ಮಡಿಕೇರಿ: ಮಂಜಿನ ನಗರಿ ಮಡಿಕೇರಿಯಲ್ಲಿ ಪ್ರವಾಸಿಗರ ಅಚ್ಚುಮೆಚ್ಚಿನ ಹತ್ತು ಹಲವು ಸ್ಥಳಗಳಿವೆ. ಇದರಲ್ಲಿ ರಾಜಾಸೀಟ್ ಪಾರ್ಕ್ ಕೂಡ ಒಂದಾಗಿದೆ. ಈ ಸ್ಥಳದಿಂದ ರಮಣೀಯ ನಿಸರ್ಗ ಸೌಂದರ್ಯವನ್ನು ಸವಿಯಬಹುದಾಗಿದೆ. ಇದರ ಜೊತೆ ಇಲ್ಲಿರುವ ಸಂಗೀತ ಕಾರಂಜಿ ಹಲವು ವರ್ಷಗಳಿಂದ ಆಕರ್ಷಣೀಯ ಪ್ರಮುಖ ಸ್ಥಳವಾಗಿತ್ತು.
ಆದರೆ, ಕಳೆದ ಎರಡು ತಿಂಗಳಿನಿಂದ ಸಂಗೀತ ಕಾರಂಜಿಯಿಂದ ಸಂಗೀತವೂ ಹೊರಹೊಮ್ಮುತ್ತಿಲ್ಲ, ಕಾರಂಜಿಯೂ ಇಲ್ಲ. ತೋಟಗಾರಿಕಾ ಇಲಾಖೆ ವ್ಯಾಪ್ತಿಗೆ ಒಳಪಡುವ ಈ ಉದ್ಯಾನವು ಸೂಕ್ತ ನಿರ್ವಹಣೆಯಿಲ್ಲದೇ ಸೊರಗಿದೆ.
ಪ್ರವಾಸಿಗರ ಪ್ರಮುಖ ಆಕರ್ಷಣೀಯವಾಗಿದ್ದ ಸಂಗೀತ ಕಾರಂಜಿ ಕೂಡ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹಣ ತೆತ್ತು ಉದ್ಯಾನದ ಒಳಗೆ ಬರುವ ಪ್ರವಾಸಿಗರು ನಿರಾಶೆಯಿಂದಲೇ ಮರಳುವಂತಾಗುತ್ತಿದೆ. ಪ್ರವಾಸೋದ್ಯಮ ರಂಗದಲ್ಲಿ ಕೊಡಗು ಜಿಲ್ಲೆಗೆ ಇರುವ ಹೆಸರಿಗೆ ಇದು ಕಳಂಕ ಮೂಡಿಸದೇ ಇರದು.
ಮೇಲಿಂದ ಮೇಲೆ ರಿಪೇರಿ
ಏಪ್ರಿಲ್ ತಿಂಗಳಿನಲ್ಲಿಯೂ ಸಂಗೀತ ಕಾರಂಜಿ ಸ್ತಬ್ಧವಾಗಿದ್ದ ಸಂದರ್ಭದಲ್ಲಿ ಅದರ ರಿಪೇರಿಗೆಂದು ಸ್ಪಂದಿಸಿದ ಈ ಉದ್ಯಾನದ ನಿರ್ವಹಣಾ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ.ಎನ್.ವಿ. ಪ್ರಸಾದ್ ಅವರು ತಾತ್ಕಾಲಿಕ ರಿಪೇರಿಗೆಂದು ಹಣ ಬಿಡುಗಡೆ ಮಾಡಿದ್ದರು.
ಇದಾದ ಕೆಲದಿನಗಳ ನಂತರ ಪುನಃ ಸಂಗೀತ ಕಾರಂಜಿ ಬಂದ್ ಆಗಿದೆ. ಮುಖ್ಯವಾಗಿ ಇದರ ನಿರ್ವಹಣೆಗೆ ವಿಶೇಷ ಪರಿಣತರ ಅಗತ್ಯವಿದೆ. ಧ್ವನಿ, ಬೆಳಕು ಹಾಗೂ ನೀರಿನ ಕಾರಂಜಿಯನ್ನು ನಿಭಾಯಿಸಬಲ್ಲವರು ಕಷ್ಟದಲ್ಲಿ ದೊರೆಯುತ್ತಿದ್ದಾರೆ. ಹೀಗಾಗಿ ಸಮರ್ಪಕ ನಿರ್ವಹಣೆಯಾಗುತ್ತಿಲ್ಲ ಎಂದು ಉದ್ಯಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ಹೇಳಿದರು.
ಸಮಿತಿಯೇ ಇಲ್ಲ
ಇದುವರೆಗೆ ರಾಜಾಸೀಟ್ ಉದ್ಯಾನವನ್ನು ನಿರ್ವಹಿಸಲು ಉದ್ಯಾನ ಸಮಿತಿಯೇ ರಚನೆಯಾಗಿಲ್ಲ. ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಬೇಕೆಂದು ಸರ್ಕಾರದ ಸ್ಪಷ್ಟ ಆದೇಶವಿದ್ದರೂ ಇದುವರೆಗೆ ಇದು ಸಾಧ್ಯವಾಗಿಲ್ಲ. ಹೀಗಾಗಿ ಉದ್ಯಾನದ ನಿರ್ವಹಣೆ ನಿರ್ಲಕ್ಷಕ್ಕೆ ಒಳಗಾಗಿದೆ.
ಕೆಲವು ವರ್ಷಗಳ ಹಿಂದೆ ಸ್ಥಳೀಯ ನಾಗರಿಕರೇ ಸೇರಿಕೊಂಡು ಸಮಿತಿಯೊಂದನ್ನು ರಚಿಸಿಕೊಂಡಿದ್ದರು. ಅದೀಗ ಅಸ್ತಿತ್ವದಲ್ಲಿಲ್ಲ. ಇತ್ತ ತೋಟಗಾರಿಕಾ ಇಲಾಖೆಯವರು ಕೈಚೆಲ್ಲಿ ಕೂತಿದ್ದಾರೆ. ಹೀಗಾಗಿ ಸಂಗೀತ ಕಾರಂಜಿಯಿಂದ ಪುನಃ ಯಾವಾಗ ಸಂಗೀತ ಹಾಗೂ ನೀರಿನ ಕಾರಂಜಿ ಪುಟಿದೇಳುವುದು ಎನ್ನುವುದು ಇಲ್ಲಿನ ಸಾರ್ವಜನಿಕರ ಪ್ರಶ್ನೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.