ADVERTISEMENT

ರೂ 1.25 ಕೋಟಿ ಕಾಮಗಾರಿಗೆ ಅಪ್ಪಚ್ಚುರಂಜನ್ ಚಾಲನೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2011, 8:35 IST
Last Updated 19 ಜನವರಿ 2011, 8:35 IST

ಸೋಮವಾರಪೇಟೆ: ಕಾವೇರಿ ನೀರಾವರಿ ನಿಗಮದ ವತಿಯಿಂದ ಗೊರೂರು ಹೇಮಾವತಿ ಯೋಜನಾ ವಲಯಕ್ಕೆ ಸಂಬಂಧಿಸಿದ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಲಕನೂರು ಪುನರ್ವಸತಿ ಕೇಂದ್ರದಲ್ಲಿ ಸೋಮವಾರ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ 1.25 ಕೋಟಿ ರೂ. ಗಳ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.

ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಮಗಾರಿಗಳ ಗುಣಮಟ್ಟ ಕಳಪೆಯಾಗಿದ್ದರೆ ಗುತ್ತಿಗೆದಾರರೊಂದಿಗೆ ವಾಗ್ವಾದ ನಡೆಸದೆ ನೇರವಾಗಿ ಜನಪ್ರತಿನಿಧಿಗಳ ಗಮನಕ್ಕೆ ತರಬೇಕೆಂದರು. ಸಮುದಾಯ ಅಭಿವೃದ್ಧಿ ಯೋಜನೆಯಡಿ ಜರುಗುವ ಕಾಮಗಾರಿಗಳ ಗುಣಮಟ್ಟವನ್ನು ಗುತ್ತಿಗೆದಾರರು ಕಾಪಾಡಬೇಕಲ್ಲದೆ ಕೆಲಸವನ್ನು ನಿಗದಿತ ಅವಧಿ ಒಳಗೆ ಪೂರೈಸಬೇಕು. ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರ ಮಡಿಕೇರಿ ಕ್ಷೇತ್ರಕ್ಕೆ ರೂ. 300 ಕೋಟಿ ಅನುದಾನ ಸಿಕ್ಕಿದ್ದು, ಮೂಲಭೂತ ಅವಶ್ಯಕತೆಗಳ ಪೂರೈಕೆಗೆ ಆದ್ಯತೆ ನೀಡಲಾಗಿದೆ ಎಂದರು.

ಹೇಮಾವತಿ ನೀರಾವರಿ ಯೋಜನೆಯ ಹಿನ್ನೀರಿನಿಂದಾಗಿ ನಿರಾಶ್ರಿತರಾದ 70 ಕುಟುಂಬಗಳಿಗೆ ನಿರ್ಮಿಸಲಾದ ಯಲಕನೂರು ಪುನರ್ವಸತಿ ಕೇಂದ್ರದಲ್ಲಿ ರೂ. 10 ಲಕ್ಷ ವೆಚ್ಚದ ಸಮುದಾಯ ಭವನ, ರೂ. 15 ಲಕ್ಷ ವೆಚ್ಚದ ಗ್ರಾಮದ ಒಳರಸ್ತೆ ಡಾಂಬರೀಕರಣ, ರೂ.15 ಲಕ್ಷ ವೆಚ್ಚದ ಚರಂಡಿ ನಿರ್ಮಾಣ ಕಾಮಗಾರಿಗಳು ನಡೆಯುತ್ತಿವೆ. ಇಲ್ಲಿ ನಿರ್ಮಿಸುವ ಕಿರು ಆಣೆಕಟ್ಟೆಯಿಂದ ಸುಮಾರು 80 ಎಕರೆ ಕೃಷಿಭೂಮಿಗೆ ನೀರಾವರಿ ಲಭ್ಯವಾಗಲಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಶಿವಪ್ಪ, ವೆಂಕಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಜಿ.ಬಿ.ಸೋಮಯ್ಯ, ನೇರುಗಳಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಲೋಕಾನಂದ, ಸದಸ್ಯರಾದ ಸುಕುಮಾರ್, ವನಜಾ, ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಮಂಜುನಾಥ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಮ್ಮಯ್ಯ, ಹೇಮಾವತಿ ಪುನರ್ವಸತಿ ಉಪ ವಿಭಾಗದ ಎಂಜಿನಿಯರಾದ ಹೇಮಂತಕುಮಾರ್, ಎಚ್.ಆರ್.ಪ್ರಕಾಶ್, ಎಚ್,ಎನ್.ಶ್ರೀನಿವಾಸ ಹಾಗೂ ಕೆ.ಜಯಪ್ರಕಾಶ್ ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮೋಹನದಾಸ್ ಸ್ವಾಗತಿಸಿ ಶಿಕ್ಷಕ ಕುಮಾರ್ ವಂದಿಸಿದರು.

ಗ್ರಾಮದಲ್ಲಿ ನಿರಂತರವಾಗಿ ಕಾಡುತ್ತಿರುವ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಬೇಕು ಹಾಗೂ ಸರ್ಕಾರಿ ಬಸ್ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಗ್ರಾಮಾಧ್ಯಕ್ಷ ವೇದಮೂರ್ತಿ ಶಾಸಕರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.