ADVERTISEMENT

ವಿಶ್ವ ಜಲ ದಿನ: ಜಲ ಸೆಲೆಗೆ ಮಾಲಿನ್ಯ ಬೇಡ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2011, 7:10 IST
Last Updated 22 ಮಾರ್ಚ್ 2011, 7:10 IST

ನಾಪೋಕ್ಲು: ಮತ್ತೆ ಬಿಸಿಲೇರತೊಡಗಿದೆ. ಕುಡಿಯುವ ನೀರಿಗೆ ತತ್ವಾರ ಬಂದಿದೆ. ಕೃಷಿ ಸಂಬಂಧಿ ಚಟುವಟಿಕೆಗಳಿಗೆ ಅಗತ್ಯ ನೀರು ಸಿಗುತ್ತಿಲ್ಲ. ಕೊಡಗಿನಲ್ಲಿ ಕಾಫಿ ಕೃಷಿಗೆ ಮಳೆಯ ನಿರೀಕ್ಷೆಯಲ್ಲಿದ್ದಾರೆ ಬೆಳೆಗಾರರು. ಪ್ರಸಕ್ತ ವರ್ಷ ಫೆಬ್ರವರಿ 23ರಂದು ನಾಪೋಕ್ಲು ವ್ಯಾಪ್ತಿಯಲ್ಲಿ ಮೊದಲ ಮಳೆ ಬಿದ್ದಿತ್ತು.

ಅಂತೆಯೇ ಕಾಫಿ ತೋಟಗಳಲ್ಲಿ ಹೂವು ಅರಳಿ ಘಮಘಮಿಸಿದ್ದವು. ಮತ್ತೆ ಮಳೆ ದೂರವಾಗಿ ಸರಿಸುಮಾರು ಒಂದು ತಿಂಗಳಾಗುತ್ತಾ ಬಂತು. ಮಳೆ ಬರುವ ಲಕ್ಷಣವೇ ತೋರುತ್ತಿಲ್ಲ. ಕಾಫಿ ಕೃಷಿಗೆ ಪೂರಕವಾಗಿ ಬೇಕಾದ ಬ್ಯಾಕಿಂಗ್ ಮಳೆ ಲಭಿಸಿಲ್ಲ. ಮಳೆಗಾಗಿ ತಲೆಯೆತ್ತಿ ಆಕಾಶದತ್ತ ದಿಟ್ಟಿಸುತ್ತಲಿದ್ದಾನೆ ರೈತ. ಬಿಸಿಲಿನ ಧಗೆ ಏರುತ್ತಿರುವಂತೆಯೇ ಜಲಮೂಲ ಬತ್ತತೊಡಗಿವೆ.

ಇತ್ತೀಚಿನ ವರ್ಷಗಳಲ್ಲಿ ಉಂಟಾಗಿರುವ ಜಲಸಂಬಂಧಿ ಸವಾಲು ಕೂಡಾ ಗಂಭೀರವಾದದ್ದೇ ಆಗಿದೆ. ಈ ಹಿನ್ನಲೆಯಲ್ಲಿ ಪ್ರತಿವರ್ಷ ಮಾರ್ಚ್ 22ರಂದು ವಿಶ್ವ ಜಲದಿನ ಎಂದು ಆಚರಿಸಲಾಗುತ್ತಿದೆ. ವರ್ಷದ 365 ದಿನಗಳನ್ನು ಜಲದಿನಗಳಾಗಿ ಆಚರಿಸುವಂತಾಗಬೇಕು. ಎಂದು ವಿಶ್ವಸಂಸ್ಥೆ 2003ನ್ನು ಅಂತರರಾಷ್ಟ್ರೀಯ ಶುದ್ದ ನೀರಿನ ವರ್ಷ ಎಂದು ಸಾರಿತ್ತು.

ಕೊಡಗು ಜಿಲ್ಲೆಯಲ್ಲಿ ಈ ವರ್ಷ ಹೂಮಳೆ ಹಾಗೂ ಬ್ಯಾಕಿಂಗ್ ಮಳೆ ಸರಿಯಾಗಿ ಆಗದಿರುವ ಹಿನ್ನಲೆಯಲ್ಲಿ ಬೆಳೆಗಾರರು ತುಂತುರು ನೀರಾವರಿ ವ್ಯವಸ್ಥೆಯಲ್ಲಿ ತೊಡಗಿದ್ದಾರೆ. ಕೆರೆ ಹೊಳೆ ನದಿಗಳಿಂದ ಯಂತ್ರಗಳ ಮೂಲಕ ನೀರನ್ನು ತೋಟಗಳಿಗೆ ಹಾಯಿಸುತ್ತಿದ್ದಾರೆ. ಉತ್ತಮ ಫಸಲು ಬರಬೇಕಾದರೆ ನೀರಾವರಿ ವ್ಯವಸ್ಥೆ ಕೈಗೊಳ್ಳುವುದು ಅನಿವಾರ್ಯ.

ನಿಸರ್ಗದಿಂದ ಪಡೆಯುವ ನೀರನ್ನು ನಾವು ಎಷ್ಟೇ ವಿವಿಧ ಬಗೆಗಳಲ್ಲಿ ವಿನಿಯೋಗಿಸಿದರೂ ಅದು ಪರಿಶುದ್ದವಾಗಿ ನಿಸರ್ಗ ಸೇರುವಂತೆ ನೋಡಿಕೊಳ್ಳುವ ಸವಾಲು ಎದುರಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.