ADVERTISEMENT

ಲೋಕಾಯುಕ್ತಕ್ಕೆ ದೂರು ನೀಡಿದ್ದಕ್ಕೆ ಹಲ್ಲೆ- ಆರೋಪ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2011, 9:00 IST
Last Updated 7 ಸೆಪ್ಟೆಂಬರ್ 2011, 9:00 IST

ಮಡಿಕೇರಿ: ಸೋಮವಾರಪೇಟೆ ತಾಲ್ಲೂಕಿನ ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರಿಂದ ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಅಸೋಸಿಯೇಶನ್ ಫಾರ್ ಸೋಶಿಯಲ್ ಟ್ರಾನ್ಸ್‌ಪರೆನ್ಸಿ, ರೈಟ್ಸ್ ಅಂಡ್ ಆ್ಯಕ್ಷನ್ (ಅಸ್ತ್ರ) ಸರ್ಕಾರೇತರ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಎಂ.ಸಿ. ಚಂದನ್ ಆರೋಪಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ನಮ್ಮ ಸಂಸ್ಥೆಯು ಭ್ರಷ್ಟಾಚಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡಿಕೊಂಡು ಬಂದಿದೆ. ಅದರಂತೆ ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತರಿ ಯೋಜನೆಯಲ್ಲಿ ನಡೆದ ಅವ್ಯವಹಾರವನ್ನು ಬಯಲಿಗೆ ಎಳೆಯಲಾಯಿತು ಎಂದರು.

ಪಂಚಾಯಿತಿ ವ್ಯಾಪ್ತಿಯ ಅಭ್ಯತ್ ಮಂಗಲದ ಎಂ.ಆರ್. ರಾಮಚಂದ್ರ ಗದ್ದೆಗೆ ತಡೆಗೋಡೆ ನಿರ್ಮಿಸಲು ರೂ 40ಸಾವಿರ ರೂಪಾಯಿ ವೆಚ್ಚವಾಗಿದ್ದರೂ 1 ಲಕ್ಷ ರೂಪಾಯಿ ಹಣವನ್ನು ಪಡೆದುಕೊಳ್ಳಲಾಗಿದೆ ಎಂದು ಅವರು ದಾಖಲೆ ಸಮೇತ ಆರೋಪಿಸಿದರು.

ಮತ್ತೊಂದು ಪ್ರಕರಣದಲ್ಲಿ ಡಿ.ಪಿ. ಚೆಂಗಪ್ಪ ಅವರ ಗದ್ದೆ ಪಕ್ಕ ಮೋರಿ ನಿರ್ಮಿಸಲು 60 ಸಾವಿರ ರೂಪಾಯಿ ಪಡೆದುಕೊಂಡಿದ್ದರೂ, ಕಾಮಗಾರಿ ಕೈಗೊಂಡಿರಲಿಲ್ಲ. ಈವೆರಡೂ ಪ್ರಕರಣಗಳ ಬಗ್ಗೆ ಸೂಕ್ತ ದಾಖಲೆಗಳನ್ನು ಸಂಗ್ರಹಿಸಿ ಲೋಕಾಯುಕ್ತರಿಗೆ ದೂರು ನೀಡಲಾಯಿತು. ಇದರಿಂದ ಭಯಭೀತರಾದ ಸ್ಥಳೀಯ ಅಧಿಕಾರಿಗಳು, ಜನಪ್ರತಿನಿಧಿಗಳು ತರಾತುರಿಯಾಗಿ ಕೇವಲ ಎರಡೇ ದಿನಗಳಲ್ಲಿ ಮೋರಿ ನಿರ್ಮಿಸಿದ್ದಾರೆ ಎಂದು ಅವರು ಹೇಳಿದರು.

ಅವ್ಯವಹಾರದ ಬಗ್ಗೆ ದೂರು ನೀಡಿದ್ದರಿಂದ ಕುಪಿತರಾದ ಸ್ಥಳೀಯ ಕೆಲವು ವ್ಯಕ್ತಿಗಳು ಭಾನುವಾರ (ಸೆ.4) ಸಂಜೆ ತಮ್ಮ ಮೇಲೆ ಹಾಗೂ ಗ್ರಾ.ಪಂ. ಸದಸ್ಯೆಯಾಗಿರುವ ತಮ್ಮ ಪತ್ನಿ ದೀಪಿಕಾ ಅವರ ಮೇಲೆಯೂ ಹಲ್ಲೆ ಮಾಡಿದ್ದಾರೆ. ಇದರ ಬಗ್ಗೆ ಪೊಲೀಸರಿಗೆ ದೂರು ದಾಖಲಿಸಲಾಗಿದೆ ಎಂದರು.

ಅವ್ಯವಹಾರವನ್ನು ಬಯಲಿಗೆಳೆ ದಿದ್ದರಿಂದ ನನಗೆ ಕೊಲೆ ಬೆದರಿಕೆಗಳು ಬರುತ್ತಿವೆ. ಇದಲ್ಲದೇ, ನನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುವ ಪ್ರಯತ್ನ ನಡೆದಿದೆ ಎಂದು ಅವರು ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಹಲ್ಲೆಗೆ ಒಳಗಾದ ದೀಪಿಕಾ ಕೂಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.