ADVERTISEMENT

ಮಳೆ ಹಾನಿ: ಮುನ್ನೆಚ್ಚರಿಕೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2011, 6:40 IST
Last Updated 7 ಜೂನ್ 2011, 6:40 IST

ಮಡಿಕೇರಿ: ಮುಂಗಾರು ಚುರುಕಾ ಗುತ್ತಿದ್ದು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಗಂಭೀರ ಹಾನಿ ಸಂಭವಿಸದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಎಚ್ಚರ ವಹಿಸಿ ಕೆಲಸ ಮಾಡಬೇಕು ಎಂದು ಪ್ರಭಾರ ಜಿಲ್ಲಾಧಿಕಾರಿ ಕೆ.ಎಂ. ಚಂದ್ರೇಗೌಡ ಸೂಚನೆ ನೀಡಿದ್ದಾರೆ.

ಕೋಟೆ ಹಳೇ ವಿಧಾನ ಸಭಾಂಗಣ ದಲ್ಲಿ ಮಳೆ ಹಾನಿ ಮುನ್ನೆಚ್ಚರಿಕೆ ಕ್ರಮ ಗಳ ಕುರಿತು ಅಧಿಕಾರಿಗಳ ಸಭೆ ನಡೆಸಿದ ಅವರು,  `ಮಳೆಗಾಲ ಮುಗಿಯುವವ ರೆಗೂ ಯಾವುದೇ ಅಧಿಕಾರಿಗಳು ಜಿಲ್ಲಾಧಿಕಾರಿಯವರ ಅನುಮತಿ ಪಡೆ ಯದೆ ಕೇಂದ್ರ ಸ್ಥಾನ ತೊರೆಯಬಾರದು~ ಎಂದರು.

ಶಾಲಾ-ಕಾಲೇಜು, ಅಂಗನವಾಡಿ ಕಟ್ಟಡಗಳು ಸುಸ್ಥಿತಿಯಲ್ಲಿವೆಯೇ ಎಂಬು ದನ್ನು ಮೊದಲೇ ಖಾತರಿ ಪಡಿಸಿಕೊಳ್ಳ ಬೇಕು. ಬೀಳುವ  ಹಂತದಲ್ಲಿದ್ದರೆ ತಾತ್ಕಾಲಿಕವಾಗಿ ಪರ್ಯಾಯ ಸ್ಥಳಗಳಿಗೆ ಬದಲಾವಣೆ ಮಾಡಿಕೊಳ್ಳಲು ಆಯಾ ಇಲಾಖಾ ಅಧಿಕಾರಿಗಳು ಗಮನ ಹರಿಸ ಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಯೊಂದಿಗೆ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ತಹಶೀಲ್ದಾರರ ಕಚೇರಿಯೊಂದಿಗೆ ನಿರಂತರ ಸಂಪರ್ಕವಿಟ್ಟುಕೊಂಡು ತುರ್ತಾಗಿ ಆಗಬೇಕಿರುವ ವಿಷಯಗ ಳನ್ನು ಗಮನಕ್ಕೆ ತಂದು ಪರಿಹಾರಕ್ಕೆ ಸಹಕರಿಸಬೇಕು ಎಂದು ಅವರು ನಿರ್ದೇಶನ ನೀಡಿದರು.

ಜಿ.ಪಂ., ಆರೋಗ್ಯ, ಶಿಕ್ಷಣ, ಕೃಷಿ, ತೋಟಗಾರಿಕೆ, ಅಗ್ನಿ ಶಾಮಕ ದಳ, ಅರಣ್ಯ ಇಲಾಖೆಗಳು, ಗೃಹ ರಕ್ಷಕ ದಳದವರು ಈವರೆಗೆ ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಪ್ರಭಾರ ಜಿಲ್ಲಾಧಿಕಾರಿ ಯವರು ಇಲಾಖಾ ಮುಖ್ಯಸ್ಥರಿಂದ ಮಾಹಿತಿ ಪಡೆದುಕೊಂಡರು.

