ADVERTISEMENT

ಮೈಸೂರು-ಕುಶಾಲನಗರ ರೈಲು ಸಂಪರ್ಕ ಯೋಜನೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 9:55 IST
Last Updated 2 ಫೆಬ್ರುವರಿ 2011, 9:55 IST

ಸೋಮವಾರಪೇಟೆ: ಮೈಸೂರಿನಿಂದ ಕುಶಾಲನಗರಕ್ಕೆ ರೈಲು ಸಂಪರ್ಕ ಕಲ್ಪಿಸುವ ಯೋಜನೆಗೆ ಚಾಲನೆ ನೀಡಲು ಪ್ರಯತ್ನ ನಡೆಸಿರುವುದಾಗಿ ಸಂಸದ ಎಚ್.ವಿಶ್ವನಾಥ್ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಈ ವಿಷಯ ತಿಳಿಸಿದರು. ಕೊಡಗಿನ ಪ್ರವಾಸೋದ್ಯಮವನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಪ್ರಯತ್ನ ನಡೆಸಿರುವುದಾಗಿ ಅವರು ಹೇಳಿದರು.

ಮೊದಲನೇ ಹಂತದಲ್ಲಿ ಮೈಸೂರಿನಿಂದ ಹುಣಸೂರು ಮತ್ತು ಪಿರಿಯಾಪಟ್ಟಣ ಮಾರ್ಗವಾಗಿ ಕುಶಾಲನಗರದತನಕ ರೈಲು ಸಂಪರ್ಕ ಕಲ್ಪಿಸಲು ಸರ್ವೆ ನಡೆಸಲಾಗಿದೆ. 80 ಕಿ.ಮೀ. ದೂರದ ಈ ರೈಲ್ವೆ ಮಾರ್ಗಕ್ಕೆ 400 ಕೋಟಿ ರೂಪಾಯಿ ವೆಚ್ಚವಾಗುತ್ತದೆ ಎಂದು ಅಂದಾಜು ಮಾಡಲಾಗಿದೆ. ಇದಕ್ಕೆ ಬೇಕಾಗುವ ಭೂಮಿ ಮತ್ತು ಶೇ 50 ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರ ಭರಿಸುವುದಾಗಿ ಮಾತು ಕೊಟ್ಟಿದೆ ಎಂದು ನುಡಿದರು.

ಈ ಬಾರಿಯ ರೈಲ್ವೆ ಮುಂಗಡ ಪತ್ರದಲ್ಲಿ ಈ ಯೋಜನೆಗೆ ಹಣ ನಿಗದಿಪಡಿಸುವ ಕುರಿತಾಗಿ ಕೇಂದ್ರದ ಹಿರಿಯ ಸಚಿವರು ಹಾಗೂ ರೈಲ್ವೆ ಸಚಿವರೊಂದಿಗೆ ಮಾತುಕತೆ ನಡೆಸಿರುವುದಾಗಿ ಹೇಳಿದರು. ರೈಲ್ವೆ ಭೂಪಟದಲ್ಲಿ ಕೊಡಗಿನ ಚಿತ್ರವೇ ಇಲ್ಲ. ಕಳೆದ ನೂರು ವರ್ಷಗಳ ಹಿಂದೆಯೇ ಮಹಾರಾಜರ ಕಾಲದಲ್ಲಿಯೇ ಕೊಡಗಿಗೆ ರೈಲು ಸಂಪರ್ಕ ಕಲ್ಪಿಸುವ ಬಗ್ಗೆ ಆಲೋಚನೆ ನಡೆಸಲಾಗಿತ್ತು. 1966ರಲ್ಲಿ ಹಾಗೂ ಗುಂಡೂರಾಯರು ಮುಖ್ಯಮಂತ್ರಿಗಳಾಗಿದ್ದಾಗ ಇದರ ಬಗ್ಗೆ ಸ್ವಲ್ಪ ಚಾಲನೆ ಸಿಕ್ಕಿತ್ತು. ಕೆ.ಆರ್.ನಗರದಿಂದ ಕುಶಾಲನಗರಕ್ಕೆ ರೈಲು ಸಂಪರ್ಕ ಕಲ್ಪಿಸುವ ಅಂದಿನ ಪ್ರಸ್ತಾವ ಕಾರ್ಯಸಾಧುವಲ್ಲ ಎಂಬ ಋಣಾತ್ಮಕ ವರದಿ ಸಿಕ್ಕಿದ್ದರಿಂದ ಅದು ಅಲ್ಲಿಯೇ ಸ್ಥಗಿತಗೊಂಡಿತು ಎಂದು ವಿವರಿಸಿದರು. ಕೊಡಗಿಗೆ ರೈಲು ಸಂಪರ್ಕ ಕಲ್ಪಿಸುವುದಾಗಿ ಚುನಾವಣೆಯಲ್ಲಿ ಆಶ್ವಾಸನೆ ನೀಡಿದ್ದರಿಂದ ಈ ಯೋಜನೆಯ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿರುವುದಾಗಿ ಹೇಳಿದರು.

