ADVERTISEMENT

ಶಿಲಾಯುಗದ ಸಮಾಧಿಗಳ ನೆಲೆ ಪತ್ತೆ!

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2016, 11:27 IST
Last Updated 10 ಆಗಸ್ಟ್ 2016, 11:27 IST
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕು ತೊರೆನೂರಿನ ಸಿದ್ದಲಿಂಗಾಪುರ – ಅರಶಿನಗುಪ್ಪೆ ಸ್ಥಳದಲ್ಲಿ ಪತ್ತೆಯಾದ ಮಡಿಕೆಗಳು
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕು ತೊರೆನೂರಿನ ಸಿದ್ದಲಿಂಗಾಪುರ – ಅರಶಿನಗುಪ್ಪೆ ಸ್ಥಳದಲ್ಲಿ ಪತ್ತೆಯಾದ ಮಡಿಕೆಗಳು   

ಮಡಿಕೇರಿ: ಕೊಡಗು ಜಿಲ್ಲೆ ಸೋಮ ವಾರಪೇಟೆ ತಾಲ್ಲೂಕು ತೊರೆನೂರು ಗ್ರಾಮದ ಸಿದ್ದಲಿಂಗಾ ಪುರ– ಅರಶಿನಗುಪ್ಪೆಯಲ್ಲಿ ನಡೆದ ಪ್ರಾದೇಶಿಕ ಸಂಶೋಧನೆಯಲ್ಲಿ ಬೃಹತ್‌ ಶಿಲಾಯುಗ ಕಾಲದ ಕಲ್ಮನೆ ಸಮಾಧಿಗಳು, ತೊಟ್ಟಿಲು ಸಮಾಧಿಗಳು, ಆ ಕಾಲದ ಮಡಕೆ–-ಕುಡಿಕೆಗಳು ಹಾಗೂ ನಿಲುವುಗಲ್ಲಿನ ಸಮಾಧಿಗಳು ಪತ್ತೆಯಾಗಿವೆ.

ಮಂಜುನಾಥ ದೇವಾಲಯ ಸಮಿತಿ, ಬೆಳ್ತಂಗಡಿಯ ಆರ್ಯ ಪ್ರತಿಷ್ಠಾನ, ಯೋಗೀಶ್ವರ ಸಿದ್ಧಮಠದ ಕೋರಿಕೆಯ ಮೇರೆಗೆ ಇತ್ತೀಚೆಗೆ ಶಿರ್ವದ ಮುಲ್ಕಿ ಸುಂದರ್‌ ರಾಮ್‌ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ವತಿಯಿಂದ ನಡೆದ ಸಂಶೋಧನೆಯಲ್ಲಿ ಸಮಾಧಿ ನೆಲೆಗಳು ಪತ್ತೆಯಾದವು ಎಂದು ವಿಭಾಗ ಮುಖ್ಯಸ್ಥ ಪ್ರೊ.ಟಿ. ಮುರುಗೇಶಿ ತಿಳಿಸಿದ್ದಾರೆ.

ನಿಲುವುಗಲ್ಲು ಸಮಾಧಿ: ಅರಶಿನ ಗುಪ್ಪೆಯ ನಿಲುವುಗಲ್ಲನ್ನು ‘ಚೌಡಿ -ಮುನೇಶ್ವರನ ಕಲ್ಲು’ ಎಂದು ಸ್ಥಳೀಯರು ವಾರ್ಷಿಕ ಪೂಜೆ ಸಲ್ಲಿಸುತ್ತಿದ್ದಾರೆ. ಈ ಕಲ್ಲುನೆಲಮಟ್ಟದಿಂದ 3.5 ಮೀಟರ್‌ ಎತ್ತರದಲ್ಲಿದ್ದು, 1 ಮೀಟರ್‌ ಅಗಲವಾ ಗಿದೆ. ಪಶ್ಚಿಮ ದಿಕ್ಕಿಗೆ ಬಾಗಿಸಿ ನಿಲ್ಲಿಸಲಾ ಗಿದೆ. ಕೊಡಗು ಜಿಲ್ಲೆಯಲ್ಲಿ ನೂರಾರು ಕಲ್ಮನೆ ಸಮಾಧಿಗಳು, ತೊಟ್ಟಿಲು ಸಮಾಧಿಗಳು ಈಗಾಗಲೇ ಪತ್ತೆಯಾಗಿವೆ. ಆದರೆ, ‘ನಿಲುವುಗಲ್ಲು ಸಮಾಧಿಗಳು’ ಮಾತ್ರ ಬಹಳ ಅಪ ರೂಪ. ಸೋಮ ವಾರಪೇಟೆ ತಾಲ್ಲೂಕಿನ ಹೆಗ್ಗಡೆಹಳ್ಳಿ ಯಲ್ಲಿ ಒಂದು ನಿಲುವುಗಲ್ಲು ಪತ್ತೆಯಾ ಗಿದ್ದು, ಅರಿಶಿನಗುಪ್ಪೆಯ ನಿಲುವುಗಲ್ಲು 2ನೇಯದ್ದು ಎಂದು ಸಂಶೋಧಕರು ಹೇಳಿದ್ದಾರೆ. 

