ADVERTISEMENT

ಮೈಸೂರು ದಸರಾಕ್ಕೆ 2ನೇ ಗಜಪಡೆ ಪಯಣ c

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 8:50 IST
Last Updated 5 ಅಕ್ಟೋಬರ್ 2012, 8:50 IST

ಕುಶಾಲನಗರ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವ ಹಿಸಲಿರುವ ದುಬಾರೆ ಸಾಕಾನೆ ಶಿಬಿರದ ಹರ್ಷ, ವಿಕ್ರಮ, ಕಾವೇರಿ ಆನೆಗಳನ್ನು ಗುರುವಾರ ಎರಡನೇ ತಂಡದಲ್ಲಿ ಕಾವೇರಿ ನಿಸರ್ಗಧಾಮದ ಬಳಿಯಿಂದ ಬೀಳ್ಕೊಡಲಾಯಿತು.

ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಎಂ.ಪಿ.ಅಪ್ಪಚ್ಚುರಂಜನ್  ಆನೆ ಗಳಿಗೆ ಬಾಳೆಹಣ್ಣು, ಕಬ್ಬು, ಬೆಲ್ಲ ತಿನ್ನಿಸುವ ಮೂಲಕ ಮೈಸೂರು ದಸರಾ ಮಹೋತ್ಸವಕ್ಕೆ ಬೀಳ್ಕೊಟ್ಟರು.

ನಾಡಹಬ್ಬ ದಸರಾ ಮಹೋತ್ಸವ ವನ್ನು ಸರ್ಕಾರ ಜನೋತ್ಸವವಾಗಿ ಆಚರಿಸುತ್ತಿದೆ. ಬರದ ಪರಿಸ್ಥಿತಿ ಇದ್ದರೂ ನಾಡು-ನುಡಿ, ಸಂಸ್ಕೃತಿ ರಕ್ಷಣೆಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ ಎಂದು ಸಚಿವ ರಂಜನ್ ಹೇಳಿದರು.
ಕಳೆದ 15 ವರ್ಷಗಳಿಂದ ದಸರಾಗೆ ತೆರಳುತ್ತಿರುವ ಹರ್ಷ, ವಿಕ್ರಮ ಮತ್ತು ಕಳೆದೆರೆಡು ವರ್ಷಗಳಿಂದ ತೆರಳುತ್ತಿರುವ ಕಾವೇರಿ ಎಂಬ 3 ಆನೆಗಳನ್ನು ಲಾರಿಗಳ ಮೂಲಕ ನಿಸರ್ಗಧಾಮದಿಂದ ಕರೆ ದೊಯ್ಯಲಾಯಿತು.
ಈ ಸಾಕಾನೆಗಳೊಂದಿಗೆ ಮಾವುತ ರಾದ ಡೋಬಿ, ಚಿಣ್ಣಪ್ಪ, ಲಿಂಗ, ಕಾವಾಡಿಗರಾದ ಚಿಕ್ಕ, ಕೂರ, ಭಾಸ್ಕರ್ ಅವರೊಂದಿಗೆ ಕುಟುಂಬ ಸದಸ್ಯರು ತೆರಳಿದರು.

ಕೊಡಗು ವೃತ್ತದ ಅರಣ್ಯ ಸಂರಕ್ಷಣಾ ಧಿಕಾರಿ ಬಿ.ಕೆ.ದೀಕ್ಷಿತ್, ಮಡಿಕೇರಿ ವಿಭಾಗದ ಡಿಸಿಎಫ್ ಧನಂಜಯ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಸಿ. ಸುಲೋಚನಾ, ಬಿ.ಬಿ.ಭಾರತೀಶ್, ತಾಲ್ಲೂಕು ಪಂಚಾಯಿತಿ ಸದಸ್ಯ ಬಿ.ವಿ.ಸತೀಶ್, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆರ್. ಪುಟ್ಟಸ್ವಾಮಿ, ಎಸಿಎಫ್ ನಾಗರಾಜು, ವನ್ಯಜೀವಿ ವೈದ್ಯ ಹುಣಸೂರಿನ ಡಾ.ಉಮಾಶಂಕರ್, ಆರ್‌ಎಫ್‌ಓ ಎಂ.ಎಂ.ಅಚ್ಚಪ್ಪ, ಸ್ಥಳೀಯರಾದ ಎಂ.ಎನ್.ಕುಮಾರಪ್ಪ, ಎಂ.ಎಂ.ಚರಣ್, ವಿ.ಡಿ. ಪುಂಡರೀಕಾಕ್ಷ, ಅರಣ್ಯ ಸಿಬ್ಬಂದಿಗಳಾದ ಕಮಲಾಕ್ಷ, ರಾಮಣ್ಣ, ರಮೇಶ, ಚಂದ್ರ, ಕುಟ್ಟಪ್ಪ ಇದ್ದರು.

ಸಾಕಾನೆಗಳೊಂದಿಗೆ ತೆರಳಿದ ಮಾವುತರು, ಕಾವಾಡಿಗರಿಗೆ ಅರಣ್ಯ ಇಲಾಖೆ ವತಿಯಿಂದ ಹೊಸ ಸಮವಸ್ತ್ರ ನೀಡಲಾಯಿತು.

ಕಾವೇರಿ ನಿಸರ್ಗಧಾಮ: ರೂ. 2 ಕೋಟಿ ವೆಚ್ಚದಲ್ಲಿ ಕ್ರಿಯಾ ಯೋಜನೆ

ಕುಶಾಲನಗರ: ಜಿಲ್ಲೆಯ ಪ್ರಮುಖ ಪ್ರವಾಸಿ ಕೇಂದ್ರವಾದ ಕಾವೇರಿ ನಿಸರ್ಗಧಾಮದ ಅಭಿವೃದ್ಧಿಗೆ ರೂ. 2 ಕೋಟಿ ವೆಚ್ಚದಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಎಂ.ಪಿ.ಅಪ್ಪಚ್ಚುರಂಜನ್ ಗುರುವಾರ ತಿಳಿಸಿದರು.

ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸಲಿರುವ 2 ನೇ ತಂಡದ ಗಜಪಯಣಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಾವೇರಿ ನಿಸರ್ಗಧಾಮಕ್ಕೆ ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿಗೆ ಇನ್ನೂ ಹೆಚ್ಚಿನ ಸೌಲಭ್ಯ ಒದಗಿಸಲಾಗುವುದು ಎಂದರು.
ಕಾವೇರಿ ನಿಸರ್ಗಧಾಮದಿಂದ ವಾರ್ಷಿಕ ರೂ.25 ರಿಂದ 30 ಲಕ್ಷ ಆದಾಯ ಬರುತ್ತಿದೆ. ಪ್ರಸ್ತುತ ಇರುವ ಕಾಟೇಜ್‌ಗಳನ್ನು ನವೀಕರಿಸಿ ಮತ್ತಷ್ಟು ಕಾಟೇಜ್‌ಗಳನ್ನು ನಿರ್ಮಿಸಲಾಗುವುದು. ಮೊಲ, ಜಿಂಕೆ ಪಾರ್ಕ್‌ಗಳ ನವೀಕರಣ, ವಿವಿಧ ಔಷಧೀಯ ಸಸ್ಯಗಳ ವನ ನಿರ್ಮಿಸಲಾಗುವುದು ಎಂದು ರಂಜನ್ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.