ADVERTISEMENT

ರೂ 19 ಕೋಟಿಯಲ್ಲಿ ಕೊಡಗಿನ ಪಾಲು 2.65 ಕೋಟಿ!

ಸಂಸದರ ಕ್ಷೇತ್ರಾಭಿವೃದ್ಧಿ ನಿಧಿ ಬಳಕೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2014, 9:46 IST
Last Updated 7 ಮಾರ್ಚ್ 2014, 9:46 IST

ಮಡಿಕೇರಿ: ಮೈಸೂರು–ಕೊಡಗು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಸಂಸದ ಎಚ್‌. ವಿಶ್ವನಾಥ್‌ ತಮ್ಮ ಸಂಸದರ ನಿಧಿಯಡಿ ಲಭ್ಯವಾದ ₨ 19 ಕೋಟಿ ಅನುದಾನದಲ್ಲಿ ಕೇವಲ ರೂ 2.65 ಕೋಟಿ ಅನುದಾನವನ್ನು ಮಾತ್ರ ಕೊಡಗು ಜಿಲ್ಲೆಗೆ ಹಂಚಿಕೆ ಮಾಡಿದ್ದಾರೆ.

ಕೊಡಗಿನ ಮಡಿಕೇರಿ ಹಾಗೂ ವಿರಾಜಪೇಟೆ ಸೇರಿದಂತೆ ಮೈಸೂರಿನ ಆರು ವಿಧಾನಸಭಾ ಕ್ಷೇತ್ರಗಳು ಸಂಸದರ ಕಾರ್ಯವ್ಯಾಪ್ತಿಗೆ ಒಳಪಡುತ್ತವೆ. ಇದಲ್ಲದೇ, ವಿಶ್ವನಾಥ್‌ ಮೂಲತಃ ಮೈಸೂರು ಜಿಲ್ಲೆಯವರಾಗಿರುವುದರಿಂದಲೋ ಏನೋ ಅನುದಾನದಲ್ಲಿ ಮೈಸೂರಿಗೆ ಸಿಂಹಪಾಲು ದೊರೆತಿದೆ. ಸಂಸದರ ನಿಧಿಯಡಿ ಕೊಡಗಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿಗಳು ನಡೆದಿಲ್ಲವೆನ್ನುವುದು ಸ್ಥಳೀಯರ ಅನಿಸಿಕೆ.

2009ರಿಂದ 2013ರ ಡಿಸೆಂಬರ್‌ ಅಂತ್ಯದವರೆಗೆ ಸಂಸದರ ನಿಧಿಯಡಿ ಕೈಗೊಂಡ ಕಾಮಗಾರಿಗಳ ವಿವರಗಳು  ‘ಪ್ರಜಾವಾಣಿ’ಗೆ ದೊರೆತಿವೆ. ಇದರ ಆಧಾರದ ಮೇಲೆ ಹೇಳುವುದಾದರೆ, ಸಂಸದರು ತಮಗೆ ಲಭ್ಯವಾದ ರೂ 19 ಕೋಟಿ ಅನುದಾನದಲ್ಲಿ ರೂ 2.65 ಕೋಟಿ ಮೊತ್ತದಷ್ಟು 113 ವಿವಿಧ ಕಾಮಗಾರಿಗಳನ್ನು ಕೊಡಗು ಜಿಲ್ಲೆಯಲ್ಲಿ ಕೈಗೊಳ್ಳಲು ಶಿಫಾರಸ್ಸು ಮಾಡಿದ್ದಾರೆ.

ಇವುಗಳ ಪೈಕಿ ರೂ 1.21 ಕೋಟಿ ಮೊತ್ತದ 53 ಕಾಮಗಾರಿಗಳು ಮಾತ್ರ ಇದುವರೆಗೆ ಪೂರ್ಣಗೊಂಡಿವೆ. ಸುಮಾರು ರೂ 63.50 ಲಕ್ಷ ಮೊತ್ತದ 24 ಕಾಮಗಾರಿಗಳು ಪ್ರಗತಿಯಲ್ಲಿವೆ. ಇನ್ನುಳಿದ ಅರ್ಧಕ್ಕಿಂತ ಹೆಚ್ಚು ಕಾಮಗಾರಿಗಳು ಆರಂಭವನ್ನೇ ಪಡೆದಿಲ್ಲ.

