ADVERTISEMENT

ಮಾದಪಟ್ಟಣ: ಅಭಿವೃದ್ಧಿ ದೂರ

ಗ್ರಾಮ ಸಂಚಾರ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 11:04 IST
Last Updated 11 ಸೆಪ್ಟೆಂಬರ್ 2013, 11:04 IST

ಕುಶಾಲನಗರ: ಪಟ್ಟಣದಿಂದ ಕೇವಲ 3 ಕಿ.ಮೀ. ದೂರದಲ್ಲಿರುವ ಮಾದಪಟ್ಟಣದಲ್ಲಿ ಒಂದು ಸಾವಿರಕ್ಕೂ ಅಧಿಕ ಕುಟುಂಬಗಳು ನೆಲಸಿದ್ದರೂ ಕನಿಷ್ಠ ಸೌಲಭ್ಯಗಳಿಲ್ಲದೇ ಬಳಲುತ್ತಿದೆ.

ಇಲ್ಲಿ ಸರಿಯಾದ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ವರ್ಷದಿಂದ ವರ್ಷಕ್ಕೆ  ಜನಸಂಖ್ಯೆ ಹೆಚ್ಚುತ್ತಿದ್ದರೂ, ಬಡಾವಣೆಗಳು ಹೆಚ್ಚುತ್ತಿದ್ದರೂ ಚರಂಡಿ ದುರಸ್ತಿಯಾಗಿಲ್ಲ.

ಮಾದಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯೊಂದನ್ನು ಬಿಟ್ಟರೆ ಯಾವುದೇ ಬಡಾವಣೆಯಲ್ಲಿ ರಸ್ತೆಗಳನ್ನೇ ನಿರ್ಮಾಣ ಮಾಡಿಲ್ಲ. ಸಾರಿಗೆ ವ್ಯವಸ್ಥೆಯೂ ಇಲ್ಲ. ಹೀಗಾಗಿ ಪ್ರತಿ ನಿತ್ಯ ಶಾಲಾ ಕಾಲೇಜುಗಳಿಗೆ ತೆರಳುವ ನೂರಾರು ವಿದ್ಯಾರ್ಥಿಗಳು ಆಟೊಗಳನ್ನೇ ಆಶ್ರಯಿಸಬೇಕಾಗಿದೆ.

ಯಾವುದೋ ಕಾಲದಲ್ಲಿ ಮಾಡಿರುವ ಚಿಕ್ಕ ಚರಂಡಿಗಳನ್ನು ಸ್ವಚ್ಛಚಗೊಳಿಸದೇ ಹಾಗೇ ಬಿಟ್ಟಿರುವುದರಿಂದ ಗಿಡಗಂಟಿಗಳು ಬೆಳೆದು ಕಸದ ರಾಶಿ ತುಂಬಿ ಹೊಲಸು ನಾರುತ್ತಿವೆ. ಕುಡಿಯುವ ನೀರಿಗಾಗಿ ಪಂಚಾಯಿತಿ ಅಲ್ಲಲ್ಲಿ ಸಾರ್ವಜನಿಕ ನಲ್ಲಿಗಳನ್ನು ಹಾಕಿದೆಯಾದರೂ ಅವೂ ಕೊಳಚೆ ಗುಂಡಿಗಳಾಗಿ ಮಾರ್ಪಟ್ಟಿವೆ.

ಇಂತಹ ನಲ್ಲಿಗಳಲ್ಲೂ 2 ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ. ಇದರಿಂದ ನೀರಿಗಾಗಿ ಪರದಾಡಬೇಕಾದ ಸ್ಥಿತಿ ಇದೆ ಎಂಬುದು ಅಲ್ಲಿನ ಮಹಿಳೆಯರ ಅಳಲು.