ಮಳೆ ಕುರಿತಾಗಿ ಜನರಿಗೆ ಮಾಹಿತಿ ನೀಡಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಒಂದೆರಡು ದಿನಗಳಲ್ಲಿ ಕೇಂದ್ರವನ್ನು ತೆರೆಯಲಾಗುವುದು.  ಜಿಲ್ಲೆಯ ಭಾಗ ಮಂಡಲ, ನೆಲ್ಲಿಹುದಿಕೇರಿ, ಕರಡಿ ಗೋಡು ಬೇತ್ರಿ, ಬಲಮುರಿ, ಇತರೆಡೆ ಪ್ರತಿವರ್ಷ ಅಧಿಕ ಮಳೆಯದಾಗ ಪ್ರವಾಹ ಪರಿಸ್ಥಿತಿ ತಲೆದೋರುತ್ತಿದ್ದು, ಈ ಭಾಗಗಳಲ್ಲಿ  ಕಾರ್ಯನಿರ್ವಹಿಸುವ ಅಧಿಕಾರಿಗಳು ಹೆಚ್ಚು ಜಾಗರೂಕರಾಗಿರ ಬೇಕು ಹಾಗೂ ಕ್ಷಣ ಕ್ಷಣದ ಮಾಹಿತಿ ಯನ್ನ ಜಿಲ್ಲಾಡಳಿತಕ್ಕೆ ನೀಡುತ್ತಿರಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್. ಕೃಷ್ಣಪ್ಪ ಅವರು ಮಾತನಾಡಿ, ಅತಿವೃಷ್ಠಿ ನಿರ್ವಹ ಣೆಗೆ ಜಿಲ್ಲಾಡಳಿತಕ್ಕೆ ಅಗತ್ಯವಿರುವ ಎಲ್ಲಾ ನೆರವನ್ನು ಜಿಲ್ಲಾ ಪಂಚಾಯ್ತಿ ಮೂಲಕ ನೀಡಲಾಗುವುದು ಎಂದು ತಿಳಿಸಿದರು.

ಶಾಲಾ ರಜೆ: ಶಿಕ್ಷಣ ಇಲಾಖೆ ಉಪನಿರ್ದೇಶಕ ರಾದ ಎನ್.ಎ. ರಾಮಸ್ವಾಮಿ ಮಾತ ನಾಡಿ, `ಮಳೆ ಹೆಚ್ಚಾಗಿ ಶಾಲೆಗಳಿಗೆ ಮಕ್ಕಳು  ಬರುವುದು ಕಷ್ಟವೆಂದು ಗೋಚರಿಸಿದ್ದಲ್ಲಿ  ಸ್ಥಳೀಯವಾಗಿ ಶಾಲೆಗೆ ವಿವೇಚನಾ ರಜೆ ನೀಡಲು ಆಯಾ ಶಾಲಾ ಮುಖ್ಯಸ್ಥರಿಗೆ  ಅಧಿಕಾರ ನೀಡಲಾಗಿದೆ. ಇಡೀ ಜಿಲ್ಲೆಗೆ ರಜೆ ನೀಡುವ ಪರಿಸ್ಥಿತಿ ತಲೆದೋರಿದಲ್ಲಿ ಜಿಲ್ಲಾಡಳಿತ ತೀರ್ಮಾನಿಸಿ ರಜೆ ಘೋಷಿಸಬಹುದು ಎಂದರು.

ಉಪವಿಭಾಗಾಧಿಕಾರಿ ಡಾ. ಎಂ. ಆರ್. ರವಿ, ಉಪ ಅರಣ್ಯ ಸಂರಕ್ಷಣಾಧಿ ಕಾರಿಗಳಾದ ಆನಂದ್, ಮೋಟಪ್ಪ, ಲೋಕೋಪಯೋಗಿ ಇಲಾಖೆ ಕಾರ್ಯ ಪಾಲಕ ಅಭಿಯಂತರರಾದ ರವಿ ಕುಮಾರ್ ಮತ್ತು ಜಿಲ್ಲಾ ಪಂಚಾಯ್ತಿ  ಎಂಜಿನಿಯರಿಂಗ್ ವಿಭಾಗದ ಕಾರ್ಯ ಪಾಲಕ ಅಭಿಯಂತರರಾದ ಕೇಶವ ಮೂರ್ತಿ, ನಗರಸಭೆ ಆಯುಕ್ತ ಶಶಿಕುಮಾರ್ ಮತ್ತು ವಿವಿಧ ಇಲಾಖಾ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.