ಶನಿವಾರಸಂತೆ: ಸಮೀಪದ ಮನುಗನಹಳ್ಳಿಯ ಹೇಮಾವತಿ ನದಿ ತೀರದಿಂದ ಅಕ್ರಮವಾಗಿ ಮರಳು ತುಂಬಿಸಿಕೊಂಡು ಬೆಂಗಳೂರಿಗೆ ಸಾಗಿಸುತ್ತಿದ್ದ 12 ಲಾರಿಗಳನ್ನು ಮಂಗಳವಾರ ರಾತ್ರಿ ಬೆಸೂರು ಗ್ರಾಮಸ್ಥರು ತಡೆಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಪಂಚಾಯಿತಿ ಅಧ್ಯಕ್ಷೆ, ಉಪಾಧ್ಯಕ್ಷೆ, ಸದಸ್ಯರು, ಕರ್ನಾಟಕ ರಕ್ಷಣಾ ವೇದಿಕೆ, ಜೈಕರ್ನಾಟಕ ಸಂಘ, ಹೇಮಾವತಿ ಸೇನೆ ಹಾಗೂ ಹಲವು ಗ್ರಾಮಸ್ಥರು ಮರಳು ಅಕ್ರಮ ಸಾಗಾಟವನ್ನು ಪತ್ತೆ ಹಚ್ಚಿದ್ದಾರೆ.
ಹೊಸದಾಗಿ ನಿರ್ಮಿಸುತ್ತಿರುವ ಸೇತುವೆ ಪಕ್ಕದ ನದಿ ಪಾತ್ರದಲ್ಲಿ ಪರವಾನಗಿ ಇಲ್ಲದೇ ಬೃಹತ್ ಯಂತ್ರೋಪಕರಣ ಬಳಸಿ, ಮರಳನ್ನು ಬಗೆದು ಲಾರಿಗಳಲ್ಲಿ ತುಂಬಿಸಿ ಸಾಗಿಸುತ್ತಿದ್ದಾಗ ಪತ್ತೆ ಹಚ್ಚಲಾಗಿದೆ. ಇಲ್ಲಿ ಗಣಿಗಾರಿಕೆ ನಡೆಸುತ್ತಿದ್ದ ಗುತ್ತಿಗೆದಾರರಾದ ವಿನೋದ್, ಎಂ.ಎನ್.ಚಿಕ್ಕವೀರರಾಜು,ಬಾಬುರಾಜೇಂದ್ರಪ್ರಸಾದ್, ಕೆ.ನಾಗೇಶ್, ಆಟೋರಾಜ, ಸುಗಂಧ ಮೊದಲಾದವರ ಮರಳು ಗಣಿಗಾರಿಕೆ ಪರವಾನಗಿ ಮಾರ್ಚ್ 31ಕ್ಕೆ ಮುಗಿದಿದೆ.
ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರ ವಾಹನಗಳನ್ನು ಆರೋಪಿಗಳು ಅಡ್ಡಗಟ್ಟಿದರು. ಹಿಟಾಚಿ ಮೂಲಕ ರಸ್ತೆಯನ್ನು ಅಗೆದು ಗುಂಡಿ ಮಾಡಿ ಸಂಚಾರಕ್ಕೆ ತಡೆಯೊಡ್ಡಿದರು. ಅವಾಚ್ಯ ಪದಗಳಿಂದ ನಿಂದಿಸಿದರು. ಕೊಲೆ ಬೆದರಿಕೆ ಹಾಕಿದರು ಎಂದು ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ತಿಳಿಸಲಾಗಿದೆ.
ಬುಧವಾರ ಸ್ಥಳಕ್ಕೆ ಭೇಟಿ ನೀಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಪೊಲೀಸ್ ಅಧಿಕಾರಿಗಳೂ ಇದರಲ್ಲಲಿ ಶಾಮೀಲಾಗಿದ್ದಾರೆ. ಇಂಥವರನ್ನು ಅಮಾನತು ಮಾಡಬೇಕು. ಗುತ್ತಿಗೆದಾರರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. ಮರಳು ದಂಧೆ ನಿಲ್ಲಿಸದಿದ್ದರೆ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಂಗಳವಾರ ರಾತ್ರಿ ಸಂಘಸಂಸ್ಥೆಗಳ ಪ್ರತಿನಿಧಿಗಳು, ಪಂಚಾಯಿತಿ ಜನಪ್ರತಿನಿಧಿಗಳಾದ ಪ್ರಭಾ, ರೂಪಾ, ಗಿರಿಜಮ್ಮ, ಗಂಗಮ್ಮ ಸೇರಿದಂತೆ ಗ್ರಾಮಸ್ಥರು 6 ವಾಹನಗಳಲ್ಲಿ ತೆರಳಿದ್ದರು.
ದಂಧೆಕೋರರು ರಸ್ತೆಗೆ ಅಡ್ಡಲಾಗಿ ಹಿಟಾಚಿಯಿಂದ ಗುಂಡಿ ತೋಡಿ, ಮರಳಿ ಗ್ರಾಮಕ್ಕೆ ತೆರಳದಂತೆ ಅಡ್ಡಿಪಡಿಸಿದರು. ಇದರಿಂದಾಗಿ ಇಡಿ ರಾತ್ರಿ ಅವರೆಲ್ಲರೂ ವಾಹನಗಳ್ಲ್ಲಲೇ ಉಳಿದು ಬವಣೆ ಪಡುವಂತಾಯಿತು.
ಬುಧವಾರ ಸ್ಥಳಕ್ಕೆ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಭರತ್‌ಕುಮಾರ್, ತಾಲ್ಲೂಕು ಪಂಚಾಯಿತಿ ಸದಸ್ಯ ಫಾಲಾಕ್ಷ, ಕೊಡ್ಲಿಪೇಟೆ ಚೇಂಬರ್ ಆಫ್ ಕಾಮರ್ಸ್‌ನ ಯತೀಶ್‌ಕುಮಾರ್, ಗಿರೀಶ್, ಸುಬ್ರಹ್ಮಣ್ಯ, ಡಿ.ವೈ.ಎಸ್.ಪಿ.ಪೌಲ್‌ವಾಜ್, ವೃತ್ತ ನಿರೀಕ್ಷಕ ಕೃಷ್ಣಯ್ಯ, ಪಿಎಸ್‌ಐ ಮಹದೇವಯ್ಯ, ಅಧಿಕಾರಿಗಳು ಭೇಟಿ ನೀಡಿದರು. ನೂರಾರು ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.