ADVERTISEMENT

ಮುಚ್ಚಿದ ಸಾರ್ವಜನಿಕ ಶೌಚಾಲಯ

ಬಸ್ ನಿಲ್ದಾಣದ ಕಾಂಪೌಂಡ್‌ ಮೊರೆಹೋದ ಪ್ರಯಾಣಿಕರು; ಮಹಿಳೆಯರ ಪರದಾಟ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 12:54 IST
Last Updated 29 ಮಾರ್ಚ್ 2018, 12:54 IST

ಸೋಮವಾರಪೇಟೆ: ಇಲ್ಲಿನ ಸರ್ಕಾರಿ ಬಸ್ ನಿಲ್ದಾಣದಲ್ಲಿರುವ ಹೈಟೆಕ್ ಶೌಚಾಲಯಕ್ಕೆ ಕೆಲ ದಿನಗಳಿಂದ ಬೀಗ ಜಡಿದಿದ್ದು, ಪುರುಷ ಪ್ರಯಾಣಿಕರು ಮೂತ್ರ ವಿಸರ್ಜನೆಗೆ ಕಾಂಪೌಂಡ್ ಮೊರೆ ಹೋಗಿದ್ದಾರೆ. ಮಹಿಳೆಯರು ಪರದಾಡುವಂತಾಗಿದೆ. ಸಂತೆ ದಿನವಾದ ಸೋಮವಾರ ಗ್ರಾಮೀಣ ಭಾಗದಿಂದ ಅನೇಕ ಮಂದಿ ಪಟ್ಟಣಕ್ಕೆ ಬರುತ್ತಾರೆ. ಆದರೆ ಮೂತ್ರ ವಿಸರ್ಜನೆಗೆ ವ್ಯವಸ್ಥೆ ಇಲ್ಲದಾಗಿದೆ.ಈ ಬಗ್ಗೆ ಶೌಚಾಲಯ ನಿರ್ವಾಹಕರ ಬಳಿ ವಿಚಾರಿಸಿದರೆ ‘ಫಿಟ್ ಗುಂಡಿ ತುಂಬಿದೆ, ಹಾಗಾಗಿ ಶೌಚಾಲಯ ತೆರೆದಿಲ್ಲ’ ಎಂದು ಉತ್ತರಿಸಿದರು.

‘ಈ ಶೌಚಾಲಯ ನಿರ್ವಹಣೆಗೆ ಸರ್ಕಾರದಿಂದ ಮಾಸಿಕ ಅನುದಾನ ಲಭಿಸುತ್ತಿದ್ದು, ಈ ಅನುದಾನದಲ್ಲಿ ಗುಂಡಿ ದುರಸ್ತಿಪಡಿಸಬೇಕು. ಪಟ್ಟಣ ಪಂಚಾಯಿತಿಯಲ್ಲಿರುವ ಕೊಳಚೆ ನೀರು ತೆಗೆಯುವ ಯಂತ್ರ ಬಳಸಿಕೊಂಡು ಗುಂಡಿಯನ್ನು ನಿರ್ವಹಿಸಬೇಕು’ ಎಂದು ಆಗ್ರಹಿಸಿದ ಸಾರ್ವಜನಿಕರು, ಸರ್ಕಾರದ ಹಣ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಕ್ಷಣ ಸಮಸ್ಯೆ ಸರಿಪಡಿಸಿ ಶೌಚಾಲಯವನ್ನು ಸಾರ್ವಜನಿಕರ ಉಪಯೋಗಕ್ಕೆ ಒದಗಿಸಬೇಕು. ಈ ಬಗ್ಗೆ ಗುತ್ತಿಗೆದಾರರಿಗೆ ಸೂಚಿಸಬೇಕು ಎಂದು ನಿಯಂತ್ರಣಾಧಿಕಾರಿಯನ್ನು ಪ್ರಯಾಣಿಕರು ಒತ್ತಾಯಿಸಿದರು.

ADVERTISEMENT

ಸಮಸ್ಯೆ ಗಮನಕ್ಕೆ ಬಂದಿದ್ದು, ಫಿಟ್‌ ಖಾಲಿ ಮಾಡಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಒಂದೆರಡು ದಿನಗಳಲ್ಲಿ ಸಮಸ್ಯೆ ಪರಿಹರಿಸಲಾಗುವುದು – 
ಗೀತಾ, ಮಡಿಕೇರಿ ಡಿಪೊ ವ್ಯವಸ್ಥಾಪಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.