ADVERTISEMENT

ರಾಜಕೀಯ ಮೀಸಲಾತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಜೂನ್ 2013, 6:19 IST
Last Updated 15 ಜೂನ್ 2013, 6:19 IST

ಮಡಿಕೇರಿ: ಕೊಡವ ಅಲ್ಪಸಂಖ್ಯಾತರಿಗೆ ಶಾಸನ ಸಭೆಯಲ್ಲಿ ರಾಜಕೀಯ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟಿಸಲಾಯಿತು.

ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಮಾತನಾಡಿ, ಹಲವು ವರ್ಷಗಳಿಂದ ಜನ ಪ್ರತಿನಿಧಿಗಳಾಗಿ ಅಧಿಕಾರ ನಡೆಸಿದ ಕೊಡಗಿನ ಅನೇಕ ರಾಜಕೀಯ ಧುರೀಣರು ಕೊಡವರನ್ನು ಮತ ಬ್ಯಾಂಕ್‌ನಂತೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಸಂವಿಧಾನಾತ್ಮಕವಾಗಿ ಕೊಡವರಿಗೆ ದೊರಕಬೇಕಾದ ರಾಜಕೀಯ ಮೀಸಲಾತಿಗಾಗಿ ಹೋರಾಟ ನಡೆಸುವ ಸಿಎನ್‌ಸಿ ವಿರುದ್ಧ ರಾಜಕೀಯ ರಂಗದಲ್ಲಿರುವ ಕೊಡಗಿನ ಪ್ರಮುಖರು ಗೇಲಿ ಮಾಡುವ ಮೂಲಕ ಕೊಡಗಿನ ಜನತೆಗೆ ದ್ರೋಹ ಬಗೆದಿದ್ದಾರೆ ಎಂದರು.

ಆಂಗ್ಲೋ ಇಂಡಿಯನ್ ಸುಮುದಾಯಕ್ಕೆ ನಾಮ ನಿರ್ದೇಶನದ ಮಾಡುವ ಮೂಲಕ ಅವರ ಪ್ರತಿನಿಧಿಯಲ್ಲಿ ಸರ್ಕಾರದಲ್ಲಿ ಆಯ್ಕೆ ಮಾಡಿಕೊಳ್ಳಲು ನೀಡಿರುವ ಹಕ್ಕು ಮತ್ತು ಸಿಕ್ಕಿಂನಲ್ಲಿ ಬೌದ್ಧ ಬಿಕ್ಕುಗಳಿಗೆ ಪ್ರತ್ಯೇಕ ಮತ ಕ್ಷೇತ್ರದ ಮಿಸಲಾತಿ ನೀಡಿದಂತೆ ಕೊಡವ ಅಲ್ಪಸಂಖ್ಯಾತರಿಗೂ ರಾಜಕೀಯ ಮೀಸಲಾತಿ ನೀಡಬೇಕೆಂದು ಅವರು ಆಗ್ರಹಿಸಿದರು.

ಕಾಶ್ಮೀರಿ ಪಂಡಿತರಿಗೆ ನಾಮ ನಿರ್ದೇಶನದ ಹಕ್ಕು ನೀಡುವ ಪ್ರಸ್ತಾವನೆಯನ್ನು ಮುಂದಿಟ್ಟಿರುವಂತೆ, ಮಣಿಪುರದಲ್ಲಿ ವಾಸಿಸುವ ನಾಗ ಜನಾಂಗಕ್ಕಾಗಿ ನೀಡಿರುವ ಮಿಸಲಾತಿಯನ್ನು ಕೊಡವರಿಗೂ ನೀಡಬೇಕೆಂದು ಒತ್ತಾಯಿಸಿದರು.

