ADVERTISEMENT

ಶಾಲಾ ವಾರ್ಷಿಕೋತ್ಸವದಲ್ಲಿ ಸಾಂಸ್ಕೃತಿಕ ಕಲರವ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 10:31 IST
Last Updated 15 ಡಿಸೆಂಬರ್ 2012, 10:31 IST

ನಾಪೋಕ್ಲು: ಇಲ್ಲಿಯ ಶ್ರಿರಾಮಟ್ರಸ್ಟ್ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಜನಮೆಚ್ಚುಗೆ ಗಳಿಸಿತು.

ವಿವಿಧ ಬಗೆಯ ನೃತ್ಯಗಳು, ನಾಟಕ, ಕರಾಟೆ ಪ್ರದರ್ಶನ ಮುಂತಾದವು ರಂಜಿಸಿದವು. ವಿದ್ಯಾರ್ಥಿಗಳು ಭರತನಾಟ್ಯ, ಜನಪದ ನೃತ್ಯ ಹಾಗೂ ಚಲನಚಿತ್ರ ಹಾಡುಗಳಿಗೆ ಹೆಜ್ಜೆ ಹಾಕಿದರು.

ಎಲ್‌ಕೆಜಿ ಮತ್ತು ಯುಕೆಜಿ ಪುಟಾಣಿಗಳ ನೃತ್ಯ ಗಮನಸೆಳೆಯಿತು. ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ವಿದ್ಯಾರ್ಥಿನಿಯರು ಒನಕೆ ಓಬವ್ವ ನೃತ್ಯ ರೂಪಕವನ್ನು ಪ್ರದರ್ಶಿಸಿದರು.

`ಕನ್ನಡನಾಡಿನ ವೀರ ರಮಣಿಯ, ಗಂಡು ಭೂಮಿಯ ವೀರನಾರಿಯ..' ಹಾಡಿಗೆ ನೃತ್ಯ ಸಂಯೋಜಿಸಿ ಮನಮಿಡಿಯುವಂತೆ ಅಭಿನಯಿಸಿದರು. ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ಕರಾವಳಿ ಕೇಸರಿ ಎಂಬ ನಾಟಕದಲ್ಲಿ ಮನೋಜ್ಞವಾಗಿ ಅಭಿನಯಿಸಿ ದೇಶಪ್ರೇಮ ಬಿಂಬಿಸಿದರು. `ಬಯತ್‌ಕಾಲ' ಎಂಬ ಕೊಡವ ಕಿರುನಾಟಕ ವೀಕ್ಷಕರನ್ನು ರಂಜಿಸಿತು.

ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಮುನ್ನ ಶಾಲಾ ಮೈದಾನದಲ್ಲಿ ವಿದ್ಯಾರ್ಥಿಗಳು ರಿಬ್ಬನ್ ಡಾನ್ಸ್, ಲೇಝಿಮ್, ಡಂಬೆಲ್ಸ್ ಹಾಗೂ ಸಾಮೂಹಿಕ ಕವಾಯತು ಪ್ರದರ್ಶಿಸಿದರು. ಸಭಾ ಕಾರ್ಯಕ್ರಮದಲ್ಲಿ ಅರುಣಾಚಲ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಕಂಬೇಯಂಡ ಸಿ. ಬೆಳ್ಯಪ್ಪ, ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ.ಸಿ. ಪೊನ್ನಪ್ಪ ಇದ್ದರು.

ಇದಕ್ಕೂ ಮುನ್ನಾದಿನವಾದ ಗುರುವಾರ ನಡೆದ ವಾರ್ಷಿಕ ಕ್ರೀಡಾಕೂಟವನ್ನು ವಿದ್ಯಾಸಂಸ್ಥೆಯ ಸದಸ್ಯ ಕೆ.ಎಂ. ಮಂದಣ್ಣ ಉದ್ಘಾಟಿಸಿದರು.  ಜಿಲ್ಲಾ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಕೋಟೆರ ಎಂ. ಚೆಂಗಪ್ಪ, ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಬಿ.ಎಂ. ಬೋಪಯ್ಯ ಇದ್ದರು. ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.