ಪ್ರವಾಸೋದ್ಯಮದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹೆಚ್ಚಿನ ಹಣ ಬಿಡುಗಡೆ ಮಾಡುತ್ತದೆ. ಆದರೆ, ಇದರ ಲಾಭ ಪಡೆಯಲು ರಾಜ್ಯ ಸರ್ಕಾರ ಯೋಜನೆಗಳನ್ನು ರೂಪಿಸಿ ಕೇಂದ್ರ ಸರ್ಕಾರಕ್ಕೆ ಕಳಿಸಬೇಕಾಗುತ್ತದೆ. ರಾಜ್ಯ ಸರ್ಕಾರದ ಪ್ರವಾಸೋದ್ಯಮ ಖಾತೆಯ ಸಚಿವರಿಗೆ ಇದರ ಬಗ್ಗೆ ಹಲವಾರು ಬಾರಿ ಗಮನಸೆಳೆದರೂ ಅವರು ಆಸಕ್ತಿ ವಹಿಸಲಿಲ್ಲ ಎಂದರು.ಕೊಡಗು ಹಾಗೂ ಮೈಸೂರು ಪ್ರವಾಸೋದ್ಯಮಕ್ಕೆ ಉತ್ತಮ ತಾಣವಾಗಿದೆ. ಹೋಂಸ್ಟೇ ಮಾದರಿಯನ್ನು ಬಲಗೊಳಿಸಲು ಹಾಗೂ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಉದ್ದೇಶದಿಂದ ಕೊಡಗಿನ ಶಾಸಕರ ಸಭೆಯನ್ನು ಕರೆದು ಚರ್ಚಿಸಬೇಕೆನ್ನುವ ತಮ್ಮ ಆಶಯ ಇದುವರೆಗೂ ಕಾರ್ಯಗತವಾಗದ ಬಗ್ಗೆ ನಿರಾಸೆ ವ್ಯಕ್ತಪಡಿಸಿದರು.

ಕೊಡಗಿನಲ್ಲಿ ಇದುವರೆಗೂ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳೇ ಇಲ್ಲ ಎಂಬುದು ರಾಜ್ಯ ಸರ್ಕಾರ ಇದರ ಅಭಿವೃದ್ಧಿಗೆ ತೋರಿಸುವ ಕಾಳಜಿಗೆ ನಿದರ್ಶನವಾಗಿದೆ ಎಂದು ಟೀಕಿಸಿದರು. ಹೋಂ ಸ್ಟೇಗಳಿಗೆ ಕರ ಹಾಕಬಾರದು ಹಾಗೂ ಪರವಾನಗಿ, ಪೊಲೀಸ್ ನಿಗಾ ವಹಿಸುವುದು ಮುಂತಾದ ಅನಗತ್ಯ ಕಿರಿಕಿರಿ ಇರಬಾರದು ಎಂಬುದು ತಮ್ಮ ನಿಲುವಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನ ಸರಿಯಾಗಿ ಆಗುತ್ತಿಲ್ಲ. ಕಾಡಾನೆಗಳ ಹಾವಳಿಯ ನಿಯಂತ್ರಣದ ಬಗ್ಗೆಯೂ ಅರಣ್ಯ ಖಾತೆ ಸಚಿವರೊಂದಿಗೆ ಮಾತನಾಡಿದ್ದೇನೆ. ಚಾಮರಾಜನಗರ, ಮೈಸೂರು ಹಾಗೂ ಕೊಡಗು ಜಿಲ್ಲೆಯ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಸಭೆ ಕರೆದು ಕಾಡಾನೆ ನಿಯಂತ್ರಣದ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಿ ಯೋಜನೆ ರೂಪಿಸುವ ತಮ್ಮ ಆಶಯ ಇದುವರೆಗೂ ಈಡೇರಿಲ್ಲ. ಕೇಂದ್ರ ಸರ್ಕಾರದ ಕಾಫಿ ಪ್ಯಾಕೇಜ್ ಜಿಲ್ಲೆಯ ಕೃಷಿಕರಿಗೆ ಬಹಳ ಪ್ರಯೋಜನವಾಗಿದೆ. ಈ ಯೋಜನೆಯನ್ನು ಮಧ್ಯಮ ಹಾಗೂ ದೊಡ್ಡ ಕಾಫಿ ಕೃಷಿಕರಿಗೂ ವಿಸ್ತರಿಸಬೇಕೆನ್ನುವ ಬೇಡಿಕೆ ಬಗ್ಗೆ ಕೇಂದ್ರದ ವಾಣಿಜ್ಯ ಸಚಿವರ ಗಮನಕ್ಕೆ ತಂದಿರುವುದಾಗಿ ನುಡಿದರು.

ರಾಜ್ಯ ಸರ್ಕಾರ ಕೇಂದ್ರವು ನೀಡುವ ಅನುದಾನವನ್ನು ಸರಿಯಾಗಿ ಉಪಯೋಗಿಸುತ್ತಿಲ್ಲ. ಕೇಂದ್ರ ಸರ್ಕಾರಕ್ಕೆ ನೀಡಬೇಕಾದ ರಾಜ್ಯದ ಪಾಲಿನ ಯೋಜನಾ ವೆಚ್ಚವನ್ನು ನೀಡದೆ ಅವಹೇಳನಕ್ಕೆ ಗುರಿಯಾದ ಪ್ರಸಂಗಗಳ ಬಗ್ಗೆ ಮಾಹಿತಿ ನೀಡಿದರು. ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ.ಪ್ರದೀಪ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ.ಲೋಕೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.