ADVERTISEMENT

ಸಂತಸದಾಯಕ ಕಲಿಕೆಗೆ ಬೇಸಿಗೆ ಶಿಬಿರ

ನಾಪೋಕ್ಲು: ಗ್ರಾಮೀಣ ಭಾಗದ ಮಕ್ಕಳಿಗೆ ಕ್ರೀಡಾ ತರಬೇತಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 9:44 IST
Last Updated 21 ಏಪ್ರಿಲ್ 2018, 9:44 IST
ನಾಪೋಕ್ಲು ಸಮೀಪದ ಮೂರ್ನಾಡು ವಿದ್ಯಾಸಂಸ್ಥೆಯ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡೆ ಮತ್ತು ಆಟೋಟ ಅಕಾಡೆಮಿ ವತಿಯಿಂದ ಏರ್ಪಡಿಸಲಾಗಿರುವ ಬೇಸಿಗೆ ತರಬೇತಿ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು
ನಾಪೋಕ್ಲು ಸಮೀಪದ ಮೂರ್ನಾಡು ವಿದ್ಯಾಸಂಸ್ಥೆಯ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡೆ ಮತ್ತು ಆಟೋಟ ಅಕಾಡೆಮಿ ವತಿಯಿಂದ ಏರ್ಪಡಿಸಲಾಗಿರುವ ಬೇಸಿಗೆ ತರಬೇತಿ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು   

ನಾಪೋಕ್ಲು: ಹಾಕಿ ಆಟದ ತವರೂರು ಕೊಡಗು ಜಿಲ್ಲೆಯಲ್ಲಿ ಮಕ್ಕಳಿಗೆ ಹಾಕಿ ತರಬೇತಿ ನೀಡದಿದ್ದರೆ ಹೇಗೆ?. ಈ ಕಲ್ಪನೆ ತರಬೇತುದಾರ ಕಲಿಯಂಡ ಸಾಬಾ ಅಯ್ಯಣ್ಣ ಅವರ ಮನಸ್ಸಿನಲ್ಲಿ ಮೂಡಿದ್ದೆ ತಡ ಸಮಾನ ಮನಸ್ಕರೊಡಗೂಡಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕ್ರೀಡಾ ಅಕಾಡೆಮಿಯನ್ನು ಸ್ಥಾಪಿಸಿದರು.

ಈ ಅಕಾಡೆಮಿ ಹದಿನೆಂಟು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಹಾಕಿ ಆಟದ ತರಬೇತಿಯನ್ನು ಬೇಸಿಗೆ ಶಿಬಿರದ ನೆಪದಲ್ಲಿ ನೀಡುತ್ತಿದೆ. ಪ್ರಸಕ್ತ ವರ್ಷ ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡಿದ್ದು, ಹತ್ತು ಹಲವು ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.

ಪ್ರತಿದಿನ ಬೆಳಿಗ್ಗೆ 7 ಗಂಟೆಯಿಂದ 9 ಗಂಟೆವರೆಗೆ ನಡೆಯುವ ಶಿಬಿರದಲ್ಲಿ ಅನುಭವಿ ತರಬೇತುದಾರರು ದೈಹಿಕ ಕಸರತ್ತು ನಡೆಸುತ್ತಿದ್ದು, ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಿದ್ದಾರೆ. ಶಿಬಿರದಲ್ಲಿ ಹಾಕಿ ಮತ್ರವಲ್ಲ, ವ್ಯಾಯಾಮ, ಕ್ರೀಡಾ ಚಟುವಟಿಕೆಗಳು, ಯೋಗ ಮತ್ತು ಕ್ರಿಕೆಟ್ ತರಬೇತಿಯನ್ನು ಸಹ ನೀಡಲಾಗುತ್ತದೆ ಎಂದು ಕ್ರೀಡಾ ಅಕಾಡೆಮಿ ಅಧ್ಯಕ್ಷ ಕಲಿಯಂಡ ಸಾಬು ಅಯ್ಯಣ್ಣ ತಿಳಿಸಿದರು.

ADVERTISEMENT

ಶಿಬಿರದಲ್ಲಿ ಸಾಂಸ್ಕೃತಿಕ ಚಟುವಟಿಕಗಳಿಗೂ ಮಹತ್ವ ನೀಡಲಾಗುತ್ತಿದ್ದು, ಉಮ್ಮತ್ತಾಟ್‌, ಬೊಳಕಾಟ್‌, ಕೋಲಾಟ್‌ ಮತ್ತಿತರ ನೃತ್ಯಪ್ರಕಾರಗಳನ್ನು ಕಲಿಸಲಾಗುತ್ತಿದೆ. ಪ್ರತಿವರ್ಷ ಸಮೀಪದ ಶಿಖರವೊಂದಕ್ಕೆ ವಿದ್ಯಾರ್ಥಿಗಳನ್ನು ಚಾರಣಕ್ಕೆ ಕರೆದೊಯ್ಯಲಾಗುತ್ತಿದೆ.

‘ಪ್ರಸಕ್ತ ವರ್ಷ 74 ವಿದ್ಯಾರ್ಥಿಗಳು ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಶಿಬಿರದಿಂದ ಗ್ರಾಮೀಣ ಭಾಗದ ಮಕ್ಕಳಿಗೆ ಹೆಚ್ಚು ಪ್ರಯೋಜನವಾಗುತ್ತಿದೆ’ ಎಂದು ಬಲ್ಲಮಾವಟಿ ಗ್ರಾಮದ ಪೋಷಕ ಬೊಟ್ಟೋಳಂಡ ಸದಾ ಅಭಿಪ್ರಾಯಪಟ್ಟರು.

ಮೂರ್ನಾಡಿನಲ್ಲೂ ಶಿಬಿರ: ಸಮೀಪದ ಮೂರ್ನಾಡು ವಿದ್ಯಾಸಂಸ್ಥೆಯ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡೆ ಮತ್ತು ಆಟೋಟ ಅಕಾಡೆಮಿ ವತಿಯಿಂದಲೂ ಹಲವು ವರ್ಷಗಳಿಂದ ಬೇಸಿಗೆ ತರಬೇತಿ ಶಿಬಿರ ಆಯೋಜಿಸಲಾಗುತ್ತಿದೆ. ವಿದ್ಯಾಸಂಸ್ಥೆಯ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಬೆಳಿಗ್ಗೆ 7 ಗಂಟೆಯಿಂದ 9ಗಂಟೆವರೆಗೆ ನಡೆಯುವ ಶಿಬಿರದಲ್ಲಿ ಹಾಕಿ ಮತ್ತು ಕ್ರಿಕೆಟ್ ತರಬೇತಿ ನೀಡಲಾಗುತ್ತಿದೆ.

ಗ್ರಾಮೀಣ ಭಾಗದ ಹೆಚ್ಚಿನ ವಿದ್ಯಾರ್ಥಿಗಳು ತರಬೇತಿಯಲ್ಲಿ ತೊಡಗಿಕೊಂಡಿದ್ದಾರೆ. ಶಿಬಿರದಲ್ಲಿ ವಿವಿಧ ಕ್ರೀಡಾಪಟುಗಳಿಂದ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗುತ್ತದೆ ಎಂದು ದೈಹಿಕ ಶಿಕ್ಷಣ ಶಿಕ್ಷಕ ಅವರೆಮಾದಂಡ ಗಣೇಶ್ ಹೇಳಿದರು.

ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರಗಳನ್ನು ವಿದ್ಯಾರ್ಥಿಗಳು ರಜೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.