಕೋರ್ಸ್‌ ಅಗತ್ಯ ಎಂಬುದನ್ನು ತೀರ್ಮಾನಿಸಿ ಕೇಂದ್ರಕ್ಕೆ ಮಾಹಿತಿ ನೀಡಿದರೆ ಆರಂಭಿಸಲು ಒತ್ತು ನೀಡಲಾಗುವುದು. ಸ್ಥಳೀಯರ ಬಯಸಿದ ಕೋರ್ಸ್‌ ನನಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಸಂಸದ ಪ್ರತಾಪ್ ಸಿಂಹ ಅವರು, ‘ಸರ್ಕಾರ ಎಲ್ಲರಿಗೂ ಉದ್ಯೋಗ ನೀಡಲಾಗದು. ಆದರೆ ಎಲ್ಲರೂ ಸ್ವಾಭಿಮಾನದ ಬದುಕು ಮುನ್ನಡೆಸುವಂತೆ ಮಾಡಬಹುದು. ಪ್ರಧಾನಮಂತ್ರಿ ಕೌಶಲ ಕೇಂದ್ರದ ಉಪಕೇಂದ್ರವನ್ನು ಸೋಮವಾರಪೇಟೆಯಲ್ಲಿ ಆರಂಭಿಸುವ ಆಲೋಚನೆಯಿದೆ’ ಎಂದು ಮಾಹಿತಿ ನೀಡಿದರು.

ಶಾಸಕ ಕೆ.ಜಿ.ಬೋಪಯ್ಯ ಹಾಗೂ ವಿಧಾನಪರಿಷತ್ತಿನ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ.ಜೀವನ್, ಪ್ರಧಾನಮಂತ್ರಿ ಕೌಶಲಾಭಿವೃದ್ಧಿ ಕೇಂದ್ರದ ಅಧಿಕಾರಿ ಕೌಸ್ತುಭ್ ಇದ್ದರು. ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಜತೆಗೆ ವಿದ್ಯಾರ್ಥಿಗಳ ಸಂವಾದವೂ ಇತ್ತು.

ಜಿಲ್ಲಾ ಪಂಚಾಯಿತಿಯ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಶಶಿ ಸುಬ್ರಮಣಿ, ಜಿಲ್ಲಾ ಪಂಚಾಯಿತಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ವಿಜುಸುಬ್ರಮಣಿ, ಜಿಲ್ಲಾ ಪಂಚಾಯಿತಿ ಸದಸ್ಯ ಎಂ. ಮಹೇಶ್ ಗಣಪತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಬಿ. ಸ್ಮಿತಾ ಪ್ರಕಾಶ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಭಾರತೀಶ್, ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಸುಜಾ ಕುಶಾಲಪ್ಪ, ಎಂ. ಮಧು ದೇವಯ್ಯ, ಕಾಫಿ ಮಂಡಳಿ ಉಪಾಧ್ಯಕ್ಷೆ ರೀನಾ ಪ್ರಕಾಶ್ ಇದ್ದರು. ಕೇಂದ್ರದ ವಲಯ ವ್ಯವಸ್ಥಾಪಕ ಕೆ.ಎ. ವಿಶ್ವನಾಥ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.