ಅಂದಾಜು ಪಟ್ಟಿಯೇ ಸಿದ್ಧವಾಗಿಲ್ಲ
ಬಾಕಿ ಉಳಿದಿರುವ ಕಾಮಗಾರಿಗಳ ಪೈಕಿ ಬಹುತೇಕ ಕಾಮಗಾರಿಗಳ ಅಂದಾಜು ಪಟ್ಟಿಯೇ ಸಿದ್ಧವಾಗಿಲ್ಲ. ಇನ್ನು ಕೆಲವು ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ಕೂಡ ದೊರೆತಿಲ್ಲ. ಸುಮಾರು ರೂ 78 ಲಕ್ಷ ಮೊತ್ತದ 33 ಕಾಮಗಾರಿಗಳು ಈ ರೀತಿಯ ಸಂಕಷ್ಟಕ್ಕೆ ಸಿಲುಕಿವೆ.

ಸಮುದಾಯ ಭವನಕ್ಕೆ ಸಿಂಹಪಾಲು
ಕೊಡಗು– ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಎಚ್‌.ವಿಶ್ವನಾಥ್‌ ಅವರು ತಮ್ಮ ಸಂಸದರ ನಿಧಿಯ ಮೂಲಕ ಕೊಡಗು ಜಿಲ್ಲೆಯಲ್ಲಿ ಕೈಗೊಳ್ಳಲು ಸೂಚಿಸಿರುವ ಕಾಮಗಾರಿಗಳಲ್ಲಿ ಸಮುದಾಯ ಭವನಗಳಿಗೆ ಸಿಂಹಪಾಲು ದೊರೆತಿದೆ.

ವಿವಿಧ ಜಾತಿ, ಜನಾಂಗ, ಸಮುದಾಯದವರನ್ನು ತೃಪ್ತಿಪಡಿಸುವ ದೃಷ್ಟಿಯಿಂದಲೇ ಸಮುದಾಯ ಭವನಕ್ಕೆ ಆದ್ಯತೆ ನೀಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಸಾಮೂಹಿಕ ಬದುಕಿಗೆ ಅವಶ್ಯಕವಾಗಿರುವ ಕುಡಿಯುವ ನೀರು ಪೂರೈಕೆ, ವಿದ್ಯುತ್‌, ರಸ್ತೆ, ಆರೋಗ್ಯ ಶಿಕ್ಷಣಕ್ಕೆ ಪ್ರಾಧಾನ್ಯತೆ ದೊರೆತಿಲ್ಲ.

ಸಮಾಜದಲ್ಲಿರುವ ಎಲ್ಲ ಸಮುದಾಯದವರಿಗೆ ಉಪಯುಕ್ತವಾಗುವಂತಹ ಹಾಗೂ ನೆನಪಿನಲ್ಲಿ ಉಳಿಯುವಂತಹ ಯಾವುದೇ ಪ್ರಮುಖ ಕಾಮಗಾರಿಗಳು ಈ ಅವಧಿಯಲ್ಲಿ ನಡೆದಿಲ್ಲ. ಬಹುತೇಕ ಕಾಮಗಾರಿಗಳು ಸಮುದಾಯ ಭವನ, ಶಾದಿ ಮಹಲ್‌ನಂತಹ ಕಟ್ಟಡಗಳಿಗೆ ಸೀಮಿತವಾಗಿವೆ.

ಇವುಗಳಲ್ಲಿ ರೂ 1.20 ಕೋಟಿ ಮೊತ್ತದ 65 ಕಾಮಗಾರಿಗಳು ಸಮುದಾಯ ಭವನ ನಿರ್ಮಾಣಕ್ಕೆ ಸಂಬಂಧಿಸಿದ್ದವು. ಶಿಕ್ಷಣ ಕ್ಷೇತ್ರಕ್ಕೆ (ಶಾಲಾ ಕೊಠಡಿ ನಿರ್ಮಾಣ, ಶಾಲಾ ಮೈದಾನ, ಶಾಲೆಗಳ ತಡೆಗೋಡೆ...) ಸುಮಾರು ರೂ 60 ಲಕ್ಷ ಮೊತ್ತದ 18 ಕಾಮಗಾರಿಗಳಿಗೆ ಶಿಫಾರಸ್ಸು ಮಾಡಿದ್ದಾರೆ.

