ADVERTISEMENT

ವಿಶ್ವವಿದ್ಯಾಲಯಕ್ಕೆ ಕಿಟೆಲ್ ಹೆಸರಿಡಲು ಮನವಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 6:44 IST
Last Updated 6 ಏಪ್ರಿಲ್ 2013, 6:44 IST

ಮಡಿಕೇರಿ: ಕೇಂದ್ರ ಸರ್ಕಾರವು ಶ್ರೀರಂಗಪಟ್ಟಣದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಅಲ್ಪಸಂಖ್ಯಾತರ ವಿಶ್ವ ವಿದ್ಯಾಲಯಕ್ಕೆ ರೆವರೆಂಡ್ ಫರ್ಡಿನಾಂಡ್ ಕಿಟೆಲ್ ಅವರ ಹೆಸರಿಡಬೇಕೆಂದು ಕೊಡಗು ಜಿಲ್ಲೆಯ ಕ್ರೈಸ್ತರು ಒತ್ತಾಯಿಸಿದರು.

ಇಲ್ಲಿನ ಕೋಟೆ ಆವರಣದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಗೆ ಶುಕ್ರವಾರ ಭೇಟಿ ನೀಡಿದ ಮುಖಂಡರಾದ ಅಬ್ರಹಾಂ ಟಿ.ಜೋಸೆಫ್, ಕೊಡಗು ಜಿಲ್ಲಾ ಕ್ರೈಸ್ತರ ಸೇವಾ ಸಂಘದ ಅಧ್ಯಕ್ಷ ಕೆ.ಟಿ. ಬೇಬಿ ಮ್ಯಾಥ್ಯು ಹಾಗೂ ಇತರರು ತಮ್ಮ ಬೇಡಿಕೆಯನ್ನು ಕೇಂದ್ರ ಸರ್ಕಾರಕ್ಕೆ ತಲುಪಿಸುವಂತೆ ಜಿಲ್ಲಾಧಿಕಾರಿ ಡಾ.ಎನ್.ವಿ. ಪ್ರಸಾದ್ ಅವರಿಗೆ ಮನವಿ ಪತ್ರ ನೀಡಿದರು.

ಕೊಡಗು ಜಿಲ್ಲಾ ಕ್ರೈಸ್ತರ ಸೇವಾ ಸಂಘ ಹಾಗೂ ಸೋಮವಾರಪೇಟೆಯ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಪದಾಧಿಕಾರಿಗಳು ನಿಯೋಗದಲ್ಲಿ ಇದ್ದರು.

ಅಲ್ಪಸಂಖ್ಯಾತರ ವಿಶ್ವವಿದ್ಯಾಲಯಕ್ಕೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಸಂತ ಶಿಶುನಾಳ ಷರೀಫ್ ಅವರ ಹೆಸರು ಇಟ್ಟರೆ ಅದಕ್ಕೆ ನಮ್ಮ ಸಹಮತವಿದೆ. ಆದರೆ, ಟಿಪ್ಪು ಸುಲ್ತಾನ್ ಹೆಸರಿಗೆ ನಮ್ಮ ವಿರೋಧ ಇದೆ ಎಂದು ಸಾಮಾಜಿಕ ಹೋರಾಟಗಾರ ಅಬ್ರಹಾಂ ಟಿ.ಜೋಸೆಫ್ ಹೇಳಿದರು.

ಕೇವಲ ಮುಸ್ಲಿಮರಷ್ಟೇ ಅಲ್ಪಸಂಖ್ಯಾತರಲ್ಲ, ಕ್ರೈಸ್ತರು ಸೇರಿದಂತೆ ವಿವಿಧ ಜನಾಂಗದವರು ಕೂಡ ಅಲ್ಪಸಂಖ್ಯಾತರಾಗಿದ್ದಾರೆ. ಮುಸ್ಲಿಮರನ್ನು ಓಲೈಸುವ ದೃಷ್ಟಿಯಿಂದ ಕೇಂದ್ರ ಸರ್ಕಾರವು ವಿಶ್ವವಿದ್ಯಾಲಯಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಲು ಮುಂದಾಗಿರುವುದು ಖಂಡನೀಯ ಎಂದು ಮುಖಂಡರು ಹೇಳಿದರು.

ಕಿಟೆಲ್ ಅವರು ಕನ್ನಡ ಭಾಷೆ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರು ಕನ್ನಡ ನಿಘಂಟು ರಚಿಸಿದ್ದೇ ಇದಕ್ಕೆ ಸಾಕ್ಷಿ. ಅಂತಹ ಮಹಾನ್ ವ್ಯಕ್ತಿಗಳ ಹೆಸರನ್ನು ವಿಶ್ವವಿದ್ಯಾಲಯಕ್ಕೆ ಇಡಬೇಕು ಎಂದು ಅವರು ಮನವಿ ಮಾಡಿದರು.

ಮುಖಂಡರಾದ ಕೆ.ಜಿ. ಪೀಟರ್, ಎನ್.ಟಿ. ಜೋಸೆಫ್, ಕ್ರಿಸ್ಟೋಫರ್ ಅಮ್ಮನ್ನ, ಅಗಸ್ಟಿಯನ್ ಜಯರಾಜ್, ಜಾಯ್ ಮೇನೇಜಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.