ADVERTISEMENT

ವಾಹನ ಸಂಚಾರಕ್ಕೆ ಸಂಚಕಾರ

ಶ್ರೀಕಾಂತ ಕಲ್ಲಮ್ಮನವರ
Published 4 ಜೂನ್ 2012, 5:25 IST
Last Updated 4 ಜೂನ್ 2012, 5:25 IST
ವಾಹನ ಸಂಚಾರಕ್ಕೆ ಸಂಚಕಾರ
ವಾಹನ ಸಂಚಾರಕ್ಕೆ ಸಂಚಕಾರ   

ಮಡಿಕೇರಿ: ಮಳೆಗಾಲ ಹೊಸ್ತಿಲಲ್ಲಿ ಬಂದು ನಿಂತಿದ್ದರೂ ನಗರದ ಕಾಲೇಜು ರಸ್ತೆ ಕಾಮಗಾರಿಯು ಇದುವರೆಗೆ ಪೂರ್ಣಗೊಂಡಿಲ್ಲ. ಕಳೆದ 3-4 ತಿಂಗಳಿನಿಂದ ನಡೆಯುತ್ತಿರುವ ಈ ಕಾಮಗಾರಿಯು ಆಮೆಗತಿಯಲ್ಲಿ ಸಾಗುತ್ತಿರುವುದೇ ಇದಕ್ಕೆ ಕಾರಣ.

ಚೌಕಿಯಿಂದ ಕಾನ್ವೆಂಟ್ ಜಂಕ್ಷನ್‌ವರೆಗಿನ ರಸ್ತೆಯನ್ನು ಅಂದಾಜು ರೂ. 2 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಯನ್ನಾಗಿ ಮಾಡಲಾಗಿದೆ. ರಸ್ತೆ ಪೂರ್ತಿಯಾಗಿದ್ದರೂ ಪಕ್ಕದ ಫುಟ್‌ಪಾತ್ ಹಾಗೂ ಚರಂಡಿ ವ್ಯವಸ್ಥೆ ಕೆಲಸ ಇನ್ನೂ ಪೂರ್ಣಗೊಳ್ಳಬೇಕಾಗಿದೆ.

ಮತ್ತೊಂದೆಡೆ ಕಾಮಗಾರಿ ನಡೆಸಲು ಮರಳು, ಜಲ್ಲಿಕಲ್ಲು ಸೇರಿದಂತೆ ಕಟ್ಟಡ ಸಾಮಗ್ರಿಗಳನ್ನು ರಸ್ತೆ ಮೇಲೆಯೇ ಹಾಕಲಾಗಿದೆ. ಇದರಿಂದ ವಾಹನಗಳ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ನಾಗರಿಕರು ಶಪಿಸುತ್ತಿದ್ದಾರೆ.

ಕಾಮಗಾರಿಯ ಕೆಲಸ ಕೂಡ ಸತತವಾಗಿ ನಡೆಯದೇ ದಿನಬಿಟ್ಟು ದಿನ ನಡೆಯುತ್ತಿರುವುದರಿಂದ ಕಾಮಗಾರಿ ವಿಳಂಬವಾಗುತ್ತಿದೆ. ಹೀಗಾಗಿ ಈ ಸಾಮಗ್ರಿಗಳು ಹಲವಾರು ದಿನಗಳಿಂದ ರಸ್ತೆ ಮೇಲೆಯೇ ಉಳಿದಿವೆ. ಇದನ್ನು ತೆಗೆಸಿಹಾಕಲು ಗುತ್ತಿಗೆದಾರರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಾಗರಿಕರು ಹೇಳುತ್ತಾರೆ.

ಈ ರಸ್ತೆಯು ಏಕಮುಖ ಸಂಚಾರವಾಗಿದೆ. ಅಲ್ಲದೇ ರಸ್ತೆಯ ಒಂದು ಬದಿ ವಾಹನಗಳಿಗೆ ನಿಲುಗಡೆ ವ್ಯವಸ್ಥೆಯನ್ನೂ ಮಾಡಲಾಗಿದೆ. ಉಳಿದಿರುವ ರಸ್ತೆಯ ಅರ್ಧ ಭಾಗದಲ್ಲಿ ಹೀಗೆ ಮರಳು, ಜಲ್ಲಿಕಲ್ಲು ಹಾಕಿಕೊಂಡರೆ ವಾಹನಗಳನ್ನು ಓಡಿಸುವುದಾದರೂ ಹೇಗೆ ಎನ್ನುವುದು ವಾಹನ ಚಾಲಕರ ಪ್ರಶ್ನೆಯಾಗಿದೆ.
 
ಇದರಿಂದ ಕೇವಲ ವಾಹನಗಳ ಸಂಚಾರಕ್ಕೆ ಮಾತ್ರವಲ್ಲ. ಸಾಮಾನ್ಯ ಜನರಿಗೆ ನಡೆದಾಡಲು ಸಹ ಕಷ್ಟವಾಗುತ್ತಿದೆ. ಇದರ ಬಗ್ಗೆ ಹಲವು ಬಾರಿ ನಗರಸಭೆಯ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವೆಂಕಟೇಶ್ ಅಳಲು ತೋಡಿಕೊಂಡರು.

ಸೂಚನೆ ನೀಡಲಾಗಿದೆ
ಈ ಸಮಸ್ಯೆಯ ಬಗ್ಗೆ ಗಮನಕ್ಕೆ ತಂದಾಗ ಪ್ರತಿಕ್ರಿಯಿಸಿದ ನಗರಸಭೆ ಆಯುಕ್ತ ಶಶಿಕುಮಾರ್, `ಮರಳು, ಜಲ್ಲಿಕಲ್ಲನ್ನು ರಸ್ತೆಯಿಂದ ಬೇರೆಡೆ ಸ್ಥಳಾಂತರಿಸುವಂತೆ ಗುತ್ತಿಗೆದಾರರಿಗೆ ಈಗಾಗಲೇ ಸೂಚನೆ ನೀಡಿದ್ದೇವೆ~ ಎಂದರು.

ಸಾಮಗ್ರಿ ಸ್ಥಳಾಂತರಿಸಲು ಬೇರೆಡೆ ಸ್ಥಳವನ್ನು ಅವರಿಗೆ ನೀಡಲಾಗುವುದು. ಸೋಮವಾರದ ವೇಳೆಗೆ ಈ ಸಾಮಗ್ರಿಗಳನ್ನು ಬೇರೆಡೆ ಸ್ಥಳಾಂತರಿಸಲಾಗುವುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.