ಕುಡಿಯುವ ನೀರು ಪೂರೈಕೆ, ಕೊಳವೆ ಬಾವಿ ಕೊರೆಸುವುದು ಸೇರಿದಂತೆ ಇತರೆ ಕಾಮಗಾರಿಗಳಿಗೆ ರೂ 8 ಲಕ್ಷ ನೀಡಲಾಗಿದೆ. ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಕಾಮಗಾರಿಗೆ ಶಿಫಾರಸ್ಸು ಮಾಡಿಲ್ಲ ಎನ್ನುವುದು ಕಂಡುಬರುತ್ತದೆ.

ಸಂಸದರ ಕ್ಷೇತ್ರ ವ್ಯಾಪ್ತಿ
ಮೈಸೂರು–ಕೊಡಗು ಸಂಸದರ ಕ್ಷೇತ್ರ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿವೆ. ಮಡಿಕೇರಿ, ವಿರಾಜಪೇಟೆ, ಪಿರಿಯಾಪಟ್ಟಣ, ಹುಣಸೂರು, ಚಾಮುಂಡೇಶ್ವರಿ, ಕೃಷ್ಣರಾಜ, ಚಾಮರಾಜ ಹಾಗೂ ನರಸಿಂಹರಾಜ ಕ್ಷೇತ್ರಗಳಿವೆ. 2009ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಸಿ.ಎಚ್‌.ವಿಜಯಶಂಕರ್‌ ಅವರನ್ನು ಸೋಲಿಸುವ ಮೂಲಕ ಕಾಂಗ್ರೆಸ್ಸಿನ ಎಚ್‌.ವಿಶ್ವನಾಥ್‌ ಲೋಕಸಭೆಗೆ ಆಯ್ಕೆಯಾಗಿದ್ದರು.

ಏನಿದು ನಿಧಿ?
ಪ್ರತಿಯೊಬ್ಬ ಸಂಸದರಿಗೆ ತಮ್ಮ ಕ್ಷೇತ್ರದಲ್ಲಿ ವಿವಿಧ ರೀತಿಯ ಕಾಮಗಾರಿಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರವು ಸಂಸದರ ಕ್ಷೇತ್ರ ಅಭಿವೃದ್ಧಿ ನಿಧಿಯಡಿ ಪ್ರತಿವರ್ಷ ₨ 5 ಕೋಟಿ ಅನುದಾನ ನೀಡುತ್ತದೆ.

ಈ ಹಣದಲ್ಲಿ ಕ್ಷೇತ್ರದ ಬೇಡಿಕೆಯಂತೆ ಕಾಮಗಾರಿಗಳನ್ನು ಸಂಸದರು ಸೂಚಿಸಬಹುದು. ಇದಲ್ಲದೇ, ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೂ ಹಣ ವಿನಿಯೋಗಿಸಬಹುದು. ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದು, ಅಂಗವಿಕಲರ ಅಭಿವೃದ್ಧಿಗಾಗಿ, ಗ್ರಂಥಾಲಯಗಳಿಗೆ ಪುಸ್ತಕ ಖರೀದಿಸಲು, ಕೊಳವೆಬಾವಿ ಕೊರೆಸಲು ಸೇರಿದಂತೆ ವಿವಿಧ ಕಾಮಗಾರಿ ಕೈಗೊಳ್ಳಲು ಸಂಸದರು ಶಿಫಾರಸು ಮಾಡಬಹುದು. ಯಾವುದೇ ಧಾರ್ಮಿಕ ಪ್ರದೇಶದೊಳಗೆ ಅಥವಾ ಧಾರ್ಮಿಕ ಸಂಸ್ಥೆಗಳಿಗೆ ಸಂಬಂಧಿಸಿದ ಕಾಮಗಾರಿಗಳನ್ನು ಈ ಯೋಜನೆಯಡಿ ಕೈಗೆತ್ತಿಕೊಳ್ಳುವಂತಿಲ್ಲ.

ಸಂಸದರು ಶಿಫಾರಸ್ಸು ಮಾಡುವ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಜಿಲ್ಲಾಡಳಿತಕ್ಕೆ ಸೇರಿರುತ್ತದೆ. ಸಂಸದರ ನಿಧಿ ಬಳಕೆಯ ವಿವರಗಳನ್ನು ಸಾರ್ವಜನಿಕರು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದುಕೊಳ್ಳಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.