ADVERTISEMENT

ಮೈನವಿರೇಳಿಸಿದ ಕೆಸರುಗದ್ದೆ ಕ್ರೀಡಾಕೂಟ

​ಪ್ರಜಾವಾಣಿ ವಾರ್ತೆ
Published 15 ಜುಲೈ 2013, 6:28 IST
Last Updated 15 ಜುಲೈ 2013, 6:28 IST

ಕುಶಾಲನಗರ: ಸಮೀಪದ ನಂಜರಾಯಪಟ್ಟಣ ಪಾಣತ್ತಲೆಯಲ್ಲಿ ನಂಜುಂಡೇಶ್ವರ ಯುವಕ ಸಂಘದ ವತಿಯಿಂದ ದ್ವಿತೀಯ ವರ್ಷದ ಜಿಲ್ಲಾ ಮಟ್ಟದ ಮುಕ್ತ ಕೆಸರುಗದ್ದೆ ಕ್ರೀಡಾಕೂಟ ಸಂಭ್ರಮದಿಂದ ನಡೆಯಿತು.

ಕ್ರೀಡಾಕೂಟಕ್ಕೂ ಮುನ್ನ ನಡೆದ ಸಮಾರಂಭವನ್ನು ಸ್ಥಳೀಯ ಕಾಫಿ ಬೆಳೆಗಾರರಾದ ಕೆಮ್ಮೋರನ ಲಾಲಮ್ಮ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಂತರ ನಂಜರಾಯ ಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಟಿ.ಇ. ಭಾಗ್ಯಾ ಮಾತನಾಡಿ, ಆಟೋಟಗಳು ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು. ನಂತರ ಅವರು ಬಾಲ್ ಎಸೆಯುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು.

ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಂಜುಂಡೇಶ್ವರ ಯುವಕ ಸಂಘದ ಅಧ್ಯಕ್ಷ ಚಟ್ಟಡ್ಕ ಎಲ್. ವಿಶ್ವ ಮಾತನಾಡಿ, ಕೊಡಗಿನ ಸಾಂಪ್ರದಾಯಿಕ ಕ್ರೀಡೆಗಳು ಆಧುನಿಕತೆಯ ಭರಾಟೆಯಲ್ಲಿ ಮೂಲೆ ಗುಂಪಾಗುತ್ತಿವೆ. ಇವುಗಳನ್ನು ಪ್ರೋತ್ಸಾಹಿಸಿ ಪೋಷಿಸಬೇಕಾದ ಅಗತ್ಯವಿದೆ. ಈ ಕಾರಣದಿಂದಲೇ ಯುವಕ ಸಂಘವು ಕೆಸರುಗದ್ದೆ ಕ್ರೀಡಾಕೂಟವನ್ನು ಎರಡು ವರ್ಷಗಳಿಂದ ನಡೆಸುತ್ತಿದೆ. ಇನ್ನು ಮುಂದೆ ಇದೆ ರೀತಿ ಕ್ರೀಡಾ ಸ್ಪರ್ಧೆಗಳನ್ನು ನಡೆಸಲಿದೆ ಎಂದರು.

ನಂತರ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಬಾಲಕ, ಬಾಲಕಿಯರಿಗೆ ಪ್ರತ್ಯೇಕವಾಗಿ 100 ಮೀಟರ್, ಯುವಕ, ಯುವತಿಯರಿಗೆ ಪ್ರತ್ಯೇಕವಾಗಿ 100 ಮೀಟರ್ ಓಟ, 40 ವರ್ಷ ಮೇಲ್ಪಟ್ಟ ಪುರುಷ, ಮಹಿಳೆಯರಿಗೆ ಪ್ರತ್ಯೇಕವಾಗಿ 100 ಮೀಟರ್ ಓಟದ ಸ್ಪರ್ಧೆಗಳು ನಡೆದವು. ಪುರುಷರ ಕೆಸರುಗದ್ದೆ ಬಾಲಿಬಾಲ್ ಪಂದ್ಯವಂತೂ ಮೈನವಿರೇಳಿಸಿತು.

ಮಧ್ಯಾಹ್ನದ ನಂತರ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಹಗ್ಗಜಗ್ಗಾಟ ಸ್ಪರ್ಧೆ ಹಾಗೂ ಮಹಿಳೆಯರಿಗೆ ಥ್ರೋಬಾಲ್ ಸ್ಪರ್ಧೆಗಳು ನಡೆದವು.

ಕ್ರೀಡಾಕೂಟದಲ್ಲಿ ವಿಜೇತರು
ಪ್ರಾಥಮಿಕ ಶಾಲೆ ವಿಭಾಗದಲ್ಲಿ ಚರಣ್ ಅಪ್ಪಚ್ಚು (ಪ್ರಥಮ), ಪ್ರಜ್ವಲ್ ಬಿ.ಸಿ (ದ್ವಿತೀಯ), ಬಾಲಕಿಯರ ವಿಭಾಗದಲ್ಲಿ ವಿಂಧ್ಯಾ (ಪ್ರಥಮ), ನಂದಿನಿ (ದ್ವಿತೀಯ), ಯುವಕರ ವಿಭಾಗದಲ್ಲಿ ದೀಪು ಕಟ್ಟೆಮನೆ (ಪ್ರಥಮ), ಹ್ಯಾರಿಸ್ (ದ್ವಿತೀಯ), ಯುವತಿಯರ ವಿಭಾಗದಲ್ಲಿ ಧರಣಿ ಗಿರೀಶ್ (ಪ್ರಥಮ) ಬಿಂದು (ದ್ವಿತೀಯ) ಸ್ಥಾನ ಗಳಿಸಿದರು.

40 ವರ್ಷ ಮೇಲ್ಪಟ್ಟವರ ಪುರುಷರ ವಿಭಾಗದಲ್ಲಿ ಬಾಲಕೃಷ್ಣ (ಪ್ರಥಮ), ವಸಂತ (ದ್ವಿತೀಯ), ಮಹಿಳೆಯರ ವಿಭಾಗದಲ್ಲಿ ಚಂದ್ರಮ್ಮ (ಪ್ರಥಮ), ಶಶಿ (ದ್ವಿತೀಯ) ಸ್ಥಾನಗಳನ್ನು ಪಡೆದರು.

55 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಪೂವಯ್ಯ ಹಾಗೂ ತಿಮ್ಮಯ್ಯ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.