ವಿರಾಜಪೇಟೆ: ಐತಿಹಾಸಿಕ ಹಿನ್ನೆಲೆ ಹೊಂದಿರುವ ಸಮೀಪದ ಕಾಕೋಟುಪರಂಬುವಿನ ಕಾಲಭೈರವ ದೇವರ ಉತ್ಸವ ಶ್ರದ್ಧಾ-ಭಕ್ತಿಯಿಂದ ಮಂಗಳವಾರ ನಡೆಯಿತು.
ಸೋಮವಾರ ಮಧ್ಯಾಹ್ನದ ನಂತರ ಮರತ ತೆರೆ ಹಾಗೂ ಮುಡಿ ತೆರೆ ನಡೆಯಿತು. ನಂತರ ರಾತ್ರಿ ದೇವಾಲಯದ ತಕ್ಕ ಮುಖ್ಯಸ್ಥರಾದ ತೋಣೂರು ಕೇರಿಯ ಅಮ್ಮಂಡಿರ ಕುಟುಂಬದಿಂದ ದೇವರ ಭಂಡಾರ ಬಂದ ನಂತರ ದೇವರಿಗೆ ಶೃಂಗಾರ ಮಾಡಲಾಯಿತು. ಮುಂಜಾನೆಯೆೇ ಹೆಮ್ಮಾಡು, ಪಾಂಡಿಮಾಡು, ಮುಗೂರು ಹಾಗೂ ತೋಣೂರು ಈ ನಾಲ್ಕು ಕೇರಿಯ ಮಂದಿ ಬಂದು ಅಧಿಕ ಸಂಖ್ಯೆಯಲ್ಲಿ ಸೇರಿದ್ದರು. ನಂತರ ಸಾಂಪ್ರದಾಯಿಕ ಕಾರ್ಯಕ್ರಮಗಳು ಜರುಗಿತು.
ಮಂಗಳವಾರ ಅಂದರೆ ಎರಡನೆ ದಿನ ಬೆಳಿಗ್ಗೆ ಬೊಳ್ಕಾಟ್, ಚಂಡೆವಾದ್ಯ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನದ ನಂತರ ಮೂಗೂರು ಕೇರಿಯಿಂದ ದೇವರ ಕೊಡೆ, ಪಾಂಡಿಮಾಡು ಕೇರಿಯಿಂದ ದೇವರ ಚೌರಿ ಹಾಗೂ ಪೆಮ್ಮಾಡು ಕೇರಿಯಿಂದ ದೇವರ ಬೆತ್ತದ ಕುದುರೆ ತಂದು ದೇವಾಲಯಕ್ಕೆ ಒಪ್ಪಿಸಿ ದೇವರ ದರ್ಶನ ಪಡೆಯಲಾಯಿತು.
ಸಂಜೆ ದೇವರ ಉತ್ಸವ ಮೂರ್ತಿಯನ್ನು ಹೊತ್ತು ದೇವಾಲಯದ ಪಕ್ಕದಲ್ಲಿಯೇ ಇರುವ ಅಶ್ವಥ ಮರದ ಸುತ್ತ ಪ್ರದಕ್ಷಿಣೆ ಹಾಕಲಾಯಿತು. ದೇವರ ತಡುಂಬನ್ನು ದೇವಾಲಯದ ಅನತಿ ದೂರದಲ್ಲಿಯೇ ವೀಕ್ಷಿಸುತ್ತಿದ್ದ ಚಾಮುಂಡಿ ದೇವರ 2 ಕೋಲಗಳು ಪ್ರತಿ ವರ್ಷದಂತೆ ಓಡಿ ಬಂದು ದೇವರನ್ನು ಕತ್ತಿಯಿಂದ ಹೊಡೆಯುವ ಮೂಲಕ ಸಂಹಾರ ಮಾಡಲು ಪ್ರಯತ್ನಿಸಿತ್ತಾದರೂ, ಅದಕ್ಕೆ ಅವಕಾಶ ದೊರೆಯಲಿಲ್ಲ. ಈ ಆಚರಣೆಯೂ ಪೂರ್ವಜರ ಕಾಲದಿಂದಲೂ ನಡೆದು ಬಂದಿದೆ.
ಕೊನೆಯ ದಿನ ಅಂದರೆ ಡಿ.17ರಂದು ಬೇತ್ರಿಯ ಕಾವೇರಿ ನದಿಯಲ್ಲಿ ಸಂಜೆ ದೇವರ ಜಳಕ ಮುಂತಾದ ಧಾರ್ಮಿಕ ಕಾರ್ಯಗಳು ನಡೆಯುತ್ತವೆ. ನಂತರ ದೇವಾಲಯದಲ್ಲಿ ನಡೆಯುವ ಪೀಲಿಯಾಟುವಿನೊಂದಿಗೆ ಕಾಕೋಟುಪರಂಬುವಿನ ವಾರ್ಷಿಕ ಹಬ್ಬಕ್ಕೆ ತೆರೆ ಬೀಳಲಿದೆ.
ಪ್ರತಿವರ್ಷವೂ ಡಿಸೆಂಬರ್‌ನಲ್ಲಿ ಈ ಹಬ್ಬ ನಡೆಯುತ್ತದೆ. ವರ್ಷವೂ ದೇವರ ಕಟ್ಟುಬಿದ್ದ 15 ದಿನಗಳಲ್ಲಿ ದೊಡ್ಡಹಬ್ಬ ನಡೆಯುತ್ತದೆ. ದೇವರ ಕಟ್ಟುಬಿದ್ದ ದಿನದಿಂದ ಹಬ್ಬ ಕಳೆಯುವವರೆಗೂ ಊರಿನಲ್ಲಿ ಯಾರು ಮಧುಮಾಂಸ ಉಪಯೋಗಿಸುವುದಿಲ್ಲ.
ಜಿಲ್ಲೆಯ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಕಾಕೋಟುಪರಂಬು ಹಬ್ಬವನ್ನು ಎಲ್ಲಾ ಜನಾಂಗದವರು ಆಚರಿಸುತ್ತಾರೆ. 15 ದಿನಗಳ ಕಾಲ ಕಟ್ಟುಪಾಡುಗಳೊಂದಿಗೆ ಆಚರಿಸಲಾಗುವ ಈ ಹಬ್ಬದಲ್ಲಿ ಸಾವಿರಾರು ಭಕ್ತರು ಕೊಡವ ಸಾಂಪ್ರದಾಯಿಕ ಉಡುಪಿನೊಂದಿಗೆ ಪಾಲ್ಗೊಳ್ಳುತ್ತಾರೆ. ಹಿಂದೆ ಕಾಕೋಟುಪರಂಬು ಹಬ್ಬದಲ್ಲಿ ವಧು ವರರ ಅನ್ವೇಷಣೆ ಕೂಡ ನಡೆಯತ್ತಿತ್ತು ಎಂದು ಹೇಳಲಾಗುತ್ತಿದೆ. ಊರಿನಿಂದ ಉದ್ಯೋಗ ಅರಸಿ ಹೊರಗೆ ಹೋದವರು, ಮದುವೆಯಾಗಿ ಪರವೂರಿನಲ್ಲಿರುವ ಹೆಣ್ಣು ಮಕ್ಕಳು ಹಾಗೂ ಬಂಧು-ಬಳಗದವರು ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.