ಕಲ್ಮನೆ ಸಮಾಧಿಗಳು: ಅರಶಿನಗುಪ್ಪೆಯ ಮಂಜುನಾಥ ದೇವಾಲಯದ ಹಿಂಭಾಗ ದಲ್ಲಿ ಕಲ್ಮನೆಗಳು ಮಣ್ಣಿನಲ್ಲಿ ಹುದುಗಿ ಹೋಗಿದ್ದು, ಕಲ್ಮನೆಗಳ ಸುತ್ತ ವಿಶಾಲವಾಗಿ ಕಾಡುಕಲ್ಲುಗಳ ಶಿಲಾವೃತ್ತ ನಿರ್ಮಿಸಲಾಗಿದೆ. ಶಿಲಾವೃತ್ತದ ನಡುವೆ ಕಲ್ಮನೆಗಳು ಹುಗಿದುಹೋಗಿವೆ. ಕೆಲವು ಕಲ್ಮನೆಗಳನ್ನು ರಸ್ತೆ ನಿರ್ಮಾಣದ ವೇಳೆ ಅಗೆದು ಹಾಳು ಮಾಡಲಾಗಿದೆ.

ಕಲ್ಮನೆಗಳೆಂದರೆ, ಭಾರಿ ಗಾತ್ರದ ಕಲ್ಲು ಚಪ್ಪಡಿಗಳನ್ನು ಚೌಕಾಕಾರದಲ್ಲಿ ಒಂದಕ್ಕೊಂದು ತಾಗಿಸಿ ನಿಲ್ಲಿಸಿ ಅದರ ಮೇಲೆ ಮತ್ತೊಂದು ಅಗಲವಾದ ಕಲ್ಲು ಚಪ್ಪಡಿಯನ್ನು ಮುಚ್ಚುಗೆಯಂತೆ ಮುಚ್ಚಿ ನಿರ್ಮಿಸಿದ ಕಲ್ಲಿನ ಮನೆ. 

ಬೃಹತ್ ಶಿಲಾಯುಗದ ಮಡಕೆಗಳು:  ಮಂಜುನಾಥ ದೇವಾಲಯದ ಜೀರ್ಣೋದ್ಧಾರಕ್ಕಾಗಿ ಭೂಮಿ ಅಗೆಯು ವಾಗ ಸುಮಾರು 15 ಅಡಿ ಆಳದಲ್ಲಿ ವಿವಿಧ ರೀತಿಯ ಮಡಕೆಗಳು ಪತ್ತೆಯಾ ಗಿವೆ. ಈ ಮಡಕೆಗಳು ರಚನೆ, ವಿನ್ಯಾಸ, ಬಣ್ಣ, ಗಾತ್ರ, ಆಕಾರದಲ್ಲಿ ಹೆಗ್ಗಡೆಹಳ್ಳಿಯ ಉತ್ಖನನದಲ್ಲಿ ದೊರೆತ ಮಡಕೆಗಳನ್ನು ಸಂಪೂರ್ಣವಾಗಿ ಹೋಲುತ್ತವೆ. ಕೆಂಪು ಬಣ್ಣದ ಮಡಕೆ ಗಳು, ತೆಳುಗೆಂಪು ಬಣ್ಣದ ಮಡಕೆಗಳು ಹಾಗೂ ಕೆಂಪು ಲೇಪಿತ ಮಡಕೆಗಳು, ಕಪ್ಪು ಬಣ್ಣದ ಮಡಕೆಗಳು ಕಂಡು ಬಂದಿವೆ.

ಅರಸಿನಗುಪ್ಪೆಯಲ್ಲಿ ದೊರೆತ ಮಡಕೆಗಳು ಹೆಗ್ಗಡೆಹಳ್ಳಿಯ ಉತ್ಖನನ ದಲ್ಲಿ ದೊರೆತ ಮಡಕೆಗಳನ್ನು ಸಂಪೂರ್ಣವಾಗಿ ಹೋಲುವುದರಿಂದ, ಹೆಗ್ಗಡೆಹಳ್ಳಿಯ ಕಾಲಮಾನವನ್ನೇ ಅರಸಿನಗುಪ್ಪೆ ಸಮಾಧಿಗಳಿಗೆ ಅನ್ವಯಿಸ ಬಹುದು. ಹೆಗ್ಗಡೆಹಳ್ಳಿ ಬೃಹತ್‌ಶಿಲಾ ಯುಗದ ಸಮಾಧಿಗಳ ಕಾಲವನ್ನು ಕ್ರಿ.ಪೂ: 1200– 800 ಅಥವಾ ಕ್ರಿ.ಪೂ: 1000– 600 ಎಂದು ನಿರ್ಧರಿ ಸಲಾಗಿದೆ. ಅರಸಿನಗುಪ್ಪೆ ಸಮಾಧಿಗಳು ಸರಿ ಸಮಾರು ಇದೇ ಕಾಲಕ್ಕೆ ಸೇರಿದ ಸಮಾಧಿಗಳೆಂದು ಪರಿಗಣಿಸಬಹುದು.

ಅರಸಿನಗುಪ್ಪೆ ಮಂಜುನಾಥ ದೇವಾಲಯದ ಜೀರ್ಣೋದ್ಧಾರ ಸಮಿತಿ ಮುಖ್ಯಸ್ಥ ನಾಪಂಡ ಮುತ್ತಪ್ಪ ಮತ್ತು ಮುದ್ದಪ್ಪ ಸಹೋದರರು, ಸಿದ್ದ ಮಠದ ರಾಜೇಶ್ ನಾಥ್‌ಜೀ ಅವರ ಕೋರಿಕೆ ಮೇರೆಗೆ ಪುರಾತತ್ವ ಅನ್ವೇಷಣೆ ಕೈಗೊಳ್ಳಲಾಗಿತ್ತು. ಶೀಘ್ರವೇ ಸರ್ಕಾರದ ಅನುಮತಿ ಪಡೆದು ವಿಭಾಗದ ವತಿಯಿಂದ ಉತ್ಖನನ ಮಾಡಲು ಉದ್ದೇಶಿಸಲಾಗಿದೆ ಎಂದು ಪ್ರೊ.ಟಿ. ಮುರುಗೇಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊಬೈಲ್‌: 9482 52 0933 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.