ಕಾವೇರಿ ನದಿಯಿಂದ ನೀರನ್ನು ಶುದ್ಧೀಕರಿಸಿ ಕುಡಿಯುವ ನೀರು ಪೂರೈಸಲು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಯೋಜನೆಯೊಂದನ್ನು ಸಿದ್ಧಗೊಳಿಸಲಾಗಿದೆ. ಆದರೆ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಯೋಜನೆ ಅಪೂರ್ಣಗೊಂಡು ಕಳೆದ ಐದಾರು ತಿಂಗಳುಗಳಿಂದ ನೆನೆಗುದಿಗೆ ಬಿದ್ದಿದೆ.

2 ತಿಂಗಳ ಹಿಂದೆ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಬೀದಿ ದೀಪಗಳೆಲ್ಲ ಹಾಳಾಗಿದ್ದು ಪಂಚಾಯಿತಿಯು ಇತ್ತ ಗಮನ ಹರಿಸುತ್ತಿಲ್ಲ ಎಂದು ಅಲ್ಲಿಯ ನಿವಾಸಿಗಳು ಆರೋಪಿಸಿದ್ದಾರೆ. ಊರಿನಲ್ಲಿ ಯಾರಾದರೂ ಮೃತಪಟ್ಟರೆ ಹೂಳಲು ಜಾಗವೂ ಇಲ್ಲದಂತಾಗಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ದೂರು.

ಖಾಸಗಿ ರೆಸಾರ್ಟ್‌ನಿಂದ ತೊಂದರೆ

ಜನವಸತಿ ಸ್ಥಳದಲ್ಲಿ ಯಾವುದೇ ರೆಸಾರ್ಟ್‌ಗಳನ್ನು ತೆರಯಬಾರದೆಂದು ಕಾನೂನಿನ ನಿರ್ದೇಶನವಿದ್ದರೂ ಅದನ್ನು ಉಲ್ಲಂಘಿಸಿ ಖಾಸಗಿ ರೆಸಾರ್ಟ್‌ ಒಂದನ್ನು ತೆರೆಯಲಾಗಿದೆ. ರಾತ್ರಿ ಸಂದರ್ಭದಲ್ಲಿ ಫೈಯರ್ ಕ್ಯಾಂಪ್ ಹೆಸರಿನಲ್ಲಿ ಜೋರಾಗಿ ಮೈಕ್‌ ಹಾಕಿಕೊಂಡು ಕುಣಿಯುತ್ತಾರೆ. ಇದರಿಂದಾಗಿ ಜನರ ನೆಮ್ಮದಿ ಹಾಳಾಗಿದೆ.
– ಎಚ್.ಜೆ. ದಾಮೋದರ್, ಡಿಎಸ್‌ಎಸ್ ತಾಲ್ಲೂಕು ಅಧ್ಯಕ್ಷರು
                        



ಶವ ಸಂಸ್ಕಾರಕ್ಕೆ ಜಾಗವಿಲ್ಲ

ಸಾವಿರಕ್ಕೂ ಹೆಚ್ಚು ಕುಟುಂಬಗಳಿದ್ದರೂ ಸ್ಮಶಾನಕ್ಕಾಗಿ ಒಂದು ತುಂಡು ಭೂಮಿ ಇಲ್ಲ. ಇಂದಿಗೂ ಹೊಳೆದಡದಲ್ಲಿ ಶವಸಂಸ್ಕಾರ ಮಾಡಬೇಕಾಗಿದೆ. ಮಳೆಗಾಲದಲ್ಲಿ ಹೊಳೆ ತುಂಬಿ ಹರಿಯುವುದರಿಂದ ಶವಸಂಸ್ಕಾರಕ್ಕೂ ಜಾಗವಿಲ್ಲ. ಪೈಸಾರಿ ಜಾಗವಿದೆ, ಆದರೆ ಯಾವುದೇ ಅಧಿಕಾರಿ ಅದನ್ನು ಬಿಡಿಸಿಕೊಡಲು ಮನಸ್ಸು ಮಾಡುತ್ತಿಲ್ಲ.        
– ಎಂ.ಪಿ. ಶಿವಪ್ಪ, ಅಂಬೇಡ್ಕರ್ ದಲಿತ ಸೇವಾ ಸಮಿತಿ ಅಧ್ಯಕ್ಷ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.