ADVERTISEMENT

ಶ್ರದ್ಧಾ-ಭಕ್ತಿಯಿಂದ ಶಿವರಾತ್ರಿ ಆಚರಣೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2011, 6:05 IST
Last Updated 3 ಮಾರ್ಚ್ 2011, 6:05 IST

ಮಡಿಕೇರಿ: ಜಿಲ್ಲೆಯಾದ್ಯಂತ ಶಿವರಾತ್ರಿ ಹಬ್ಬವನ್ನು ಬುಧವಾರ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು. ಹಬ್ಬದ ಅಂಗವಾಗಿ ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಭಜನೆ, ಹೋಮ-ಹವನ ಇತ್ಯಾದಿ ಪೂಜಾ ಕೈಂಕರ್ಯಗಳು ನೆರವೇರಿದವು. ಇತಿಹಾಸ ಪ್ರಸಿದ್ಧ ಮಡಿಕೇರಿಯ ಓಂಕಾರೇಶ್ವರ ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ಶಿವನಿಗೆ ವಿಶೇಷ ಪೂಜೆ, ಪ್ರಾರ್ಥನೆ ನಡೆಯಿತು. ಶತರುದ್ರ ಹೋಮ, ರುದ್ರಾಭಿಷೇಕ, ಬಿಲ್ವಪತ್ರೆ ಅರ್ಚನೆ, ಮಂತ್ರ ಪಠಣ, ವಿಶೇಷ ಭಜನೆ ಹಾಗೂ ಪೂಜೆ ಜರುಗಿತು. ಮಹಾಮಂಗಳಾರತಿ ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು.

ಮೇಕೇರಿಯ ಗೌರಿಶಂಕರ ದೇವಾಲಯದಲ್ಲಿಯೂ ಹೋಮ-ಹವನಾದಿ ವಿಶೇಷ ಪೂಜೆ ಜರುಗಿತು. ಮೇಕೇರಿಯ ಗ್ರಾಮಸ್ಥರು ಹೊರೆಕಾಣಿಕೆ ರೂಪದಲ್ಲಿ ದೇವರಿಗೆ ಪೂಜೆ ಸಾಮಗ್ರಿ ಹಾಗೂ ಪ್ರಸಾದ ಪದಾರ್ಥಗಳನ್ನು ಕಿರುಕಾಣಿಕೆಯಾಗಿ ಸಮರ್ಪಿಸಿದರು. ಕಂಬಿಬಾಣೆಯ ವಿಶ್ವನಾಥ ದೇವಾಲಯದಲ್ಲಿ ಮಹಾಶಿವರಾತ್ರಿ ಹಾಗೂ ವಾರ್ಷಿಕ ಮಹಾಪೂಜೆ ಅಂಗವಾಗಿ ವಿಶೇಷ ಕಾರ್ಯಕ್ರಮಗಳು ಜರುಗಿದವು. ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಹೋಮ-ಹವನಾದಿ ವಿಶೇಷ ಪೂಜೆಗೆ ಶಿವರಾತ್ರಿಯಂದು ತೆರೆ ಬಿದ್ದಿತು. ಆನೆಯ ಮೂಲಕ ದೇವರ ಮೆರವಣಿಗೆ ನಡೆಸಲಾಯಿತು. ವಿಶ್ವನಾಥನಿಗೆ ಬಿಲ್ವಪತ್ರೆ ಅರ್ಚನೆ, ಅಭಿಷೇಕ, ವಿವಿಧ ವಿಧಿ-ವಿಧಾನ ಪೂಜೆಗಳು ಜರುಗಿದವು. ನೆರೆದಿದ್ದ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.