ADVERTISEMENT

ರೈಲು ಮಾರ್ಗದ ಸರ್ವೆ: ಸ್ಥಳೀಯರ ವಿರೋಧ

​ಪ್ರಜಾವಾಣಿ ವಾರ್ತೆ
Published 11 ಜೂನ್ 2018, 10:25 IST
Last Updated 11 ಜೂನ್ 2018, 10:25 IST

ಗೋಣಿಕೊಪ್ಪಲು: ದಕ್ಷಿಣ ಕೊಡಗಿನ ಮೂಲಕ ಕೇರಳಕ್ಕೆ ಹಾದು ಹೋಗುವ ರೈಲ್ವೆಮಾರ್ಗ ಯೋಜನೆಯ ಸರ್ವೆ ಕಾರ್ಯ ಕುಟ್ಟ, ಕೆ.ಬಾಡಗ ಮತ್ತು ಶ್ರೀಮಂಗಲ ಭಾಗದಲ್ಲಿ ಶನಿವಾರ ನಡೆಯಿತು.

ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಯು ಗುತ್ತಿಗೆ ಪಡೆದು ರೈಲು ಮಾರ್ಗದ ಸರ್ವೆ ಕಾರ್ಯ ಕೈಗೊಂಡಿದೆ. ಮಹಾರಾಷ್ಟ್ರ ರಾಜ್ಯದ ನೋಂದಾಯಿತ ವಾಹನದಲ್ಲಿ ಶ್ರೀಮಂಗಲ ಭಾಗಕ್ಕೆ ಆಗಮಿಸಿರುವ 8 ಮಂದಿ ಸಿಬ್ಬಂದಿ ಜಿಪಿಎಸ್ ಹಾಗೂ ಇತರ ಪರಿಕರಗಳನ್ನು ಬಳಸಿ ಸರ್ವೆ ನಡೆಸುತ್ತಿದ್ದಾರೆ. ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಯ ಆದರ್ಶ ಕೌಶಲ, ಅಗರ್ವಾಲ್ ನೇತೃತ್ವದಲ್ಲಿ ಸರ್ವೆ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಕುಟ್ಟ ವ್ಯಾಪ್ತಿಯಲ್ಲಿ ಸರ್ವೆ ಕಾರ್ಯ ಮುಗಿದಿದೆ ಎನ್ನಲಾಗುತ್ತಿದೆ.

ಸ್ಥಳೀಯರ ವಿರೋಧ: ‘ಕೊಡಗಿನ ಯಾವುದೇ ಭಾಗದಲ್ಲಿಯೂ ರೈಲು ಮಾರ್ಗ ನಿರ್ಮಿಸುವುದಕ್ಕೆ ಅವಕಾಶ ಕೊಡುವುದಿಲ್ಲ’ ಎಂದು ಹಿಂದಿನಿಂದಲೂ ಸ್ಥಳೀಯ ಜನತೆ ಹೋರಾಟ ನಡೆಸಿಕೊಂಡು ಬರುತ್ತಿದ್ದರೂ ಕೇಂದ್ರ ಸರ್ಕಾರದ ರೈಲ್ವೆ ಇಲಾಖೆ ಸದ್ದಿಲ್ಲದೆ ಸರ್ವೆ ನಡೆಸುತ್ತಿದೆ. ಆದ್ದರಿಂದ ಉದ್ದೇಶಿತ ರೈಲು ಮಾರ್ಗದ ಸರ್ವೆಯನ್ನು ಸ್ಥಗಿತಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಪಡಿಸಿದರು.

ADVERTISEMENT

ಯುಕೊ ಸಂಘಟನೆ ಸಂಚಾಲಕ ಮಂಜು ಚಿಣ್ಣಪ್ಪ ಮಾತನಾಡಿ, ‘ಯಾವುದೇ ಕಾರಣಕ್ಕೂ ಕೊಡಗಿನ ಕಾಫಿ ತೋಟದ ಮೂಲಕ ರೈಲು ಮಾರ್ಗ ಹೋಗಲು ಬಿಡುವುದಿಲ್ಲ. ಸ್ಥಳೀಯರಿಗೆ ಬೇಡವಾದ ಯಾವುದೇ ಯೋಜನೆಗಳನ್ನು ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಬಾರದು. ಇಂತಹ ಯೋಜನೆ ವಿರುದ್ಧ ಜನಜಾಗೃತಿ ಮೂಡಿಸಿ ತೀವ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಪರಿಸರವಾದಿ ಚೆಪ್ಪುಡೀರ ಮುತ್ತಣ್ಣ ಮಾತನಾಡಿ, ‘ಸಂಸದ ಪ್ರತಾಪ್ ಸಿಂಹ ಕೇಂದ್ರ ಸರ್ಕಾರದ ರೈಲ್ವೆ ಸಚಿವರೊಂದಿಗೆ ಮಾತನಾಡಿ ಉದ್ದೇಶಿತ ರೈಲು ಯೋಜನೆಯನ್ನು ತಡೆಹಿಡಿಯಬೇಕು. ಇದೀಗ ನಡೆಸುತ್ತಿರುವ ಸರ್ವೆ ಕಾರ್ಯವನ್ನು ಸ್ಥಗಿತಗೊಳಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.