ADVERTISEMENT

ಮಳೆ ಅಬ್ಬರ: ಉಕ್ಕಿ ಹರಿದ ಕಾವೇರಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2011, 8:20 IST
Last Updated 3 ಸೆಪ್ಟೆಂಬರ್ 2011, 8:20 IST

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಕಳೆದ 2-3 ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಜೀವನದಿ ಕಾವೇರಿಯ ಉಪನದಿಗಳು, ಕೆರೆ, ತೊರೆಗಳು ತುಂಬಿ ಹರಿಯುತ್ತಿದ್ದು, ಕೆಲವೆಡೆ ಮನೆ ಕುಸಿತ, ಬರೆ ಕುಸಿತಗಳು ಸಂಭವಿಸಿವೆ.

ಮಡಿಕೇರಿಯ ಪುಟಾಣಿ ನಗರದಲ್ಲಿ ಎರಡು ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದೆ. ಪ್ರಾಣ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

ಪರಿಹಾರ: ಶುಕ್ರವಾರ ಬೆಳಿಗ್ಗೆ ಹಾನಿಗೊಳಗಾದ ಮನೆಗಳಿಗೆ ನಗರಸಭೆ ಅಧ್ಯಕ್ಷ ಎಚ್.ಎಂ. ನಂದಕುಮಾರ್ ಭೇಟಿ ನೀಡಿದರು.

ಹಾನಿಗೊಳಗಾದ ಪ್ರತಿ ಮನೆಗೆ ನಗರಸಭೆ ವತಿಯಿಂದ ರೂ 25 ಸಾವಿರ ಪರಿಹಾರ ನೀಡಲಾಗುವು ದು. ಇದಲ್ಲದೇ, ವೈಯಕ್ತಿಕವಾಗಿಯೂ ಆರ್ಥಿಕ ಸಹಾಯ ಮಾಡುವುದಾಗಿ ಭರವಸೆ ನೀಡಿದರು.

ಭಾಗಮಂಡಲದ ತ್ರಿವೇಣಿ ಸಂಗಮವು ತುಂಬಿ ಹರಿಯುತ್ತಿದ್ದು, ಕೆಲಹೊತ್ತು ನದಿಯ ನೀರು ಸೇತುವೆ ಮೇಲೆ ಹಾಗೂ ರಸ್ತೆಯ ಮೇಲೆ ಹರಿಯಿತು. ಇದರಿಂದ ವಾಹನಗಳ ಸಂಚಾರಕ್ಕೆ ಅಡೆತಡೆ ಉಂಟಾಯಿತು.

ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ: ಕಾವೇರಿ ನದಿಪಾತ್ರದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಹರಿದು ಬರುವ ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ. ಹಾರಂಗಿ ಜಲಾನಯನ ಪ್ರದೇಶದಲ್ಲಿ ವಾಸವಿರುವ ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಅಧಿಕಾರಿಗಳು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯಾದ್ಯಂತ ಶುಕ್ರವಾರ ಸರಾಸರಿಯಾಗಿ 72.43 ಮಿ.ಮೀ. ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗೆ 2284.83 ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1718.91 ಮಿ.ಮೀ ಮಳೆಯಾಗಿತ್ತು.

ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 107.65ಮಿ.ಮೀ. ಕಳೆದ ವರ್ಷ ಇದೇ ದಿನ 1.15ಮಿ.ಮೀ.  ಜನವರಿಯಿಂದ ಇಲ್ಲಿಯವರೆಗಿನ ಮಳೆ 3185.71ಮಿ.ಮೀ ಕಳೆದ ವರ್ಷ ಇದೇ ಅವಧಿಯಲ್ಲಿ 2508.59ಮಿ.ಮೀ. ಮಳೆಯಾಗಿತ್ತು.

ವೀರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 66.48ಮಿ.ಮೀ. ಕಳೆದ ವರ್ಷ ಇದೇ ದಿನ 0.00ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2145.18ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1396.04ಮಿ.ಮೀ. ಮಳೆಯಾಗಿತ್ತು.

ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 43.17ಮಿ.ಮೀ. ಕಳೆದ ವರ್ಷ ಇದೇ ದಿನ 2.27ಮಿ.ಮೀ. ಜನವರಿಯಿಂದ ಇಲ್ಲಿಯವರೆಗೆ ಮಳೆ 1523.59 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1252.19 ಮಿ.ಮೀ. ಮಳೆಯಾಗಿತ್ತು.

ಹೋಬಳಿವಾರು ಮಳೆ ವಿವರ: ಮಡಿಕೇರಿ ಕಸಬಾ 107.60, ನಾಪೋಕ್ಲು 72.20, ಸಂಪಾಜೆ 70.80, ಭಾಗಮಂಡಲ 180.00, ವೀರಾಜಪೇಟೆ ಕಸಬಾ 98.40, ಹುದಿಕೇರಿ 75.00, ಶ್ರೀಮಂಗಲ 52, ಪೊನ್ನಂಪೇಟೆ 73.40, ಅಮ್ಮತ್ತಿ 70.10, ಬಾಳಲೆ 30.00, ಸೋಮವಾರಪೇಟೆ ಕಸಬಾ 25.20, ಶನಿವಾರಸ0ತೆ 25.00, ಶಾಂತಳ್ಳಿ 98.20, ಕೊಡ್ಲಿಪೇಟೆ 30.20, ಕುಶಾಲನಗರ 26.40, ಸುಂಟಿಕೊಪ್ಪ 54.00 ಮಿ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.