ADVERTISEMENT

ವಿಜ್ಞಾನ, ಕನ್ನಡ ಶಿಕ್ಷಕರ ನೇಮಕಕ್ಕೆ ಮಕ್ಕಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 7:50 IST
Last Updated 27 ಡಿಸೆಂಬರ್ 2012, 7:50 IST

ಸೋಮವಾರಪೇಟೆ: ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಮವಾರ ಪೇಟೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಚೌಡ್ಲು, ಕಿಬ್ಬೆಟ್ಟ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ಎಂದು ಅಲ್ಲಿಯ ವಿದ್ಯಾರ್ಥಿಗಳು ಆಗ್ರಹಿಸಿದರು.
ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲ ಗಂಗಾಧರ್ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಈ ಚರ್ಚೆ ಮಾಡಲಾಯಿತು.

ವಿದ್ಯುತ್ ಕಡಿತದಿಂದ ವಿದ್ಯಾಭ್ಯಾಸ ಹಾಳಾಗುತ್ತಿದೆ. ಓದುವ ಸಮಯದ ್ಲಲಾದರೂ, ವಿದ್ಯುತ್ ಕಡಿತ  ಮಾಡದಂತೆ ಸೆಸ್ಕ್‌ಗೆ ಸೂಚಿಸಲು  ಭರತ್ ಆಗ್ರಹಿಸಿದರು. ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ, ಕನ್ನಡ ಪಾಠ ಮಾಡಲು ಶಿಕ್ಷಕರಿಲ್ಲ. ಕೂಡಲೇ ಶಿಕ್ಷಕರನ್ನು ನೇಮಿಸಬೇಕು ಎಂದು ರಕ್ಷಿತಾ ಒತ್ತಾಯಿಸಿದರು.

ಹೆಚ್ಚುವರಿ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ. ಆದರೂ ಶಿಕ್ಷಕರು ಶಾಲೆಗೆ ಬರುತ್ತಿಲ್ಲವೆಂದರೆ ಏನು ಮಾಡುವುದು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಇದನ್ನು ಗಮನಿಸಬೇಕು ಎಂದು ತಾಲೂಕು ಪಂಚಾಯಿತಿ ಸದಸ್ಯೆ ಪೂರ್ಣಿಮಾ ಗೋಪಾಲ್ ಹೇಳಿದರು.

ಚೌಡ್ಲು ಶಾಲೆಗೆ  ಕಾಂಪೌಂಡ್ ಇಲ್ಲದಿರುವುದರಿಂದ ರಜಾ ದಿನಗಳಲ್ಲಿ ಬಿಡಾಡಿ ದನಗಳು ಶಾಲೆಯ ಅವರಣದಲ್ಲಿ ಮಲಗುತ್ತವೆ. ಕೆಲವು ಸಾರ್ವಜನಿಕರು ಶೌಚಾಲಯವನ್ನು ಗಲೀಜು ಮಾಡುತ್ತಾರೆ. ಬೆಳಿಗ್ಗೆ ನಾವೇ ಶೌಚಾಲಯವನ್ನು ಸ್ವಚ್ಛಗೊಳಿಸಬೇಕು ಎಂದು ರಂಜಿತಾ ಆರೋಪಿಸಿದರು.

ಚೌಡ್ಲು ಶಾಲೆಯ ಕೆಲವು ಅಭಿವೃದ್ಧಿ ಕೆಲಸಗಳನ್ನು ಪಂಚಾಯಿತಿ ವತಿಯಿಂದ ಮಾಡಲಾಗಿದೆ. ಮುಂದೆ ಹೆಚ್ಚಿನ ಅನುದಾನ ಒದಗಿಸಲಾಗುವುದು ಎಂದು ಸದಸ್ಯ ಮನುಕುಮಾರ್ ರೈ ತಿಳಿಸಿದರು.

ಕಿಬ್ಬೆಟ್ಟ ಶಾಲೆಗೆ ಆಸ್ತಿ ದಾಖಲಾತಿಗಳೇ ಇಲ್ಲ. ಇದರ ಬಗ್ಗೆ ಗ್ರಾಮ ಪಂಚಾಯಿತಿ ಗಮನಹರಿಸಬೇಕು ಎಂದು ಅಲ್ಲಿನ ಶಿಕ್ಷಕರು ಹೇಳಿದರು. ಶಾಲಾಭಿವೃದ್ಧಿ ಮಂಡಳಿಯವರು, ದಾನಪತ್ರವನ್ನು ಪಡೆದು, ಕ್ಷೇತ್ರಶಿಕ್ಷಣಾಧಿಕಾರಿಗಳ ಮೂಲಕ, ತಹಶೀಲ್ದಾರರಿಂದ ದಾಖಲಾತಿಗಳನ್ನು ಪಡೆದುಕೊಳ್ಳುವಂತೆ ಸಭೆ ಸೂಚಿಸಿತು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜ್ಯೋತಿ, ಸದಸ್ಯರಾದ ಗಿರೀಶ್, ಶಶಿಕಲಾ ದೇವರಾಜ್, ಎಸ್.ಎನ್. ಸತೀಶ್, ಕೊರಗಪ್ಪ, ಎಚ್.ಜಿ. ಚಿಂತು, ಪಿಡಿಒ ಗಣಪತಿ ಉಪಸ್ಥಿತರಿದ್ದರು. ಚೌಡ್ಲು, ಸೋಮವಾರಪೇಟೆ, ಕಿಬ್ಬೆಟ್ಟ ಸರ್ಕಾರಿ ಶಾಲೆಗಳ ಮಕ್ಕಳು ಹಾಗೂ ಮುಖ್ಯ ಶಿಕ್ಷಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.