ADVERTISEMENT

ಶ್ರದ್ಧಾಭಕ್ತಿ ಮೆರೆದ ಪೊಮ್ಮಂಗಲ ಉತ್ಸವ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2012, 7:50 IST
Last Updated 17 ಏಪ್ರಿಲ್ 2012, 7:50 IST

ಗೋಣಿಕೊಪ್ಪಲು: ಪರಸ್ಪರ ವಧು-ವರರ ವೇಷ ಬದಲಾಯಿಸಿ ಬಾಲಕ ಮತ್ತು ಬಾಲಕಿಯರನ್ನು ವಿವಾಹ ಮಾಡುವ ವಿಶಿಷ್ಟ ಪೊಮ್ಮಂಗಲ ಹಬ್ಬ ಈಚೆಗೆ ಬಿರುನಾಣಿಯಲ್ಲಿ ಜರುಗಿತು.

ಬಿರುನಾಣಿಯ ನೆಲ್ಲೆರ ಸೂರಜ್ ಜ್ಯೋತಿ ಅವರ ಮನೆಯಲ್ಲಿ ಈ ಉತ್ಸವವನ್ನು ಆಚರಿಸಲಾಯಿತು. ಮನೆಯಲ್ಲಿ ಮಕ್ಕಳಿಗೆ ಹುಷಾರು ಇರದಿದ್ದರೆ ಪೋಷಕರು ದೇವರಿಗೆ ಹರಕೆ ಕಟ್ಟಿಕೊಳ್ಳುವ ಸಂಪ್ರದಾಯ ಬಹಳ ಹಿಂದಿನಿಂದಲೂ ಬೆಳೆದುಕೊಂಡು ಬಂದಿದೆ. ಅದರಂತೆ ನೆಲ್ಲೆರ ಜ್ಯೋತಿ ತಮ್ಮ ಮಕ್ಕಳಿಗೆ ಹರಕೆ ಹೊತ್ತಿದ್ದರು. ಇದನ್ನು ಶಾಸ್ತ್ರೋಕ್ತವಾಗಿ ಮಾಡುವ ಮೂಲಕ ಹರಕೆ ತೀರಿಸಿದರು.

ಗ್ರಾಮದ ಪುತ್ತು ಭಗವತಿ ದೇವಸ್ಥಾನದ ಹಬ್ಬದಲ್ಲಿ ನೆರಪು ದಿವಸ ಪೊಮ್ಮಂಗಲ ಎಂಬ ವಿಶಿಷ್ಟ ಶಾಸ್ತ್ರವನ್ನು ತೀರಿಸಲಾಗುತ್ತದೆ. ಹರಕೆ ಹೊತ್ತವರು ತಮ್ಮ ಮಕ್ಕಳಿಗೆ  ಕೊಡವ ಜನಾಂಗದ ಸಂಪ್ರದಾಯದಂತೆ ಮದುವೆ ಮಾಡಿದರು. ಹರಕೆ ಸಂದರ್ಭದಲ್ಲಿ ಮದುವೆಯಲ್ಲಿ ಅನುಸರಿಸುವ ಎಲ್ಲ ಸಂಪ್ರದಾಯಗಳನ್ನು ಚಾಚೂ ತಪ್ಪದೆ ಪಾಲಿಸಲಾಯಿತು. ರಾತ್ರಿ ಮತ್ತು ಹಗಲು ಪೂರ್ಣವಾಗಿ ಈ ಹಬ್ಬ ಜರುಗಿತು. ಕೇರಳದಿಂದ ಬಂದು ನೆಲೆ ನಿಂತಿದೆ ಎಂದು ಹೇಳಲಾಗುವ ಭಗವತಿ ದೇವರು ಮಕ್ಕಳ ಎಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ಎಂಬ ನಂಬಿಕೆ ಬಹಳ ಹಿಂದಿನಿಂದಲೂ ಬಲವಾಗಿ ಬೆಳೆದು ಬಂದಿದೆ.

ಈ ನಂಬಿಕೆ ಇರುವ ಹಿರಿಯರು ಪ್ರತಿವರ್ಷ ಹರಕೆ ಹೊತ್ತು ಬೇಸಿಗೆಯಲ್ಲಿ ಹಬ್ಬ ಆಚರಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.