ಈ ಹಿನ್ನೆಲೆಯಲ್ಲಿ ಕೊಡವ ಲ್ಯಾಂಡ್ ಹೋರಾಟದೊಂದಿಗೆ ಈ ಹಕ್ಕನ್ನು ಮುಂದಿಟ್ಟು ನಿರಂತರವಾಗಿ ಹೋರಾಟ ನಡೆಸುವುದಾಗಿ ಅವರು ತಿಳಿಸಿದರು.
ಪುಲ್ಲೇರ ಕಾಳಪ್ಪ, ಕಲಿಯಂಡ ಪ್ರಕಾಶ್, ಜಮ್ಮಡ ಮೋಹನ್, ಕಲಿಯಂಡ ಮೀನಾ, ಪುಲ್ಲೇರ ಸ್ವಾತಿ, ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಸಿಐಟಿಯು ಪ್ರತಿಭಟನೆ
ಮಡಿಕೇರಿ: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ನಗರದ ತಾಲ್ಲೂಕು ಕಚೇರಿ ಎದುರು ಸಿಐಟಿಯು ಪದಾಧಿಕಾರಿಗಳು ತಾಲ್ಲೂಕು ಪದಾಧಿಕಾರಿಗಳು ಪ್ರತಿಭಟನೆ ಶುಕ್ರವಾರ ನಡೆಸಿದರು.

ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಪಿ.ಆರ್. ಭರತ್ ಮಾತನಾಡಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಣ ಮಾಡಬೇಕು. ಕಾರ್ಮಿಕ ಕಾನೂನು ಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಗೊಳಿಸಬೇಕು. ಉದ್ಯೋಗ ಒದಗಿ ಸುವುದು, ಎಲ್ಲ ಕಾರ್ಮಿಕರಿಗೆ ಬಿಪಿಎಲ್ ಕಾರ್ಡ್ ವಿತರಣೆ ಹಾಗೂ ಸಾಮಾಜಿಕ ಭದ್ರತೆ ಒದಗಿಸುವುದು, ಜಿಲ್ಲೆಯಲ್ಲಿ ಕಾಡಾನೆ ದಾಳಿಯಿಂದ ಕಾರ್ಮಿಕರನ್ನು ರಕ್ಷಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

ನಿವೇಶನ ರಹಿತರಿಗೆ ನಿವೇಶನ ನೀಡಬೇಕು. ಎಲ್ಲ ಕಾರ್ಮಿಕ ಸಂಘಟನೆ ಗಳನ್ನು ಶೀಘ್ರವೇ ನೋಂದಾವಣಿ ಮಾಡಿ, ದೃಢೀಕರಿಸಬೇಕು. ಗುತ್ತಿಗೆ ನೌಕರರಿಗೂ ಸೂಕ್ತ ಸೌಲಭ್ಯ ದೊರಕೆಬೇಕು. ಬೋನಸ್, ಭವಿಷ್ಯ ನಿಧಿಗಿರುವ ಎಲ್ಲ ಷರತ್ತುಗಳನ್ನು ತೆಗೆದುಹಾಕಿ ಗ್ರಾಚ್ಯುಟಿ ಮೊತ್ತವನ್ನು ಹೆಚ್ಚಿಸುವ ಜೊತೆಗೆ ಎಲ್ಲರಿಗೂ ನಿವೃತ್ತಿ ವೇತನ ನೀಡಬೇಕೆಂದು ಆಗ್ರಹಿಸಿದರು.

ಸಿಐಟಿಯುನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಡಿ. ರಮೇಶ್, ಉಪಾಧ್ಯಕ್ಷ ಹಸನಬ್ಬ, ಜಿಲ್ಲಾ ಜನರಲ್ ವರ್ಕರ್ಸ್‌ ಯೂನಿಯನ್‌ನ ಜಂಟಿ ಕಾರ್ಯದರ್ಶಿ ಮಹೇಶ್, ಬಿಎಸ್‌ಎನ್‌ಎಲ್‌ನ ನಾನ್ ಪರ್ಮನೆಂಟ್ ವರ್ಕರ್ಸ್‌ ಯೂನಿಯನ್ ಕಾರ್ಯದರ್ಶಿ ನೇಮೆಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.